

ಬೆಂಗಳೂರು: ಮದ್ವೆ ಆಗಿ 8 ವರ್ಷದ ಆಗಿದೆ. ದಂಪತಿಗೆ ಮೂವರು ಮಕ್ಕಳು ಜನಿಸಿವೆ. ಇಷ್ಟೆಲ್ಲಾ ಆಗುವವರೆಗೂ ಸುಮ್ಮನಿದ್ದ ಗಂಡ, ಇತ್ತೀಚಿಗೆ 'ನೀನು ಕಪ್ಪಗಿದ್ದೀಯಾ, ಸುಂದರವಾಗಿಲ್ಲ...' ಎಂದು ಪತ್ನಿಗೆ ಕೊಟ್ಟಿದ್ದಾನೆ. ಮಗನ ವಿಕೃತ ಮನಸ್ಥಿತಿಗೆ ಸಾಥ್ ಕೊಟ್ಟ ಆತನ ತಾಯಿಯೂ ಸೊಸೆಗೆ ಹಿಂಸಿಸಿದ್ದಾಳೆ. ಅಷ್ಟೇ ಅಲ್ಲ, ಆಕೆ ಹೆತ್ತ ಮೂರು ಮಕ್ಕಳನ್ನೂ ಮುಟ್ಟಲು ಗಂಡ ಬಿಡುತ್ತಿರಲಿಲ್ಲವಂತೆ. ಗಂಡನ ನಡೆಗೆ ಮನನೊಂದ ಪತ್ನಿ, ಮನೆಯಲ್ಲೇ ಮುಖ ಮತ್ತು ಮೈ ಮೇಲೆ ಸಾನಿಟೈಸರ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ದುರಂತ ಅಂತ್ಯ ಕಂಡಿದ್ದಾಳೆ.
ಇಂತಹ ಅಮಾನವೀಯ ಘಟನೆ ರಾಜ್ಯರಾಜಧಾನಿ ಬೆಂಗಳೂರಲ್ಲಿ ಸಂಭವಿಸಿದೆ. ಆರ್.ಟಿ. ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮಠದಹಳ್ಳಿಯ ನಿವಾಸಿ ಶಾಜಿಯಾ ಬಾನು ಮೃತ ದುರ್ದೈವಿ. ಏಪ್ರಿಲ್ 20ರಂದು ಮನೆಯಲ್ಲೇ ಸಾನಿಟೈಸರ್ ಸುರಿದುಕೊಂಡು ಶಾಜಿಯಾ ಬೆಂಕಿ ಹಚ್ಚಿಕೊಂಡಿದ್ದಳು. ಸುಟ್ಟ ಗಾಯದಿಂದ ಬಳಲುತ್ತಿದ್ದ ಶಾಜಿಯಾಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಮಂಗಳವಾರ (ಮೇ 10) ಕೊನೆಯುಸಿರೆಳೆದಿದ್ದಾಳೆ.
'ನನ್ನ ಮಗಳು ಕಪ್ಪಗಿದ್ದಳೆಂದು ಆಕೆಯ ಗಂಡ ಇಮ್ರಾನ್ ಖಾನ್ ಮತ್ತು ಅತ್ತೆ ಇಬ್ಬರೂ ಸೇರಿಕೊಂಡು ಕಿರುಕುಳ ಕೊಟ್ಟು ಸಾಯುವಂತೆ ಮಾಡಿದ್ದಾರೆ. ತಾನು ಹೆತ್ತ ಮಕ್ಕಳನ್ನೇ ಮುಟ್ಟಲು ಗಂಡ-ಅತ್ತೆ ಇಬ್ಬರೂ ಆಕೆಗೆ ಬಿಡುತ್ತಿರಲಿಲ್ಲ. ಇವರ ಕಿರುಕುಳಕ್ಕೆ ಮಗಳು ಶಾಜಿಯಾ ತುಂಬಾ ನೊಂದಿದ್ದಳು. ಆಕೆಯ ಸಾವಿಗೆ ಗಂಡ-ಅತ್ತೆಯೇ ಕಾರಣ' ಎಂದು ಮೃತಳ ಪೋಷಕರು ದೂರಿದ್ದಾರೆ. ಆರ್ಟಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.