‘ಮುನಿದ ವರುಣ’ ಬಾಡಿದ ಭತ್ತ-ರೈತ

SIRSI STORY
Published on

ಶಿರಸಿ: ತಾಲೂಕಿನಲ್ಲಿ ಅತಿ ಹೆಚ್ಚು ಭತ್ತ ಬೆಳೆಯುವ ಪ್ರದೇಶ ಎಂಬ ಹೆಗ್ಗಳಿಕೆ ಹೊಂದಿರುವ ಬದನಗೋಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಲವೆಡೆ ಗದ್ದೆಗಳಲ್ಲಿ ನಾಟಿ ಕಾರ್ಯ ನಡೆದಿಲ್ಲ. ಮಳೆ ನಂಬಿ ನಾಟಿ ಮಾಡಿದ ಭತ್ತ ಸಸಿಗಳು ಈಗ ಬಾಡತೊಡಗಿವೆ. ಇದಕ್ಕೆ ಕಾರಣ ಮುಂಗಾರು ಮಳೆ ಕೊರತೆ.

ಸುಮಾರು ಎರಡು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದೆ. ಒಂದೆಡೆ ರಣಬಿಸಿಲು ಮತ್ತೊಂದೆಡೆ ಒಣಗಿದ ಭತ್ತದ ಗದ್ದೆಗಳು ರೈತರನ್ನು ಆತಂಕಕ್ಕೆ ದೂಡಿದೆ.

ಬದನಗೋಡು ಗ್ರಾಪಂ ವ್ಯಾಪ್ತಿಯಲ್ಲಿ ಸುಮಾರು 4 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಸುಮಾರು ಒಂದು ಸಾವಿರ ಹೆಕ್ಟೇರ್ ಪ್ರದೇಶ ಅಡಕೆ ಬೆಳೆಯುವ ಕ್ಷೇತ್ರವಾಗಿ ಬದಲಾಗಿದೆ. ಬೋರ್‌ವೆಲ್ ಹೊಂದಿರುವ ರೈತರ ಗದ್ದೆಗಳನ್ನು ಹೊರತುಪಡಿಸಿದರೆ ಉಳಿದೆಲ್ಲ ಕಡೆ ನೀರಿಲ್ಲದೆ ಭತ್ತ ಒಣಗುತ್ತಿದೆ. ಜತೆಗೆ ಬೋರ್‌ವೆಲ್‌ನಲ್ಲೂ ನೀರಿನ ಪ್ರಮಾಣ ಕಡಿಮೆಯಾಗುತ್ತಿದ್ದು, ತಕ್ಷಣವೇ ಮಳೆಯಾಗದಿದ್ದರೆ ಆ ಬೆಳೆಯೂ ಕೈಸೇರುವುದು ಅನುಮಾನ ಎಂಬಂತಾಗಿದೆ.

ವಾಸ್ತವವಾಗಿ ಈ ವರ್ಷ ಭತ್ತದ ನಾಟಿ ಕಾರ್ಯವೇ ವಿಳಂಬವಾಗಿತ್ತು. ಜೂನ್ ಅಂತ್ಯದವರೆಗೂ ಮಳೆಯಾಗದಿದ್ದರಿಂದ ಖಾಲಿ ಇರಬೇಕಾಯಿತು. ಆ ಬಳಿಕ ಒಂದಿಷ್ಟು ದಿನ ಸುರಿದ ಮಳೆಯಿಂದಾಗಿ ಖುಷಿಗೊಂಡ ರೈತರು ಭತ್ತದ ನಾಟಿಗೆ ಮುಂದಾದರು. ಆದರೆ, ಕಳೆದ 15 ದಿನಗಳಿಂದ ಮಳೆ ಮಾಯವಾಗಿದ್ದು, ರೈತರು ಚಿಂತೆಗೀಡಾಗಿದ್ದಾರೆ.

ಅಡಕೆ ಬೆಳೆಯೂ ನಾಶ

ಅಡಕೆ ಬೆಳೆಯೂ ಈ ವರ್ಷ ಹಾನಿ ಆಗಿದೆ. ಬೇಸಿಗೆಯ ವೇಳೆ ಸಿಂಗಾರ ಸತ್ತ ಪ್ರಮಾಣ ಅಧಿಕವಾಗಿತ್ತು. ಮಳೆ ಆರಂಭವಾದ ತಕ್ಷಣ ಉದುರುವಿಕೆ ತೀವ್ರಗೊಂಡಿದೆ. ಈಗಾಗಲೇ ಅರ್ಧದಷ್ಟು ಅಡಕೆ ಬೆಳೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.

ಪ್ರತಿ ಎಕರೆಗೆ 15ರಿಂದ 20 ಸಾವಿರ ರೂ. ಖರ್ಚು ಮಾಡಿ ರೈತರು ಭತ್ತ ನಾಟಿ ಮಾಡಿದ್ದಾರೆ. ಆದರೆ, ಆಗಸ್ಟ್ ತಿಂಗಳ ಮಳೆ ಕೊರತೆ ಆಗಿದೆ. ಭತ್ತ ಈಗಾಗಲೇ ಒಣಗಿದ್ದರಿಂದ ಒಂದೊಮ್ಮೆ ಮಳೆ ಬಂದರೂ ಬೆಳೆ ಚೇತರಿಸಿಕೊಳ್ಳುವ ಸ್ಥಿತಿಯಲ್ಲಿ ಇಲ್ಲ.i ಪ್ರಶಾಂತ ಗೌಡ, ಎಪಿಎಂಸಿ ಸದಸ್ಯ. ಈ ವರ್ಷ ಭತ್ತದ ಬೆಳೆಯೇ ಇಲ್ಲವಾದ್ದರಿಂದ ಸಹಕಾರಿ ಸಂಘ, ಬ್ಯಾಂಕ್‌ಗಳು ಸಾಲ ಮರುಪಾವತಿಗೆ ಒಂದು ವರ್ಷ ಹೆಚ್ಚಿನ ಅವಧಿ ನೀಡಬೇಕು. ಸರ್ಕಾರದಿಂದ ಪರಿಹಾರ ನೀಡಬೇಕು.i ಆನಂದ ಗೌಡ, ರೈತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net