10 ವರ್ಷದ ಬಳಿಕ ಬಯಲಾಯ್ತು ಮರ್ಯಾದಾ ಹತ್ಯೆ ಪ್ರಕರಣ: ಬಾರ್​ನಲ್ಲಿ ಕುಳಿತು ಕುಡಿದ ನಶೆಯಲ್ಲಿ ಸತ್ಯ ಕಕ್ಕಿದ ಗಂಡ!

murder case
Published on

ವಿಜಯಪುರ: ಹತ್ತು ವರ್ಷದ ಹಿಂದೆ ನಡೆದ ಮರ್ಯಾದಾ ಹತ್ಯೆ ಪ್ರಕರಣವೊಂದು ಬಾರ್​ನಲ್ಲಿ ಬಹಿರಂಗಗೊಂಡಿದೆ! ಈ ಪ್ರಕರಣವನ್ನು ವಿಜಯಪುರ ಜಿಲ್ಲಾ ಪೊಲೀಸರು ಭೇದಿಸಿದ್ದು, ತನಿಖೆ ವೇಳೆ ಭಯಾನಕ ವಿಷಯ ಹೊರಬಿದ್ದಿದೆ. ಪ್ರಕರಣ ಸಂಬಂಧ ಪೊಲೀಸರು ಮೂವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಏನಿದು ಪ್ರಕರಣ?: 2011ರ ಜುಲೈನಲ್ಲಿ ಮುದ್ದೇಬಿಹಾಳದ ದಾನೇಶ್ವರಿ ಎಂಬಾಕೆಯನ್ನು ಶ್ರೀಶೈಲಕ್ಕೆ ಹೋಗಿ ಬರೋಣ ಎಂದು ಪತಿ ಹುಚ್ಚಪ್ಪಗೌಡ ಪಾಟೀಲ ಕರೆದುಕೊಂಡು ಹೋಗಿದ್ದ. ಆ ವೇಳೆ ಈತನ ಪತ್ನಿ ಆಂಧ್ರ ಪ್ರದೇಶದಲ್ಲಿ ನಿಗೂಢವಾಗಿ ನಾಪತ್ತೆಯಾಗಿದ್ದಳು. ಆಕೆ ಬೇರೊಬ್ಬನೊಂದಿಗೆ ಓಡಿ ಹೋಗಿದ್ದಾಳೆಂದು ಕುಟುಂಬಸ್ಥರಿಗೆ ಹುಚ್ಚಪ್ಪಗೌಡ ತಿಳಿಸಿದ್ದ. ಆಕೆಯನ್ನ ಹಲವೆಡೆ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಮುದ್ದೇಬಿಹಾಳ ಠಾಣೆಯಲ್ಲಿ ದಾನೇಶ್ವರಿ ನಾಪತ್ತೆಯಾದ ಬಗ್ಗೆ ದೂರು ದಾಖಲಿಸಿದ್ದರು. ನಂತರ ಆಕೆಯನ್ನ ಮರೆತು ಎಲ್ಲರೂ ಸುಮ್ಮನಾಗಿದ್ದರು. ಇದೀಗ ಆಕೆ 10 ವರ್ಷದ ಹಿಂದೆಯೇ ಹತ್ಯೆಯಾಗಿದ್ದಾಳೆ ಎಂಬ ರಹಸ್ಯ ಬಯಲಾಗಿದೆ.

ಇತ್ತೀಚೆಗೆ ದಾನೇಶ್ವರಿಯ ಪತಿ ಹುಚ್ಚಪ್ಪಗೌಡ ವಿಜಯಪುರದ ಪಟ್ಟಣದ ಬಾರ್‌ನಲ್ಲಿ ಸಾರಾಯಿ ಕುಡಿಯುತ್ತಾ ಕುಳಿತ್ತಿದ್ದ. ಕುಡಿದ ಅಮಲಿನಲ್ಲಿ ತನ್ನಷ್ಟಕ್ಕೆ ತಾನೇ ಪತ್ನಿ ದಾನೇಶ್ವರಿಯನ್ನು ಕೊಲೆ ಮಾಡಿದ್ದಾಗಿ ಬಡಬಡಿಸಿದ್ದಾನೆ. ಪಕ್ಕದಲ್ಲಿದ್ದವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಅದನ್ನಾಧರಿಸಿ ಪೊಲೀಸರು ಹುಚ್ಚಪ್ಪಗೌಡನನ್ನು ಕರೆತಂದು ವಿಚಾರಿಸಿದಾಗ ರಹಸ್ಯ ಬಯಲಾಗಿದೆ. ಶ್ರೀಶೈಲಕ್ಕೆಂದು ಪತ್ನಿಯನ್ನು ಕರೆದೊಯ್ದ, ಹುಚ್ಚಪ್ಪಗೌಡ ಪಾಟೀಲ, 2011ರ ಜುಲೈ 24ರಂದು ಪತ್ನಿಯನ್ನು ಕೊಂದು ಆಕೆ ಬೇರೊಬ್ಬನೊಂದಿಗೆ ಓಡಿಹೋಗಿದ್ದಾಳೆ ಎಂದು ಕಥೆ ಕಟ್ಟಿದ್ದ.

ದಾನೇಶ್ವರಿಯ ಮದುವೆ ಸೋದರ ಮಾವ ಹುಚ್ಚಪ್ಪಗೌಡನ ಜತೆ ನಡೆದಿತ್ತು. ಅಕ್ಕನ ಮಗಳನ್ನೇ ಹುಚ್ಚಪ್ಪ ಗೌಡ ಮದುವೆಯಾಗಿದ್ದ. ಪತ್ನಿಯು ಬೇರೊಬ್ಬನ ಜತೆ ಅಕ್ರಮ ಸಂಬಂಧ ಹೊಂದಿದ್ದಳು ಎಂಬ ಕಾರಣಕ್ಕೆ ಆಕೆಯನ್ನು ಕೊಲೆ ಮಾಡಿದ್ದ. ಬಳಿಕ ಈ ಪ್ರಕರಣವನ್ನ ಮುಚ್ಚಿಹಾಕಿದ್ದ. ಇದೊಂದು ಮರ್ಯಾದಾ ಹತ್ಯೆ. 10 ವರ್ಷದ ಬಳಿಕ ಬಯಲಾಗಿದೆ. ಕೊಲೆ ವಿಷಯ ಗೊತ್ತಾಗುತ್ತಿದ್ದಂತೆ ಜು.7ರಂದು ಪೊಲೀಸರು ಮೂವರನ್ನು ಬಂಧಿಸಲಾಗಿದೆ. ಹುಚ್ಚಪ್ಪಗೌಡ ಪಾಟೀಲ, ಈತನ ಸಹೋದರ ಸಿದ್ದನಗೌಡ ಪಾಟೀಲ, ಕಾರು ಚಾಲಕ ಉಮೇಶ ಕಮಲಾಪುರ ಬಂಧಿತರು ಎಂದು ಎಸ್‌ಪಿ ಎಚ್.ಡಿ.ಆನಂದಕುಮಾರ ತಿಳಿಸಿದ್ದಾರೆ.

ಇನ್ನು ದಾನೇಶ್ವರಿ ಬೇರೊಬ್ಬನನ್ನು ಪ್ರೀತಿಸುತ್ತಿರುವ ವಿಚಾರ ಆಕೆಯ ಮನೆಯವರಿಗೂ ಗೊತ್ತಿತ್ತಂತೆ. ಆಕೆಗೆ ಬುದ್ಧಿ ಹೇಳಿ ಗಂಡನ ಮನೆಗೆ ಕಳಿಸಿದ್ದರಂತೆ. ಆದರೂ ಆಕೆ ಪ್ರಿಯಕರನ ಜತೆಗಿನ ನಂಟನ್ನು ಬಿಟ್ಟಿರಲಿಲ್ಲ. ಇದೇ ಕಾರಣಕ್ಕೆ ಹತ್ಯೆ ಮಾಡಿ ನಾಪತ್ತೆ ಎಂದು ಬಿಂಬಿಸಿ ನಾಟಕವಾಡಲಾಗಿತ್ತು. ಇದು ಆಕೆಯ ಕುಟುಂಬಕ್ಕೆ ಗೊತ್ತಿದ್ದರೂ ಸುಮ್ಮನಿದ್ದರು ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net