

ಮಡಿಕೇರಿ:
ದುರ್ಬಲ ಮನಸ್ಸು ಮತ್ತು ದುರ್ಬಲ ವ್ಯಕ್ತಿತ್ವವೇ ಮನುಷ್ಯನಲ್ಲಿ ವ್ಯಸನ ಬೆಳೆಯಲು ಪ್ರಮುಖ ಕಾರಣ ಎಂದು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಫಾಯಸ್ ಅಭಿಪ್ರಾಯಪಟ್ಟರು. ವಿಶ್ವ ತಂಬಾಕು ವಿರೋಧಿ ದಿನಾಚರಣೆ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಕೊಡಗು ವಿಶ್ವವಿದ್ಯಾಲಯ ವತಿಯಿಂದ ಚಿಕ್ಕ ಅಳುವಾರದಲ್ಲಿ ಇರುವ ವಿಶ್ಚವಿದ್ಯಾಲಯ ಕ್ಯಾಂಪಸ್‌ನಲ್ಲಿ ಶುಕ್ರವಾರ ಏರ್ಪಡಿಸಿದ್ದ ಮಾದಕ ವಸ್ತುಗಳ ಬಗ್ಗೆ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಕ್ಕಳನ್ನು ಬೆಳೆಸುವುದು ಸೂಕ್ಷ್ಮ ಕಲೆ. ಇದು ಮನೆಯಿಂದ ಪ್ರಾರಂಭ ಆಗಬೇಕು. ಆದರೆ ಈಗ ಮನೆಯ ವಾತಾವರಣವೇ ಬದಲಾಗಿದೆ. ಮನೆಯಲ್ಲಿ ವ್ಯಸನಿಗಳು ಇದ್ದರೆ ಅಂಥ ಮನೆಯಲ್ಲಿ ಶೇ. 10ರಷ್ಟು ಪ್ರಕರಣಗಳಲ್ಲಿ ಜವಾಬ್ದಾರಿಯುತ ಮಕ್ಕಳು ಹುಟ್ಟುತ್ತಾರೆ. ಶೇ.10 ಪ್ರಕರಣಗಳಲ್ಲಿ ಹೊಂದಾಣಿಕೆ ಪ್ರವೃತ್ತಿ ಬೆಳೆಸಿಕೊಳ್ಳುತ್ತಾರೆ. ಶೇ.30ರಷ್ಟು ಮಕ್ಕಳು ಗೊಂದಲಕ್ಕೆ ಒಳಗಾಗುತ್ತಾರೆ. ಉಳಿದ ಶೇ. 70 ಮಕ್ಕಳು ವ್ಯಸನಕ್ಕೆ ದಾಸರಾಗುವುದು ಖಚಿತ.
ಜಗತ್ತಿನ ಸ್ಲೋ ಕಿಲ್ಲಿಂಗ್ ಪಾಯ್ಸನ್ ಎಂದರೆ ಅದು ವ್ಯಸನ. ಮಾದಕ ವಸ್ತುಗಳ ಬಳಕೆ ಮತ್ತು ಮಾರಾಟದಲ್ಲಿ ಭಾರತ 2ನೇ ಸ್ಥಾನದಲ್ಲಿರುವುದು ದುರಂತ. ಪ್ರವಾಸಿ ದೇಶಗಳಾಗಿ ಗುರುತಿಸಿಕೊಂಡಿರುವ ಬರ್ಮಾ, ಥಾಯ್ಲೆಂಡ್, ಲಾವೋಸ್‌ಗೆ ಮುಖ್ಯ ಟಾರ್ಗೆಟ್ ಭಾರತವೇ ಆಗಿದೆ. ಇಲ್ಲಿಯ ಮಕ್ಕಳನ್ನು ಹಾಳು ಮಾಡಲು ಅಲ್ಲಿನವರು ನೋಡುತ್ತಿರುತ್ತಾರೆ. ಕೆಟ್ಟ ಗುಣದ ನೆರೆ ರಾಷ್ಟçಗಳೂ ಇದಕ್ಕೆ ತಮ್ಮ ಕೊಡುಗೆ ನೀಡುತ್ತಿವೆ. ಗುಜರಾತ್ ಗೋದಿಯ ಕಣಜ ಎಂದು ಗುರುತಿಸಿಕೊಂಡಿತ್ತು. ಈಗ ಅಲ್ಲಿ ಗಾಂಜಾ ಬಳಕೆ ಯಥೇಚ್ಛವಾಗಿದ್ದು ಗಾಂಜಾ ಕಣಜ ಆಗಿದೆ. ಕರ್ನಾಟಕದಲ್ಲೂ ಗಾಂಜಾ ಬಳಕೆ ಅಧಿಕೃತ ಮಾಡಲು ಕೂಗು ಎದ್ದಿರುವುದು ವಿಪರ್ಯಾಸ. ಮೇರು ನಟರೇ ಗುಟ್ಕಾ ಜಾಹೀರಾತು ಕೊಟ್ಟರೆ ಹೀರೋ ಅವರನ್ನು ಎಂದು ಪರಿಗಣಿಸುವುದು ಹೇಗೆ? ಎಂದು ಪ್ರಶ್ನಿಸಿದರು.
ವ್ಯಸನ ಎನ್ನುವುದು ಗುಣವಾಗದ ಮಾನಸಿಕ ರೋಗ. ಮನೆಯ ವಾತಾವರಣ ಸರಿ ಇಲ್ಲದಾಗ ಮಕ್ಕಳು ಖಿನ್ನತೆಗೆ ಒಳಗಾಗುತ್ತಾರೆ. ಮನೋರೋಗ ಕಾರಣದಿಂದ ವ್ಯಸನಕ್ಕೆ ಬಲಿಯಾಗಬಹುದು. ವ್ಯಸನವೂ ಮನೋರೋಗಕ್ಕೆ ಕಾರಣವಾಗುತ್ತದೆ. ಎಲ್ಲರೂ ಒಳ್ಳೆಯ ಉದ್ದೇಶದಿಂದ ವ್ಯಸನಕ್ಕೆ ದಾಸ ಆಗುತ್ತಾರೆ. ಆದರೆ ನಂತರ ಹೊರಬರಲು ಆಗುವುದಿಲ್ಲ. ಎಲ್ಲಾ ವಿದ್ಯಾಸಂಸ್ಥೆಗಳ ಕ್ಯಾಂಪಸ್‌ಗಳಲ್ಲೂ ಡ್ರಗ್ಸ್ ಜಾಲ ಇದೆ ಎನ್ನುವುದೇ ಆತಂಕ ಹುಟ್ಟಿಸುವ ಸಂಗತಿಯಾಗಿದೆ. ವಿದ್ಯಾರ್ಥಿಗಳ ಕೈಗೆ ಸುಲಭವಾಗಿ ಮಾದಕ ವಸ್ತುಗಳು ಸಿಗುತ್ತಿದೆ ಎಂದು ವಿಷಾಧಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಕೊಡಗು ವಿ.ವಿ. ಕುಲಸಚಿವ ಡಾ. ಸೀನಪ್ಪ ಮಾತನಾಡಿ ಮಕ್ಕಳನ್ನು ಸುಂಸ್ಕೃತರನ್ನಾಗಿ ಮಾಡಲು ಒಳ್ಳೆಯ ಮನೆ, ಒಳ್ಳೆಯ ಶಾಲೆ ಇದ್ದರೆ ಸಾಕು ಎಂದರು.
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಅಭಿಮನ್ಯು ಕುಮಾರ್ ಮಾತನಾಡಿ ವಿದ್ಯಾರ್ಥಿಗಳು ಮತ್ತು ಯುವ ಜನಾಂಗದಿAದ ಮಾತ್ರ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದರು.
ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಎನ್. ಚಂದ್ರಮೋಹನ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಸೋಮವಾರಪೇಟೆ ತಾಲೂಕು ಯೋಜನಾಧಿಕಾರಿ ಹೆಚ್. ರೋಹಿತ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕಿ ಲೀಲಾವತಿ, ಉಪನ್ಯಾಸಕ ಝಮೀರ್ ಅಹಮ್ಮದ್ ವೇದಿಕೆಯಲ್ಲಿ ಇದ್ದರು.