ಸಾಹಿತ್ಯ ಸಮ್ಮೇಳನದಂತೆ ನಡೆದ ಮದುವೆ ಸಮಾರಂಭ

Screenshot_2024-02-26-22-18-08-76.jpg
Published on

ಬೆಳಗಾವಿ: ನಗರದ ಕೆ.ಎಚ್. ಪಾಟೀಲ ಕಲ್ಯಾಣ ಮಂಟಪದಲ್ಲಿ ಸೋಮವಾರ ಮದುವೆ ಸಮಾರಂಭವೊಂದು ಕನ್ನಡಮಯವಾಗಿ ನಡೆದು, ಗಮನ ಸೆಳೆಯಿತು.
ಖಾಸಗಿ ಕಂಪನಿಯ ಉದ್ಯೋಗಿಗಳಾದ ಬೆಳಗಾವಿ ತಾಲೂಕಿನ ಶಿಂಧೋಳಿಯ ದೀಪಕ್ ಮುಂಗರವಾಡಿ ಮತ್ತು ಚನ್ನಮ್ಮನ ಕಿತ್ತೂರು ತಾಲೂಕಿನ ದೇವಗಾಂವದ ರಾಜೇಶ್ವರಿ ವಾಂಗಿ ಅವರ ಮದುವೆ ಕನ್ನಡ ಸಾಹಿತ್ಯ ಸಮ್ಮೇಳನದ ವಾತಾವರಣ ನೆನಪಿಸಿತು.
ಪ್ರವೇಶದ್ವಾರದ ಬಳಿ ಕಿತ್ತೂರು ರಾಣಿ ಚನ್ನಮ್ಮ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆಗಳು ಸ್ವಾಗತಿಸಿದರೆ, ಇಡೀ ಕಲ್ಯಾಣ ಮಂಟಪಕ್ಕೆ ಕನ್ನಡ ಧ್ವಜ, ಕನ್ನಡದ ವರ್ಣಮಾಲೆಗಳು ಸೊಬಗು ತಂದವು. ದಿನವಿಡೀ ನಾಡು- ನುಡಿಯ ಹಾಡುಗಳು ರಂಜಿಸಿದವು. ಮದುವೆಗೆ ಬಂದವರೆಲ್ಲ ಸಾಹಿತಿಗಳ ಪುಸ್ತಕ, ಚಿತ್ರ, ಕನ್ನಡ ಧ್ವಜಗಳನ್ನು ಉಡುಗೊರೆಯಾಗಿ ನೀಡಿದರು.
ಕರುನಾಡಿನ ನಕ್ಷೆ ಸಿದ್ಧಪಡಿಸಿ 'ಸೆಲ್ಸಿ ಸ್ಪಾಟ್' ಕೂಡ ಮಾಡಲಾಗಿತ್ತು.
ಸಭಾಂಗಣಕ್ಕೆ ಕಾಲಿಟ್ಟ ನಂತರ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬಂದ ಭಾವ ಮೂಡಿತು. ಲಗ್ನಪತ್ರಿಕೆಯಲ್ಲೂ ಕನ್ನಡತನ ಕಾಣಸಿಕ್ಕಿತು. ಮುಖಪುಟದಲ್ಲಿ ಭುವನೇಶ್ವರಿ ಚಿತ್ರ, ಕನ್ನಡ ನಕ್ಷೆ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರಗಳು, ಕವಿಗಳು, ಶರಣರು, ಸಂತರು, ಚಿತ್ರರಂಗದ ತಾರೆಗಳ ಚಿತ್ರಗಳು ಇದ್ದವು. 'ಕನ್ನಡಿಗರ ಮುಂದಿರುವ ಸವಾಲುಗಳು' ಎಂಬ ವಿಷಯದ ಕುರಿತು ಒಂದು ಪುಟ ಮೀಸಲಿಡಲಾಗಿತ್ತು.
ಮದುವೆ ಸಮಾರಂಭದಲ್ಲಿ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಮತ್ತಿತರ ಗಣ್ಯರು ಅಪರೂಪದ ಮದುವೆ ಸಮಾರಂಭದಲ್ಲಿ ಪಾಲ್ಗೊಂಡು ನವದಂಪತಿಗೆ ಹರಿಸಿ, ಮೆಚ್ಚುಗೆ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net