

ಕೊರಟಗೆರೆ: ದೀರ್ಘಕಾಲದಿಂದ ಮೂಲಸೌಕರ್ಯ ಕೊರತೆಯಿಂದ ಬಳಲುತ್ತಿದ್ದ ತಾಲೂಕು ಆಸ್ಪತ್ರೆಯ ಅಭಿವೃದ್ಧಿಗೆ ಸರ್ಕಾರ ಮುಂದಾಗಿದ್ದು, ಕೊರಟಗೆರೆ ಆರೋಗ್ಯ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆಯಾಗಿದೆ.
ಹೌದು. ಪಟ್ಟಣದ ತಾಲೂಕು ಸರ್ಕಾರಿ ಆಸ್ಪತ್ರೆಯನ್ನು 100 ಬೆಡ್ಗಳ ಆಸ್ಪತ್ರೆಯಾಗಿ ಉನ್ನತಿಕರಿಸಲು ರಾಜ್ಯ ಸಚಿವ ಸಂಪುಟದಲ್ಲಿ ತೀರ್ಮಾನ ಮಾಡಿದ್ದು, ಸುಮಾರು 40 ಕೋಟಿ ರೂ. ಅನುದಾನ ಬಿಡುಗಡೆಗೊಳಿಸುವ ಮೂಲಕ ಆಧುನಿಕ, ಸುಸಜ್ಜಿತ ಸರ್ಕಾರಿ ಆಸ್ಪತ್ರೆ ನಿರ್ಮಾಣಕ್ಕೆ ಮುನ್ನುಡಿ ಬರೆದಿದೆ.
ಪ್ರಸ್ತುತ ಆಸ್ಪತ್ರೆಯಲ್ಲಿ ಶೌಚಗೃಹಗಳ ಕೊರತೆ, ಐಸಿಯು ಘಟಕದ ಅಭಾವ, ಗರ್ಭಿಣಿಯರಿಗೆ ಸಮರ್ಪಕ ಸೌಲಭ್ಯಗಳಿಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಆಸ್ಪತ್ರೆಯಲ್ಲಿ ಪಾರ್ಕಿಂಗ್ ವ್ಯವಸ್ಥೆ, ತಜ್ಞ ವೈದ್ಯರು ಮತ್ತು ಹಾಸಿಗೆಗಳ ಕೊರತೆ ಮುಂತಾದ ಸಮಸ್ಯೆ ವರ್ಷಗಳಿಂದ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದ್ದವು. ಜನರು ತುರ್ತು ಚಿಕಿತ್ಸೆಗೆ ಬಂದರೆ ನಮ್ಮಆಸ್ಪತ್ರೆಯಲ್ಲಿ ತುರ್ತು ವ್ಯವಸ್ಥೆಯಲ್ಲ ಎಂಬ ವೈದ್ಯರ ಮಾತಿನಿಂದ ಸರ್ಕಾರಿ ಆಸ್ಪತ್ರೆಗೆ ಬಂದವರು ಯಾವುದೇ ಚಿಕಿತ್ಸೆ ಲಭಿಸದೆ ಖಾಸಗಿ ಆಸ್ಪತ್ರೆಗೆ ತೆರಳಬೇಕಾದ ಪರಿಸ್ಥಿತಿ ಸಾಮಾನ್ಯವಾಗಿತ್ತು. ಈಗ ಸೆ.11ರಂದು ನಡೆದ ಸಚಿವ ಸಂಪುಟ ಸಭೆಯ ತೀರ್ಮಾನದಿಂದ ಜನರ ಬಹುದಿನದ ಕಾಯುವಿಕೆಗೆ ಮುಕ್ತಿ ಸಿಗುವ ಕಾಲ ಸನಿಹ ಬಂದಿದೆ.
ಹೊಸ ರೂಪದ ನಿರೀಕ್ಷೆ
ಕ್ಷೇತ್ರದ ಶಾಸಕ ಮತ್ತು ಗೃಹ ಸಚಿವ ಡಾ.ಜಿ ಪರಮೇಶ್ವರ ನೇತೃತ್ವಲ್ಲಿ ಮಂಜೂರಾದ ಅನುದಾನದಿಂದಾಗಿ ಸುಸಜ್ಜಿತ ಕಟ್ಟಡ, ಆಧುನಿಕ ಶಸ್ತ್ರಚಿಕಿತ್ಸಾ ಕೊಠಡಿಗಳು, ಐಸಿಯು, ಶಿಶು ಸಂಗೋಪನಾ ಘಟಕ, ತುರ್ತು ವಿಭಾಗ, ಪ್ರಯೋಗಾಲಯ ಮತ್ತು ಸಮರ್ಪಕ ಪಾರ್ಕಿಂಗ್ ಸೌಲಭ್ಯ ಸೇರಿ ಹಲವು ಆಧುನಿಕ ಸೌಕರ್ಯ ದೊರಕುವ ಭರವಸೆ ಮೂಡಿದೆ.
ಅನುದಾನ ಬಳಕೆಯಾಗಲಿ
ಅನುದಾನ ಬಂದ ತಕ್ಷಣ ಪ್ರಯೋಜನ ಆಗುವುದಿಲ್ಲ. ಕಾಮಗಾರಿಯ ಗುಣಮಟ್ಟ, ಗುತ್ತಿಗೆದಾರರ ನಿಷ್ಠೆ, ಅಧಿಕಾರಿಗಳ ಮೇಲ್ವಿಚಾರಣೆ, ರಾಜಕೀಯ ಹಸ್ತಕ್ಷೇಪ ಎಲ್ಲವೂ ಜನತೆಗೆ ಸಿಗುವ ಫಲಿತಾಂಶವನ್ನು ನಿರ್ಧರಿಸಲಿವೆ. ಬಿಡುಗಡೆಯಾದ ಅನುದಾನ ಸರಿಯಾದ ರೀತಿಯಲ್ಲಿ ಬಳಕೆಯಾದರೆ ಮಾತ್ರ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಇಲ್ಲದಿದ್ದರೆ ಹಳೆಯ ಸಮಸ್ಯೆಗಳೇ ಮುಂದುವರಿಯುತ್ತವೆ ಎಂಬುದು ನಾಗರಿಕರ ಅಭಿಪ್ರಾಯವಾಗಿದೆ.
1994ರಲ್ಲಿ ಅಭಿವೃದ್ಧಿ
1994ರಲ್ಲಿ ವೀರಪ್ಪಮೊಯ್ಲಿ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ತಾಲೂಕು ವೈದ್ಯಾಧಿಕಾರಿಗಳ ಕೊಠಡಿ ಎಂದು ಕ್ಷೇತ್ರದ ಶಾಸಕ ಸಿ.ವೀರಭದ್ರಯ್ಯ ನೇತೃತ್ವದಲ್ಲಿ ಅನುದಾನ ಬಿಡುಗಡೆಯಾಗಿ ಆಸ್ಪತ್ರೆ ಅಭಿವೃದ್ಧಿ ಕಂಡಿತ್ತು. ನಂತರ ಸಿ.ಚೆನ್ನಿಗಪ್ಪ ಸಚಿವರಾಗಿದ್ದಾಗ ಒಂದಷ್ಟು ಅನುದಾನದಲ್ಲಿ ಆಸ್ಪತ್ರೆಯನ್ನು ಉನ್ನತಿಕರಿಸಲಾಗಿತ್ತು. ನಂತರ 100 ಬೆಡ್ ಆಸ್ಪತ್ರೆ ಎಂದು ಹೆಸರಿಸಿದರೂ ಸಮರ್ಪಕ ಸೌಲಭ್ಯಗಳಿಲ್ಲದೆ ರೋಗಿಗಳು ಪರದಾಡುವ ಸ್ಥಿತಿ ಮುಂದುವರಿದಿತ್ತು.
ಸಚಿವರು ಗಮನ ಹರಿಸಲಿ
ಆಸ್ಪತ್ರೆಯ ಉನ್ನತಿಕರಣದ ಹೆಸರಲ್ಲಿ ಕೇವಲ ಕಟ್ಟಡ ನಿಮಾರ್ಣ ಮಾಡಿದರೆ ಪ್ರಯೋಜನವಿಲ್ಲ. ಆಸ್ಪತ್ರೆಗೆ ಬೇಕಾದ ಸೌಲಭ್ಯ ಹಾಗೂ ಅಗತ್ಯ ವೈದ್ಯರು, ಸಿಬ್ಬಂದಿ ನೇಮಿಸಿ ತಾಲೂಕಿನ ಜನರ ಜೀವ ಉಳಿಸುವ ಕೇಂದ್ರವಾಗಿ ಬದಲಾಗಬೇಕಿದೆ. ಹೊಸ ಕಟ್ಟಡ ನಿರ್ಮಾಣ ಮಾಡಿ ಯಾವುದೇ ಸೌಲಭ್ಯ ಕಲ್ಪಿಸದೆ ಹಳೆಯ ರೀತಿಯ ನಿರ್ಲಕ್ಷ್ಯ ಮುಂದುವರಿಯದಂತೆ ಸಚಿವರು ಗಮನ ಹರಿಸಲಿ ಎಂಬುದು ತಾಲೂಕಿನ ಜನತೆಯ ಮನವಿಯಾಗಿದೆ.
ಕ್ಷೇತ್ರದ ಜನರ ಬಹುದಿನ ಬೇಡಿಕೆ ಆಗಿದ್ದ ಆಸ್ಪತ್ರೆಯ ಅಭಿವೃದ್ಧಿ ಬಗ್ಗೆ ಮುಖ್ಯಮಂತ್ರಿ ಮತ್ತು ಆರೋಗ್ಯ ಸಚಿವರೊಂದಿಗೆ ಚರ್ಚಿಸಿ ಸಮಸ್ಯೆ ಬಗ್ಗೆ ತಿಳಿಸಿದ್ದೆ. ಈಗ ಆಸ್ಪತ್ರೆ ಉನ್ನತ್ತೀಕರಣಕ್ಕೆ ಸಚಿವ ಸಂಪುಟದಲ್ಲಿ 40 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಜಿಲ್ಲೆಯಲ್ಲಿಯೇ ಮಾದರಿ ಆಸ್ಪತ್ರೆಯನ್ನಾಗಿ ಬದಲಿಸುತ್ತೇನೆ. - ಡಾ.ಜಿ ಪರಮೇಶ್ವರ ಗೃಹಸಚಿವ, ಶಾಸಕ, ಕೊರಟಗೆರೆ