ಕಂಡಕ್ಟರ್ ಮೇಲೆ ಹಲ್ಲೆ ನಡೆಸಿದ ಮಹಿಳೆ

Crime Logo
Published on

ಬೆಂಗಳೂರು: ಮಹಿಳಾ ಪ್ರಯಾಣಿಕರೊಬ್ಬರು ಟಿಕೆಟ್ ವಿಚಾರಕ್ಕೆ ನಡೆದ ಜಗಳ ವೇಳೆ ಬಿಎಂಟಿಸಿ ಬಸ್‌ನ ಮಹಿಳಾ ಕಂಡಕ್ಟರ್ ಮೇಲೆ ಹಲ್ಲೆ ನಡೆಸಿ, ಉಗುರುಗಳಿಂದ ಮುಖ ಪರಚಿ ರಕ್ತಗಾಯಗೊಳಿಸಿದ್ದಾರೆ.
ಘಟನೆ ಸಂಬಂಧ ಬಿಎಂಟಿಸಿ ಬಸ್ ನಿರ್ವಾಹಕಿ ಸುಕನ್ಯಾ ದೂರು ನೀಡಿದ್ದರು. ಈ ಸಂಬಂಧ ಮತ್ತಿಕೆರೆಯಲ್ಲಿ ಖಾಸಗಿ ಫೈನಾನ್ಸ್ ಕಂಪನಿಯ ಉದ್ಯೋಗಿಯಾಗಿರುವ ಮೋನಿಷಾ (೨೯) ಎಂಬಾಕೆಯನ್ನು ಬಾಗಲಗುಂಟೆ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಚಿಕ್ಕಬಾಣವಾರ ನಿವಾಸಿಯಾದ ಮೋನಿಷಾ, ಭಾನುವಾರ ಬೆಳಗ್ಗೆ ೧೦.೩೦ರ ಸುಮಾರಿಗೆ ೮ನೇ ಮೈಲಿಯಿಂದ ದಾಸರಹಳ್ಳಿಗೆ ಹೋಗಲು ಮೆಜೆಸ್ಟಿಕ್-ನೆಲಮಂಗಲ ಮಾರ್ಗದ ಬಿಎಂಟಿಸಿ ಬಸ್ ಹತ್ತಿದ್ದಾರೆ. ಬಳಿಕ ನಿರ್ವಾಹಕಿ ಸುಕನ್ಯಾ, ಆಧಾರ್ ಕಾರ್ಡ್ ತೋರಿಸುವಂತೆ ಕೇಳಿದ್ದು, ಆಗ ಮೋನಿಷಾ, ಆಧಾರ್ ಕಾರ್ಡ್ ತೋರಿಸಲು ತಡ ಮಾಡಿದ್ದಾರೆ. ಅದರಿಂದ ಅಸಮಧಾನಗೊಂಡ ನಿರ್ವಾಹಕಿ ಸುಕನ್ಯಾ, ಏರುಧ್ವನಿಯಲ್ಲಿ ಬೇಗನೇ ತೋರಿಸಬೇಕು ಎಂದಿದ್ದಾರೆ.
ಈ ವಿಚಾರಕ್ಕೆ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಅದು ವಿಕೋಪಕ್ಕೆ ಹೋದಾಗ ಮೋನಿಷಾ, ನಿರ್ವಾಹಕಿ ಸುಕನ್ಯಾ ಮೇಲೆ ಹಲ್ಲೆ ನಡೆಸಿ, ಉಗುರಿನಿಂದ ಮುಖ ಪರಚಿದ್ದಾರೆ. ಅದನ್ನು ಗಮನಿಸಿದ ಕೆಲ ಮಹಿಳಾ ಪ್ರಯಾಣಿಕರು ಮೋನಿಷಾರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಆಗ ಮೋನಿಷಾ, ಮೊದಲು ನಿರ್ವಾಹಕಿಯೇ ಹೊಡೆದಿದ್ದಾರೆ. ಆಕಸ್ಮಿಕವಾಗಿ ಮುಖಕ್ಕೆ ಉಗುರು ಪರಚಿದೆ ಎಂದಿದ್ದಾರೆ. ಇಬ್ಬರ ಜಗಳ ತಾರಕಕ್ಕೇರುತ್ತಿದ್ದಂತೆ ಬಸ್ ಚಾಲಕ ರಸ್ತೆ ಮಧ್ಯೆಯೇ ಬಸ್ ನಿಲ್ಲಿಸಿ, ಬಿಎಂಟಿಸಿ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಬಾಗಲಗುಂಟೆ ಪೊಲೀಸ್ ಠಾಣೆಗೆ ಸುಕನ್ಯಾ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಮೋನಿಷಾಳನ್ನು ವಶಕ್ಕೆ ಪಡೆದುಕೊಂಡು ತನಿಖೆ ಮುಂದುವರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂಬಂಧ ಬಾಗಲಗುಂಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net