'ಎಂತಹ ಕೆಲಸವನ್ನೇ ಆಗಲಿ ಸಮರ್ಥವಾಗಿ ನಿಭಾಯಿಸುವ ಶಕ್ತಿ ಮಹಿಳೆಗಿದೆ'

Published on

ಮೈಸೂರು: ಪ್ರತಿಯೊಂದು ಘಟ್ಟದಲ್ಲೂ ಮಹಿಳೆ ತಾನು ಅಬಲೆಯಲ್ಲ, ಸಬಲೆ ಎಂಬುದನ್ನು ಸಾಧಿಸಿ ತೋರಿಸಿದ್ದಾಳೆ. ಎಂತಹ ಕೆಲಸವನ್ನೇ ಆಗಲಿ ಸಮರ್ಥವಾಗಿ ನಿಭಾಯಿಸುವ ಶಕ್ತಿ ಆಕೆಯದು ಎಂದು ಸ್ವಾಮಿ ವಿವೇಕಾನಂದ ಯೂತ್ ಲೀಡರ್‌ಶಿಪ್ ತರಬೇತಿ ಕೇಂದ್ರ(ವಿ-ಲೀಡ್)ನ ನಿರ್ದೇಶಕಿ ಡಾ.ರೇಖಾ ಅಭಿಪ್ರಾಯಪಟ್ಟರು.

ನಗರದ ರುಡ್‌ಸೆಟ್ ಸಂಸ್ಥೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಎನ್‌ಆರ್‌ಎಲ್‌ಎಂ ಯೋಜನೆಯಡಿ ಆಯೋಜಿಸಿದ್ದ ಹತ್ತು ದಿನಗಳ ಅಣಬೆ ಬೇಸಾಯ ತರಬೇತಿ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಆಧುನಿಕ ಯುಗದಲ್ಲಿ ಮಹಿಳೆ ತನ್ನನ್ನು ಎಲ್ಲ ಕಾರ್ಯಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸಾಮರ್ಥ್ಯ, ಪ್ರಾಬಲ್ಯವನ್ನು ಮೆರೆದಿದ್ದಾಳೆ. ಒಳಗಿನ ಹಾಗೂ ಹೊರಗಿನ ಕೆಲಸಗಳೆರಡನ್ನೂ ಶ್ರೇಣೀಕರಿಸದೆ ಸಮಾನ ಆಸಕ್ತಿ, ಸಮಾನ ಪ್ರೀತಿಯಲ್ಲಿ ದಕ್ಷತೆಯಲ್ಲಿ ನಿಭಾಯಿಸುವ ಈ ಗುಣವೇ ಸ್ತ್ರೀಯರಲ್ಲಿರುವ ವಿಶಿಷ್ಟತೆ ಎಂದು ಬಣ್ಣಿಸಿದರು.

ಪ್ರತಿಯೊಂದು ಘಟ್ಟದಲ್ಲೂ ಮಹಿಳೆ ತಾನು ಅಬಲೆಯಲ್ಲ, ಸಬಲೆ ಎಂಬುದನ್ನು ಸಾಧಿಸಿ ತೋರಿಸಿದ್ದಾಳೆ. ಎಂತಹ ಕೆಲಸವನ್ನೇ ಆಗಲಿ ಸಮರ್ಥವಾಗಿ ನಿಭಾಯಿಸುವ ಶಕ್ತಿ ಆಕೆಯದು. ಇದಕ್ಕೆಲ್ಲ ಮೂಲ ಕಾರಣ ಮಹಿಳೆಯಲ್ಲಿರುವ ಮನೋಬಲ. ಮನಸ್ಸೇ ಎಲ್ಲಕ್ಕೂ ಮೂಲ ಎಂದರು.

ಮಹಿಳೆಯರು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸಮತೋಲನವಾಗಿ ಕಾಪಾಡಿಕೊಳ್ಳಬೇಕು. ನಮ್ಮಗಳ ಸಂಕಲ್ಪಶಕ್ತಿಯನ್ನು ದೃಢವಾಗಿರಿಸಿಕೊಂಡು ವೃತ್ತಿಯನ್ನು ಸ್ವಾಭಿಮಾನ ಮತ್ತು ಸ್ವಾವಲಂಬನೆಯಿಂದ ಕಟ್ಟಿಕೊಳ್ಳಿ ಎಂದು ಶಿಬಿರಾರ್ಥಿಗಳಿಗೆ ಸಲಹೆ ನೀಡಿದರು.

ಅಣಬೆ ಬೇಸಾಯ ಇಂದು ಉತ್ತಮ ಬೇಡಿಕೆ ಹಾಗೂ ಹೆಚ್ಚಿನ ಮಾರುಕಟ್ಟೆಯನ್ನು ಹೊಂದಿರುವ ಉದ್ಯೋಗವಾಗಿದ್ದು, ಕೌಶಲಗಳನ್ನು ವೃದ್ಧಿಸಿಕೊಳ್ಳಿರಿ, ಅಣಬೆಯಿಂದ ತಯಾರು ಮಾಡಬಹುದಾದ ಮೌಲ್ಯವರ್ಧಿತ ಉತ್ಪನ್ನಗಳ ಕಡೆಗೆ ಗಮನಹರಿಸಿ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ರುಡ್‌ಸೆಟ್ ಸಂಸ್ಥೆಯ ನಿರ್ದೇಶಕಿ ಕೆ.ಎಸ್. ಸರಿತಾ ಮಾತನಾಡಿ, ಜೀವನದಲ್ಲಿ ಏಳಿಗೆ ಸಾಧಿಸಲು ವೃತ್ತಿ ಕೌಶಲ್ಯಗಳ ಅಭಿವೃದ್ಧಿ ಮಾಡಿಕೊಳ್ಳುವುದು ಮುಖ್ಯ, ವೃತ್ತಿ ಕೌಶಲಗಳ ನೈಪುಣ್ಯ ಸಾಧಿಸಿ ಎಂದು ಸಲಹೆ ನೀಡಿದರು.

ಯಶಸ್ವಿ ಮಹಿಳಾ ಉದ್ಯಮಶೀಲರಾದ ಹುಣಸೂರಿನ ನವಚೇತನಾ ಟ್ರಸ್ಟ್‌ನ ಗಂಗಾ, ಎಚ್.ಡಿ.ಕೋಟೆ ಹ್ಯಾಂಡ್‌ಪೋಸ್ಟ್‌ನ ಪವಿತ್ರಾ, ಚಂದನ ಅವರನ್ನು ಸನ್ಮಾನಿಸಲಾಯಿತು. ಉಪನ್ಯಾಸಕ ಆರ್.ಪಾಲ್‌ರಾಜ್, ಉಪನ್ಯಾಸಕಿ ಲತಾಮಣಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net