ತಂದೆ ಜತೆ ದೂರು ನೀಡಲು ಬಂದಿದ್ದ ಪತ್ನಿ, ಮೈಮೇಲೆ ಪೆಟ್ರೋಲ್​ ಸುರಿದುಕೊಂಡು ಬೆಂಕಿ ಹಚ್ಕೊಂಡು ಠಾಣೆಗೆ ನುಗ್ಗಿದ ಪತಿ!

jigani police station
Published on

ಆನೇಕಲ್​: ಕೌಟುಂಬಿಕ ಕಲಹದ ಹಿನ್ನೆಲೆ ಬೇಸತ್ತು ತಂದೆಯೊಂದಿಗೆ ದೂರು ನೀಡಲು ಪೊಲೀಸ್​ ಠಾಣೆಗೆ ಪತ್ನಿ ಬಂದ ಬೆನ್ನಲ್ಲೇ ಆಕೆಯ ಪತಿ ಪೊಲೀಸ್​ ಠಾಣೆಯಲ್ಲೇ ತನ್ನ ಮೈಮೇಲೆ ಪೆಟ್ರೋಲ್​ ಸುರಿದುಕೊಂಡು ಬೆಂಕಿ ಹಚ್ಚಿಕೊಂಡ ಘಟನೆ ಜಿಗಣಿ ಠಾಣೆಯಲ್ಲಿ ಸಂಭವಿಸಿದೆ.

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ದೂರು ನೀಡಲು ಪತ್ನಿ ಕವಿತಾ ಜಿಗಣಿ ಠಾಣೆಗೆ ತಂದೆಯ ಜತೆ ಗುರುವಾರ ಬಂದಿದ್ದರು. ಈ ಸಂದರ್ಭದಲ್ಲಿ ಪತಿ ರತೀಶ್​ ಕೂಡ ಬಂದಿದ್ದ. ಠಾಣೆಯ ಹೊರಭಾಗದಲ್ಲಿ ದ್ವಿಚಕ್ರ ವಾಹನದ ಮೇಲೆ ಕುಳಿತಿದ್ದ ರತೀಶ್​ ಏಕಾಏಕಿ ಬೆಂಕಿ ಹಚ್ಚಿಕೊಂಡು ಠಾಣೆಯ ಒಳಗೆ ಓಡಿದ್ದಾನೆ. ಇದನ್ನು ನೋಡಿದ ಪೊಲೀಸರು ಬೆಂಕಿ ನಂದಿಸಿದ್ದರಾದರೂ ದೇಹದ ಅರ್ಧ ಭಾಗ ಸುಟ್ಟು ಹೋಗಿತ್ತು.

ಚಿಕ್ಕಮಗಳೂರು ಮೂಲದ ರತೀಶ್​ ಹಾಗೂ ಕೊಳ್ಳೇಗಾಲ ಮೂಲದ ಕವಿತಾ ಹತ್ತು ವರ್ಷದ ಹಿಂದೆ ಜಿಗಣಿಯಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಗ ಪ್ರೀತಿಸಿ ಮದುವೆಯಾಗಿದ್ದರು. ಮದುವೆಯಾದ ಬಳಿಕ ಕುಟುಂಬದಿಂದ ದೂರ ಇದ್ದರು. ದಂಪತಿಗೆ ಇಬ್ಬರು ಗಂಡು ಮಕ್ಕಳು ಇದ್ದು, ರತೀಶ್​ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದ. ಪತ್ನಿ ಕವಿತಾ ಜಿಗಣಿ ಸರ್ಕಾರಿ ಆಸ್ಪತ್ರೆಯಲ್ಲಿ ನರ್ಸ್​ ಆಗಿದ್ದಳು.

ಆಗಾಗ ಗಂಡ-ಹೆಂಡತಿ ನಡುವೆ ಜಗಳ ನಡೆಯುತ್ತಿತ್ತು. ಇದೇ ವಿಚಾರಕ್ಕೆ ಗುರುವಾರ ಕವಿತಾ, ಕೊಳ್ಳೇಗಾಲದಲ್ಲಿನ ತನ್ನ ತಂದೆಗೆ ಕರೆ ಮಾಡಿ ಪತಿಗೆ ಬುದ್ಧಿ ಹೇಳುವಂತೆ ಜಿಗಣಿಗೆ ಕರೆಸಿಕೊಂಡಿದ್ದಳು. ಇಬ್ಬರೂ ಠಾಣೆಗೆ ಹೋಗಿದ್ದಾಗ ಅವಘಡ ನಡೆದಿದೆ. ಪೊಲೀಸರು ರತೀಶ್​ನನ್ನು ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಹತ್ತು ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಮದುವೆಯಾದ ಬಳಿಕ ಅವರಿಬ್ಬರನ್ನು ಎಂದೂ ಮಾತನಾಡಿಸಿರಲಿಲ್ಲ. ನಿನ್ನೆ ಕವಿತಾ ಕರೆ ಮಾಡಿ ಗಂಡನಿಗೆ ಬುದ್ಧಿ ಹೇಳಿ ಹೋಗುವಂತೆ ಹೇಳಿದ್ದರಿಂದ ಠಾಣೆಗೆ ಬಂದಿದೆ.

| ಮಾದೇವ ಕವಿತಾಳ ತಂದೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net