

ಕಲಘಟಗಿ: ಕಲಘಟಗಿ- ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿಯ ತಡಸ್ ಕ್ರಾಸ್ ಬಳಿ ಟಾಟಾ ಏಸ್ ಹಾಗೂ ಲಾರಿ ಮಧ್ಯೆ ಡಿಕ್ಕಿ ಸಂಭವಿಸಿ ಒಬ್ಬ ಮಹಿಳೆ ಸ್ಥಳದಲ್ಲಿಯೇ ಮೃತಪಟ್ಟಿದ್ದು ಹಲವರು ಗಾಯಗೊಂಡ ಘಟನೆ ಬುಧವಾರ ಸಂಭವಿಸಿದೆ.
ತಾಲೂಕಿನ ಜಿನ್ನೂರ ಗ್ರಾಮದ ಬಸಮ್ಮ ಮಂಜುನಾಥ ಬಿದರಗಡ್ಡಿ (28) ಮೃತ ದುರ್ದೈವಿ. ಘಟನೆಯಲ್ಲಿ 15 ಮಂದಿ ಗಾಯಗೊಂಡಿದ್ದು ಈ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ಹುಬ್ಬಳ್ಳಿ ಕಿಮ್ಸ್‌ಗೆ ದಾಖಲಿಸಲಾಗಿದೆ.
ತಾರಿಹಾಳದಲ್ಲಿನ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ ತಾಲೂಕಿನ ತಬಕದಹೊನ್ನಳ್ಳಿಯ 9 ಜನ, ಜಿನ್ನೂರಿನ 8 ಜನ ಹಾಗೂ ಮಲಕನಕೊಪ್ಪ ಗ್ರಾಮದ ಒಬ್ಬರು ಸೇರಿ 18 ಮಹಿಳೆಯರು ಟಾಟಾ ಏಸ್ ವಾಹನದಲ್ಲಿ ಪ್ರಯಾಣಿಸುತ್ತಿದ್ದರು. ತಡಸ ಕ್ರಾಸ್ ಬಳಿ ಕೊಪ್ಪಳಕ್ಕೆ ಹೋಗುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ದುರ್ಘಟನೆ ನಡೆದಿದೆ.
ಪೊಲೀಸ್ ಇನ್‌ಸ್ಪೆಕ್ಟರ್ ಶ್ರೀಶೈಲ ಕೌಜಲಗಿ, ಪಿಎಸ್‌ಐ ಬಸವರಾಜ ಯದ್ದಲಗುಡ್ಡ ಹಾಗೂ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಗಾಯಗೊಂಡವರನ್ನು ಆಸ್ಪತ್ರೆಗೆ ರವಾನಿಸಿದರು.
ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಎಸ್.ಪಿ. ಗೋಪಾಲ ಬ್ಯಾಕೋಡ, ಹೆಚ್ಚುವರಿ ಎಸ್.ಪಿ. ನಾರಾಯಣ ಬರಮನಿ, ಡಿವೈಎಸ್‌ಪಿ ಎಂ.ನಾಗರಾಜ ಭೇಟಿ ನೀಡಿ ಪರಿಶೀಲಿಸಿದರು.