ಮಹಿಳೆ ಸಾಮರ್ಥ್ಯ ತೋರುವ ಅಗತ್ಯವಿದೆ

IMG-20241004-WA0008
Published on


ಅರಕಲಗೂಡು : ಮಹಿಳೆಯರು ನಿರಂತರ ಶೋಷಣೆಯಿಂದ ಮುಕ್ತರಾಗಲು ತಮ್ಮ ಸಾಮರ್ಥ್ಯ ಏನೆಂಬುದನ್ನು ತೋರಿಸಿಕೊಡುವ ಕಾರ್ಯ ಮಾಡಬೇಕಿದೆ ಎಂದು ತಹಸೀಲ್ದಾರ್ ಕೆ.ಸಿ. ಸೌಮ್ಯ ತಿಳಿಸಿದರು.


ದಸರಾ ಉತ್ಸವದ ಪ್ರಯುಕ್ತ ಪಟ್ಟಣದಲ್ಲಿ ಶುಕ್ರವಾರ ನಡೆದ ಮಹಿಳಾ ದಸರಾ ಕಾರ್ಯಕ್ರಮದಲ್ಲಿ ಮಾತನಾಡಿ, ಮಹಿಳೆಯರ ಮೇಲಿನ ಶೋಷಣೆ ಇಂದು ನಿನ್ನೆಯದಲ್ಲ, ಇದು ರಾಮಾಯಣ, ಮಹಾಭಾರತದ ಕಾಲದಿಂದಲೂ ನಡೆದು ಬಂದಿದೆ. ಮಹಿಳೆಯರಿಗೆ ಹೆಚ್ಚಿನ ಅವಕಾಶಗಳು ಲಭ್ಯವಿದ್ದು, ಅದನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು ಎಂದರು.


ಭಾರತೀಯ ಸೇನೆಯಲ್ಲಿ ಕರ್ನಲ್ ಆಗಿ ಸೇವೆ ಸಲ್ಲಿಸುತ್ತಿರುವ ಶ್ವೇತಾ ಮಂಜುನಾಥ್ ಮಾತನಾಡಿ, ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರು ತಮ್ಮ ಸಾಮರ್ಥ್ಯ ಏನೆಂಬುದನ್ನು ತೋರಿಸಿದ್ದರೂ ಇನ್ನೂ ತಾರತಮ್ಯ ನಿಂತಿಲ್ಲ. ಕುಟುಂಬದವರು ಹೆಣ್ಣುಮಕ್ಕಳ ಸಾಧನೆಯನ್ನು ಗುರುತಿಸಿ ಶೈಕ್ಷಣಿಕ ಮತ್ತು ಆರ್ಥಿಕವಾಗಿ ಸಬಲರಾಗಲು ಪ್ರೋತ್ಸಾಹಿಸಬೇಕು ಎಂದರು.


ತಾಲೂಕು ಆರೋಗ್ಯಾಧಿಕಾರಿ ಡಾ. ಪುಷ್ಪಲತಾ ಮಾತನಾಡಿ, ಹೆಣ್ಣು ಭ್ರೂಣ ಹತ್ಯೆಯ ಪರಿಣಾಮ ಇಂದು ವಿವಾಹಕ್ಕೆ ಹೆಣ್ಣು ಸಿಕ್ಕದೆ ಪರಿತಪಿಸುವ ಸ್ಥಿತಿ ಎದುರಾಗಿದೆ. ಇದರಿಂದ ಎಚ್ಚೆತ್ತುಕೊಳ್ಳುವ ಬದಲು ಇಂದಿಗೂ ಹೆಣ್ಣು ಭ್ರೂಣ ಹತ್ಯೆ ಮುಂದುವರೆದಿದೆ. ಇದರಲ್ಲಿ ಮಹಿಳೆಯರೂ ಪಾಲ್ಗೊಳ್ಳುತ್ತಿರುವುದು ನೋವಿನ ಸಂಗತಿ. ಮಹಿಳೆಯರು ತಮ್ಮ ಆರೋಗ್ಯದ ಕುರಿತು ಹೆಚ್ಚಿನ ಕಾಳಜಿ ವಹಿಸುವುದು ಅಗತ್ಯ ಎಂದರು.


ಕ್ಯಾನ್ಸರ್ ತಜ್ಞ ಡಾ. ಸಿ.ಎನ್. ಜಗದೀಶ್, ಮಹಿಳೆಯರನ್ನು ಕಾಡುವ ಕ್ಯಾನ್ಸರ್ ವಿಧಗಳು, ಚಿಕಿತ್ಸೆ ಮತ್ತು ಮುನ್ನೆಚ್ಚರಿಕೆ ಕ್ರಮಗಳ ಕುರಿತು ಮಾಹಿತಿ ನೀಡಿದರು.


ಪಟ್ಟಣ ಪಂಚಾಯಿತಿ ಸದಸ್ಯೆ ಲಕ್ಷ್ಮೀ ಲೋಕೇಶ್, ದಸರಾ ಉತ್ಸವ ಸಮಿತಿ ಕಾರ್ಯದರ್ಶಿ ರವಿಕುಮಾರ್ ಮಾತನಾಡಿದರು. ಪ.ಪಂ. ಅಧ್ಯಕ್ಷ ಎಸ್.ಎಸ್. ಪ್ರದೀಪ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಸುಬಾನ್ ಷರೀಪ್, ಸದಸ್ಯೆ ಅನುಷಾ ಹರೀಶ್, ಸಿಡಿಪಿಒ ಎಂ.ಪಿ. ವೆಂಕಟೇಶ್, ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಬಿಂದು, ರಾಕೇಶ್, ಅಂಗನವಾಡಿ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ಅಂಬಿಕಾ, ಆಶಾಮೆಂಟರ್ ಕವಿತಾ, ದಸರಾ ಸಮಿತಿ ಸದಸ್ಯರಾದ ಎ.ಎಂ.ರಘು, ಭಾಸ್ಕರ್, ಮಂಜುನಾಥ್, ತುಳಸಿರಾಮ್ ಉಪಸ್ಥಿತರಿದ್ದರು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net