ಮೈಸೂರಲ್ಲಿ 2ನೇ ಪತ್ನಿಯ ರುಂಡ-ಮುಂಡ ಕತ್ತರಿಸಿ ಭೀಕರ ಕೊಲೆ! ತಂದೆಯ ಕರಾಳ ಮುಖ ಬಿಚ್ಚಿಟ್ಟ 20 ವರ್ಷದ ಮಗಳು

New Project(13)
Published on

ಮೈಸೂರು: ವರುಣಾ ಪೊಲೀಸ್ ಠಾಣಾ ವ್ಯಾಪ್ತಿಯ ಚೆಟ್ಟನಹಳ್ಳಿ ಗ್ರಾಮದಲ್ಲಿ ಕ್ರೂರಿಯೊಬ್ಬ ತನ್ನ ಪತ್ನಿಯ ರುಂಡ-ಮುಂಡ ಕತ್ತರಿಸಿ ಭೀಕರವಾಗಿ ಕೊಲೆ ಮಾಡಿದ್ದಾನೆ.

ಚೆಟ್ಟನಹಳ್ಳಿಯ ದೇವರಾಜ್ ಅವರ 2ನೇ ಪತ್ನಿ ಪುಟ್ಟಮ್ಮ(40) ಕೊಲೆಯಾದ ದುರ್ದೈವಿ. ಪತ್ನಿಯ ಶೀಲ ಶಂಕಿಸಿ ನಿತ್ಯ ಕ್ಯಾತೆ ತೆಗೆಯುತ್ತಿದ್ದ ದೇವರಾಜ್​, 21 ವರ್ಷ ತನ್ನೊಂದಿಗೆ ಸಂಸಾರ ನಡೆಸಿದ್ದ ಪತ್ನಿಯನ್ನೇ ಅಮಾನುಷವಾಗಿ ಕೊಂದಿದ್ದಾನೆ. ಮೊದಲ ಹೆಂಡತಿಯನ್ನೂ ಕೊಲೆ ಮಾಡಲು ಯತ್ನಿಸಿದ್ದ ದೇವರಾಜ್ ಜೈಲುವಾಸ ಅನುಭವಿಸಿದ್ದ. ಬಳಿಕ ಮೊದಲ ಹೆಂಡತಿಯಿಂದ ದೂರವಾದ ದೇವರಾಜ್, 21 ವರ್ಷಗಳ ಹಿಂದೆ ಪುಟ್ಟಮ್ಮಳನ್ನು ಎರಡನೇ ವಿವಾಹವಾಗಿದ್ದ.

ದೇವರಾಜ್​ ಮತ್ತು ಪುಟ್ಟಮ್ಮ ದಂಪತಿಗೆ 20 ವರ್ಷದ ಮಗಳು ಇದ್ದಾಳೆ. ಅನುಮಾನ ರೋಗ ಅಂಟಿಸಿಕೊಂಡಿದ್ದ ದೇವರಾಜ್​, 2ನೇ ಪತ್ನಿಗೂ ಅನೈತಿಕ ಸಂಬಂಧ ಇದೆ ಎಂದು ಜಗಳ ಮಾಡುತ್ತಿದ್ದ. ಕಳೆದ ಒಂದು ತಿಂಗಳಿಂದ ಪುಟ್ಟಮ್ಮಳಿಗೆ ಕಿರುಕುಳ ಹೆಚ್ಚಾಗಿತ್ತು. ಮಗಳು ಪವಿತ್ರಾ, ಸೋಮವಾರ ಕಾಲೇಜಿಗೆ ಹೋಗಿದ್ದಳು. ಈ ವೇಳೆ ಪತ್ನಿ ಜತೆ ಜಗಳ ತೆಗೆದಿದ್ದ. ರಾತ್ರಿ ಮನೆಯಲ್ಲೇ ಪತ್ನಿಯನ್ನು ರುಂಡ- ಮುಂಡ ಬೇರೆ ಆಗುವಂತೆ ಭೀಕರವಾಗಿ ಕೊಲೆ ಮಾಡಿದ್ದಾನೆ. ತಂದೆ ವಿರುದ್ಧ ಮಗಳು ಪವಿತ್ರಾ, ವರುಣಾ ಪೊಲೀಸ್​ ಠಾಣೆಗೆ ದೂರು ನೀಡಿದ್ದು, ಮದುವೆ ಆದಾಗಿನಿಂದ ತನ್ನ ತಾಯಿಗೆ ತಂದೆ ಕೊಡುತ್ತಿದ್ದ ಚಿತ್ರಹಿಂಸೆಯನ್ನ ಬಿಚ್ಚಿಟ್ಟಿದ್ದಾಳೆ. ತಲೆಮರೆಸಿಕೊಂಡ ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net