

ಬೆಂಗಳೂರು: ತೊಡೆ ಹಾಗೂ ಪಕ್ಕೆಲುಬಿಗೆ ಸುತ್ತಿಗೆಯಿಂದ ಹೊಡೆದು ಪ್ರೇಯಸಿಯನ್ನು ಕೊಂದ ಪ್ರಿಯಕರ, ಬಳಿಕ ಡೆಡ್ ಬಾಡಿಗೆ ಸ್ನಾನ ಮಾಡಿಸಿ ಇಡೀ ರಾತ್ರಿ ಅದರ ಜತೆಗೇ ಇದ್ದ. ಬೆಳಗಾಗುತ್ತಿದ್ದಂತೆ ಆಕೆಗೆ ಅನಾರೋಗ್ಯ ಕಾಣಿಸಿಕೊಂಡಿದೆ ಎಂದು ಆಸ್ಪತ್ರೆಗೆ ಸಾಗಿಸುವ ನಾಟಕವಾಡಿದ್ದ...
ಇಂತಹ ಅಮಾನುಷ ಘಟನೆ ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮಂಜುಳಾ ಕೊಲೆಯಾದಾಕೆ. ಈಕೆಯ ಪ್ರಿಯಕರ ಮಳ್ಳವಳಿ ಮೂಲದ ಮಂಜುನಾಥ್ ಕೊಲೆ ಆರೋಪಿ. ಬೆಂಗಳೂರಲ್ಲಿ ಹಲವು ವರ್ಷಗಳಿಂದ ಸೆಂಟ್ರಿಂಗ್ ಕೆಲಸ ಮಾಡಿಕೊಂದ್ದ ಮಂಜುನಾಥ್ ಇನ್ನೂ ಮದುವೆ ಆಗಿರಲಿಲ್ಲ. ಆದರೆ, ಕೆಲವರೊಂದಿಗೆ ಅಕ್ರಮ ಸಂಬಂಧ ಬೆಳೆಸಿಕೊಂಡಿದ್ದ. ವೇಶ್ಯಾವಾಟಿಕೆ ದಂಧೆಯಲ್ಲಿ ಗುರುತಿಸಿಕೊಂಡಿದ್ದ ಮಹಿಳೆಯೊಬ್ಬರ ಸ್ನೇಹಿತೆಯಾಗಿದ್ದ ಮಂಜುಳಾ ಎಂಬಾಕೆಯ ಪರಿಚಯ ಮಂಜುನಾಥ್ಗೆ ಆಗಿತ್ತು. ಇವರಿಬ್ಬರ ನಡುವೆ ಸಲುಗೆ ಬೆಳೆದಿದ್ದು, ಬೀರೇಶ್ವರ ನಗರದಲ್ಲಿ ಬಾಡಿಗೆ ಮನೆಯಲ್ಲಿ ಸಹಬಾಳ್ವೆ ಮಾಡುತ್ತಿದ್ದರು. ಖಾಸಗಿ ಕಂಪನಿಯಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದ ಈಕೆಗೆ ಈಗಾಗಲೇ ಬೇರೊಬ್ಬನೊಂದಿಗೆ ಮದುವೆ ಆಗಿ ಇಬ್ಬರು ಮಕ್ಕಳಿದ್ದಾರೆ. ಆದರೆ, ಕೆಲ ವರ್ಷಗಳ ಹಿಂದೆಯೇ ಮಂಜುಳಾರ ಗಂಡ ನಾಪತ್ತೆಯಾಗಿದ್ದ. ಇನ್ನು ಮಂಜುಳಾರ ಮಕ್ಕಳಿಬ್ಬರಿಗೆ ಸಂಬಂಧಿಕರ ಮನೆಯಲ್ಲಿ ಆಶ್ರಯ ಸಿಕ್ಕಿತ್ತು. ಆದರೆ, ಮಂಜುಳಾರ ದುರ್ನಡತೆಯಿಂದ ಕೋಪಗೊಂಡಿದ್ದ ಕುಟುಂಬಸ್ಥರು ಮತ್ತು ಸಂಬಂಧಿಕರು ದೂರ ಈಕೆಯನ್ನ ಇಟ್ಟಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ಮಂಜುನಾಥ್ ಆಕೆಯನ್ನ ತನ್ನೊಟ್ಟಿಗೆ ಇಟ್ಟುಕೊಂಡಿದ್ದ. ಇವರಿಬ್ಬರೂ ಆರಂಭದಲ್ಲಿ ಅನೋನ್ಯವಾಗಿದ್ದರು.
ಇತ್ತೀಚಿಗೆ ಮಂಜುಳಾರ ನಡತೆ ಮಂಜುನಾಥ್ಗೆ ಅನುಮಾನ ಮೂಡಿತ್ತು. ಬೇರೆಯವರೊಂದಿಗೂ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾಳೆ ಎಂದು ಗಲಾಟೆ ಮಾಡಿದ್ದ. ನಿನ್ನೆ(ಬುಧವಾರ) ರಾತ್ರಿ ಕುಡಿದ ಅಮಲಿನಲ್ಲಿ ಇದೇ ವಿಚಾರಕ್ಕೆ ಮಂಜುಳಾ ಜತೆ ಜಗಳ ಮಾಡಿದ್ದು, ಮನೆಯಲ್ಲಿದ್ದ ಸುತ್ತಿಗೆಯಿಂದ ಆಕೆಯ ತೊಡೆ ಮತ್ತು ಪಕ್ಕೆಲುಬು ಭಾಗಕ್ಕೆ ಹೊಡೆದು ಸಾಯಿಸಿದ್ದ.
ಇದು ಸಹಜ ಸಾವು ಎಂದು ಬಿಂಬಿಸಲು ಪ್ರಿಯತಮೆ ಶವಕ್ಕೆ ರಾತ್ರಿಯೇ ಸ್ನಾನ ಮಾಡಿಸಿ, ಅದರೊಟ್ಟಿಗೆ ಅದೇ ಮನೆಯಲ್ಲಿ ಇಡೀ ರಾತ್ರಿ ಕಳೆದಿದ್ದ. ಇಂದು(ಗುರುವಾರ) ಬೆಳಗ್ಗೆ 'ನನ್ನ ಹೆಂಡತಿ ಅನಾರೋಗ್ಯದಿಂದ ಕುಸಿದು ಬಿದ್ದಿದ್ದಾಳೆ' ಎಂದು ಮನೆ ಮಾಲೀಕರ ಮುಂದೆ ನಾಟಕವಾಡಿ ಶವವನ್ನು ಆಟೋ ಮೂಲಕ ಸ್ಥಳೀಯ ಆಸ್ಪತ್ರೆ ರವಾನಿಸಿದ್ದ. ತಪಾಸಣೆ ನಡೆಸಿದ ವಯದ್ಯರು ಮಂಜುಳಾ ಸತ್ತಿದ್ದಾಳೆ ಎನ್ನುತ್ತಿದ್ದಂತೆ ಶವವನ್ನ ಅಲ್ಲೇ ಬಿಟ್ಟು ಪರಾರಿಯಾಗಿದ್ದ. ಈ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಆರೋಪಿಯನ್ನ ಬಂಧಿಸಿದ್ದಾರೆ.