ವನ್ಯಜೀವಿ ಕಳೇಬರ ಮಾರಾಟ: ಪ್ರತ್ಯೇಕ ಕೇಸಿನಲ್ಲಿ ನಾಲ್ವರು ಆರೋಪಿಗಳ ಬಂಧನ

New Project(37)
Published on

ಬೆಂಗಳೂರು: ವನ್ಯಜೀವಿ ಕಳೇಬರ ಮಾರಾಟ ಮಾಡುತ್ತಿದ್ದ ಪ್ರತ್ಯೇಕ ಕೇಸಿನಲ್ಲಿ ನಾಲ್ವರು ಆರೋಪಿಗಳನ್ನು ಹನುಮಂತನಗರ ಪೊಲೀಸರು ಬಂಧಿಸಿದ್ದಾರೆ.

ಶ್ರೀನಗರ ಬಸ್ ನಿಲ್ದಾಣದಲ್ಲಿ ದ್ವಿಚಕ್ರ ವಾಹನದಲ್ಲಿ ಚಿರತೆ ಚರ್ಮ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿತ್ತು. ಇದರ ಮೇರೆಗೆ ಇನ್‌ಸ್ಪೆಕ್ಟರ್ ಬಿ.ಎನ್.ಸಂದೀಪ್ ಕುಮಾರ್ ನೇತೃತ್ವದ ತಂಡ ದಾಳಿ ನಡೆಸಿ ಹೊಸಕೋಟೆಯ ಮುನೀರ್ ಬಾಷಾ, ಬೆಂಗಳೂರಿನ ಎಂ.ಜಿ.ಶ್ರೀನಿವಾಸ್ ರಾವ್, ಮುಳಬಾಗಿಲಿನ ಸೈಯದ್ ಅಕ್ಬರ್ ಎಂಬುವರನ್ನು ಬಂಧಿಸಿದೆ. ಆರೋಪಿಗಳ ಪರಿಶೀಲನೆ ನಡೆಸಿದಾಗ ಚಿರತೆ ಚರ್ಮ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ಹನುಮಂತನಗರ ಮಾರುತಿ ಸರ್ಕಲ್‌ನಲ್ಲಿ ಆನೆ ದಂತದ ಐಡಲ್ಸ್ ಮತ್ತು ಹುಲಿ ಉಗುರು ಮಾರಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಮಫ್ತಿಯಲ್ಲಿ ಕಾರ್ಯಾಚರಣೆ ನಡೆಸಿ ಹನುಮಂತನಗರದ ದಿನೇಶ್(47) ಎಂಬಾತನ್ನು ಬಂಧಿಸಲಾಗಿದೆ. ಈತನ ಬಳಿ ನಾಲ್ಕು ಐಡಲ್ಸ್ ಮತ್ತು ಹುಲಿ ಉಗುರು ಜಪ್ತಿ ಮಾಡಲಾಗಿದೆ.

ಇದೇ ರೀತಿ ಸುಂಕೇನಹಳ್ಳಿ ಸರ್ಕಾರಿ ಪ್ರೌಡಶಾಲೆ ಹಿಂಭಾಗ ಬೈಕ್‌ನಲ್ಲಿ ಅಪರಿಚಿತ ವ್ಯಕ್ತಿ, ಆನೆಯ ದಂತ ಇಟ್ಟುಕೊಂಡು ಮಾರಾಟಕ್ಕೆ ಯತ್ನಿಸುತ್ತಿದ್ದಾನೆ ಎಂಬ ಮಾಹಿತಿ ಸಂಗ್ರಹಿಸಿ ಪೊಲೀಸರು ದಾಳಿ ನಡೆಸಿದ್ದರು. ಆರೋಪಿ ಬ್ಯಾಗ್ ಪರಿಶೀಲನೆ ನಡೆಸಿದಾಗ ಎರಡು ಆನೆ ದಂತ ಪತ್ತೆಯಾಗಿವೆ. ಈ ಎಲ್ಲ ಆರೋಪಿಗಳ ವಿರುದ್ಧ ವನ್ಯಜೀವಿ ಕಾಯ್ದೆ ಅನ್ವಯ ಪ್ರಕರಣ ದಾಖಲು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net