

ಸವಣೂರ: ಸಾಲ ಬಾಧೆಯಿಂದ ಮಹಿಳೆ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾದ ಘಟನೆ ಪಟ್ಟಣದಲ್ಲಿ ಸೋಮವಾರ ನಡೆದಿದೆ.
ಪಟ್ಟಣದ ನಿವಾಸಿ ಮಂಜುಳಾ ಮೋಹನಚಂದ ಜೈನ್ (57) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಮೃತ ಮಹಿಳೆ ಸ್ಥಳೀಯವಾಗಿ ಲೇವಾದೇವಿ ವ್ಯವಹಾರ ಮಾಡಿಕೊಂಡಿದ್ದರು. ನೀಡಿದ ಹಣ ವಸೂಲಿಯಾಗದ ಹಿನ್ನೆಲೆಯಲ್ಲಿ ಸ್ಥಳೀಯ ಸಂಘ-ಸಂಸ್ಥೆಗಳಲ್ಲಿ ಸಾಲ ಮಾಡಿದ್ದರು ಎನ್ನಲಾಗಿದೆ. ಜು. 22ರಂದು ಎಲ್ಲರಿಗೂ ಹಣ ವಾಪಸ್ ಮಾಡುವುದಾಗಿ ತಿಳಿಸಿದ್ದ ಮಹಿಳೆ, ಪಟ್ಟಣದ ಅಲಿಖಾನ್ ಕೆರೆಗೆ ಶುಕ್ರವಾರ ಹಾಗಿ ಆತ್ಮಹತ್ಯೆಗೆ ಶರಣಾಗಿರಬಹುದು ಎನ್ನಲಾಗಿದೆ.
ಮೃತ ಮಹಿಳೆ ಶುಕ್ರವಾರ ಕಾಣೆಯಾಗಿದ್ದಾಳೆಂದು ಸಂಬಂಧಿಕರು ಸವಣೂರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಮಹಿಳೆ ಪತ್ತೆಗಾಗಿ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದರು. ಅಂತಿಮವಾಗಿ ಬಸ್ ನಿಲ್ದಾಣದ ಅಕ್ಕಪಕ್ಕದಲ್ಲಿ ಮೊಬೈಲ್ ಲೊಕೇಶನ್ ತೋರಿಸಿದ ಹಿನ್ನೆಲೆಯಲ್ಲಿ ಸಂಬಂಧಿಕರು ಹಾಗೂ ಪೊಲೀಸರು ಹುಡುಕಾಟದಲ್ಲಿ ತೊಡಗಿದ್ದರು. ಸೋಮವಾರ ಬೆಳಗ್ಗೆ ಅಪರಿಚಿತ ಮಹಿಳೆಯ ಶವ ಅಲಿಖಾನ್ ಕೆರೆಯಲ್ಲಿ ತೇಲುತ್ತಿರುವುದನ್ನು ಕಂಡ ಸ್ಥಳೀಯರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಧಾವಿಸಿದ ಪಿಎಸ್‌ಐ ಮೇಘರಾಜ ದೊಡ್ಡಮನಿ ಹಾಗೂ ಸಿಬ್ಬಂದಿ ಮಹಿಳೆಯ ಶವ ಗುರುತಿಸಿ ಮಾಹಿತಿ ನೀಡಿದರು. ಬಳಿಕ ಕೆರೆಯಲ್ಲಿದ್ದ ಶವ ಹೊರ ತೆಗೆಯಲಾಯಿತು. ಈ ಕುರಿತು ಸವಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.