ಬೀಳಗಿ ತಾಲೂಕಿನ ರಬಕವಿ ಗ್ರಾಮದ ಹೊರವಲಯದಲ್ಲಿ ಬಹಿರ್ದೆಸೆಗೆ ಹೋಗಿದ್ದ ಮಹಿಳೆ ಕೊಲೆ

Sangeeta Harijan
ಸಂಗೀತಾ ಹರಿಜನ
Published on

ಬಾಗಲಕೋಟೆ: ಬಹಿರ್ದೆಸೆಗೆಂದು ಹೋಗಿದ್ದ ಮಹಿಳೆಯನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ಬೀಳಗಿ ತಾಲೂಕಿನ ರಬಕವಿ ಗ್ರಾಮದ ಹೊರವಲಯದ ಜಮೀನೊಂದರಲ್ಲಿ ಗುರುವಾರ ರಾತ್ರಿ ಈ ಘಟನೆ ನಡೆದಿದ್ದು, ಸಂಗೀತಾ ಹರಿಜನ (36) ಕೊಲೆಯಾಗಿದ್ದಾಳೆ. ಮಾರಕಾಸ್ತ್ರಗಳಿಂದ ಕುತ್ತಿಗೆ ಸೇರಿ ದೇಹದ ವಿವಿಧ ಭಾಗಗಳಲ್ಲಿ ಕೊಚ್ಚಿ ಕೊಲೆ ಮಾಡಲಾಗಿದೆ.

ಕೊಲೆಗೆ ಕಾರಣ ತಿಳಿದು ಬಂದಿಲ್ಲ. ಕೊಲೆ ಯಾರು ಮಾಡಿದ್ದಾರೆ ಎನ್ನುವುದು ಪತ್ತೆ ಆಗಿಲ್ಲ. ಪ್ರಾಥಮಿಕ ಮಾಹಿತಿಯಂತೆ ಕೊಲೆಗೆ ಅನೈತಿಕ ಸಂಬಂಧ ಕಾರಣ ಇರಬಹುದು ಎಂದು ತಿಳಿದು ಬಂದಿದೆ. ಆದಾಗ್ಯೂ ಎಲ್ಲ ಆಯಾಮಗಳಿಂದ ತನಿಖೆ ಮುಂದುವರೆಸಿದ್ದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಯಪ್ರಕಾಶ ತಿಳಿಸಿದ್ದಾರೆ.

ಕೊಲೆಯಾಗಿರುವ ಮಹಿಳೆ ಸಂಗೀತಾ ಅವರ ಪತಿ ಕಳೆದ ವರ್ಷ ಕರೊನಾದಿಂದ ಸಾವನ್ನಪ್ಪಿದ್ದ. ಮೂರು ಮಕ್ಕಳು ಇದ್ದಾರೆ. ಜಾತ್ರೆಗೆಂದು ತವರು ಮನೆ ತೇರದಾಳಕ್ಕೆ ತೆರಳಿದ್ದ ಸಂಗೀತಾ, ಗುರುವಾರ ಗಲಗಲಿ ಸಂತೆಗೆ ಹೋಗಿ ಬಂದಿದ್ದಳು. ರಾತ್ರಿ ಬಹಿರ್ದೆಸೆಗೆ ಹೋಗಿ ಬರುವುದಾಗಿ ಹೇಳಿದ್ದ ಸಂಗೀತಾ ಒಂದು ಗಂಟೆಯಾದರೂ ಮನೆಗೆ ಬಾರದ್ದರಿಂದ ಮಕ್ಕಳು ತಾಯಿಯನ್ನು ಹುಡುಕುತ್ತಿದ್ದಾಗ ಜಮೀನಿನಲ್ಲಿ ಕೊಲೆಯಾಗಿ ಬಿದ್ದಿರುವುದು ಕಂಡು ಬಂದಿದೆ.

ಸ್ಥಳಕ್ಕೆ ಬೀಳಗಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬೀಳಗಿ ಆಸ್ಪತ್ರೆಗೆ ಎಸ್ಪಿ ಜಯಪ್ರಕಾಶ ಭೇಟಿ ನೀಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಶಯದ ಮೇರೆಗೆ ಇಬ್ಬರನ್ನು ವಿಚಾರಣೆ ಮಾಡಲಾಗುತ್ತಿದೆ. ಶೀಘ್ರದಲ್ಲಿ ಕೊಲೆ ಆರೋಪಿಗಳು ಪತ್ತೆ ಆಗಲಿದ್ದಾರೆ ಎಂದು ಎಸ್ಪಿ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net