ತೆಂಗು ಸಸಿ ನಾಶಪಡಿಸುವ ಕಾಡುಹಂದಿ

Tengu sasi
Published on

ಹಾನಗಲ್ಲ: ಪಟ್ಟಣದಲ್ಲಿ ಕಾಡುಹಂದಿಗಳ ಕಾಟ ಮಿತಿ ಮೀರಿದೆ. ತೋಟಗಾರಿಕೆ ಇಲಾಖೆ ಪಟ್ಟಣದ ಹಳೇಕೋಟಿ ಪ್ರದೇಶದಲ್ಲಿ ರೈತರಿಗೆ ವಿತರಿಸಲು ಬೆಳೆಸಿದ್ದ ನೂರಾರು ತೆಂಗಿನ ಸಸಿಗಳನ್ನು ನಾಶಪಡಿಸಿದ ಘಟನೆ ನಡೆದಿದೆ.

ತೋಟಗಾರಿಕೆ ಇಲಾಖೆ ಪ್ರತಿ ವರ್ಷ ಇಲ್ಲಿನ ಹಳೇಕೋಟಿ ಪ್ರದೇಶದ ಫಾರ್ಮ್‌ನಲ್ಲಿ ತೆಂಗಿನ ಸಸಿಗಳನ್ನು ಬೆಳೆಸುತ್ತದೆ. ಈ ಪ್ರದೇಶಕ್ಕೆ ಸುತ್ತಲೂ ತಂತಿ ಬೇಲಿ ಹಾಕಿದ್ದರೂ ರಾತ್ರಿ ಸಮಯದಲ್ಲಿ ಒಳನುಗ್ಗಿ ತೆಂಗಿನ ಬುಡವನ್ನು ಬಗೆದು ತೆಂಗಿನಕಾಯಿ ಹಾಗೂ ಗಿಡದ ಬೊಡ್ಡೆಯನ್ನು ತಿಂದು ನಾಶಪಡಿಸುತ್ತಿವೆ. ಸಾವಿರಾರು ತೆಂಗಿನ ಸಸಿಗಳನ್ನು ಬೆಳೆಸಿ ನಿರ್ವಹಿಸಲು ಲಕ್ಷಾಂತರ ರೂ. ಅನುದಾನವನ್ನು ತೋಟಗಾರಿಕೆ ಇಲಾಖೆ ಖರ್ಚು ಮಾಡಿದೆ. ಆದರೆ, ಇದರಲ್ಲಿನ 400ಕ್ಕೂ ಅಧಿಕ ಸಸಿಗಳನ್ನು ಹಂದಿಗಳು ನಾಶಪಡಿಸಿವೆ.

ಕಾಡುಹಂದಿಗಳ ನಿಗ್ರಹಕ್ಕೆ ಕ್ರಮ ಕೈಗೊಳ್ಳದಿದ್ದರೆ ಇನ್ನುಳಿದಿರುವ ಸಸಿಗಳನ್ನು ನಾಶಪಡಿಸುವ ಆತಂಕ ಅಧಿಕಾರಿಗಳನ್ನು ಕಾಡುತ್ತಿದೆ. ಪಟ್ಟಣದ ಹೊರಭಾಗದಲ್ಲಿರುವ ಹೊಲಗಳಲ್ಲಿನ ಗೋವಿನಜೋಳವನ್ನೂ ಹಂದಿಗಳು ತಿಂದು ಹಾಕುತ್ತಿವೆ. ಮುಂಗಾರು ಸಮಯದಲ್ಲಿ ಮಳೆ ವಿಳಂಬವಾದ್ದರಿಂದ ಕಾಡುಹಂದಿಗಳು ತೋಟಗಾರಿಕೆ ನರ್ಸರಿಗೆ ದಾಳಿ ಮಾಡಿವೆ. ಇಲ್ಲಿರುವ ನೂರಾರು ಮಾವು, ಸಪೋಟಾ ಸೇರಿದಂತೆ ತೋಟಗಾರಿಕಾ ಬೆಳೆಗಳ ರಕ್ಷಣೆಗಾಗಿ ಸುತ್ತಲೂ ರಕ್ಷಣಾ ಗೋಡೆಯ ನಿರ್ಮಾಣದ ಅಗತ್ಯವಿದ್ದು, ಕ್ರಮ ಜರುಗಿಸಬೇಕಿದೆ.

ಹಾನಗಲ್ಲ ಪಟ್ಟಣಕ್ಕೆ ಹೊಂದಿಕೊಂಡಿರುವ ತೋಟಗಾರಿಕೆ ಫಾರ್ಮ್‌ನಲ್ಲಿ ವಿವಿಧ ಹಣ್ಣು-ಕಾಯಿ ಇರುವುದರಿಂದ ಆಹಾರ ಅರಸಿ ಕಾಡುಹಂದಿಗಳು ದಾಳಿ ಮಾಡುತ್ತಿವೆ. ಮಾವಿನಹಣ್ಣುಗಳ ಸೀಜನ್ ಮುಗಿದಿದ್ದರಿಂದ ತೆಂಗಿನ ಸಸಿಗಳನ್ನು ತಿನ್ನುತ್ತಿವೆ. ಅರಣ್ಯ ಇಲಾಖೆಯ ಸಲಹೆಯಂತೆ ಹಂದಿಗಳ ನಿಗ್ರಹಕ್ಕೆ ರಾತ್ರಿ ಅಲ್ಲಲ್ಲಿ ಬೆಂಕಿ ಹಾಕಿ ಕಾವಲು ಕಾಯಲಾಗುತ್ತಿದೆ. ಈ ಕುರಿತು ಜಿಲ್ಲಾ ತೋಟಗಾರಿಕೆ ಉಪನಿರ್ದೇಶಕರಿಗೆ ವರದಿ ಸಲ್ಲಿಸಲಾಗಿದೆ.I ಮಂಜುನಾಥ ಬಣಕಾರ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net