

ಸಿರವಾರ: ತಾಲೂಕಿನ ವಿವಿಧ ಗ್ರಾಮಗಳಲ್ಲಿರುವ ಕುಡಿವ ನೀರಿನ ಕೆರೆಗಳನ್ನು ಇನ್ನೊಂದು ವಾರದೊಳಗೆ ಭರ್ತಿ ಮಾಡಬೇಕು ಎಂದು ಪಿಡಿಒಗಳಿಗೆ ತಹಸೀಲ್ದಾರ್ ರವಿ ಎಸ್.ಅಂಗಡಿ ಸೂಚಿಸಿದರು.
ಇದನ್ನೂ ಓದಿ: ಕೋಟೆಕೆರೆಗೆ ನದಿ ನೀರು ಇನ್ನೂ ಕನಸು
ಪಟ್ಟಣದ ತಾಪಂ ಕಚೇರಿಯಲ್ಲಿ ಸೋಮವಾರ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿದರು. ಖಾಲಿಯಿರುವ ಕೆರೆಗಳಿಗೆ ಶೀಘ್ರ ನೀರು ಬಿಡಲಾಗುತ್ತದೆ. ಕೆರೆಗಳನ್ನು ಭರ್ತಿ ಮಾಡುವ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಭದ್ರತೆ ಕಲ್ಪಿಸಲಾಗುತ್ತದೆ. ಕುಡಿವ ನೀರಿನ ವಿಷಯದಲ್ಲಿ ನಿರ್ಲಕ್ಷೃ ವಹಿಸುವಂತಿಲ್ಲ.
ಗ್ರಾಪಂನಲ್ಲಿ ಅಧ್ಯಕ್ಷರ ನೇತೃತ್ವದಲ್ಲಿ ಪೂರ್ವಭಾವಿ ಸಭೆ ಆಯೋಜಿಸಿ ಜನರಿಗೆ ನೀರಿನ ಸಮಸ್ಯೆ ಆಗದಂತೆ ಕೆರೆಗಳನ್ನು ಭರ್ತಿ ಮಾಡಿಕೊಳ್ಳಬೇಕು. ಬೇಸಿಗೆಯಲ್ಲಿ ಜನರಿಗೆ ಕುಡಿವ ನೀರು ಪೂರೈಸುವಲ್ಲಿ ಯಾವುದೇ ಕಾರಣಕ್ಕೂ ನಿಷ್ಕಾಳಜಿ ವಹಿಸುವಂತಿಲ್ಲ. ಖಾಸಗಿ ಕೊಳವೆ ಬಾವಿಗಳನ್ನು ಕೊರೆಸಬೇಕು.
ಶುದ್ಧ ಕುಡಿವ ನೀರಿನ ಘಟಕಗಳು ಚಾಲ್ತಿಯಲ್ಲಿರುವ ಬಗ್ಗೆ ಪರಿಶೀಲಿಸಬೇಕು. ನೀರಿನ ಸಮಸ್ಯೆ ಕಂಡುಬಂದಲ್ಲಿ ತಕ್ಷಣ ಪರಿಹರಿಸಬೇಕು ಎಂದು ತಿಳಿಸಿದರು. ತಾಪಂ ಇಒ ಶಶಿಧರ ಸ್ವಾಮಿ, ನರೇಗಾ ಸಹಾಯಕ ನಿರ್ದೇಶಕ ಮಂಜುನಾಥ ಜಾವೂರ್, ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ಸತೀಶ್ ಇತರರಿದ್ದರು.