ಬಬಲೇಶ್ವರದಲ್ಲಿ ಸ್ವಾಭಿಮಾನದ ಅಲೆ - ಬಸವರಾಜ ಹೊನವಾಡ

Basavaraj Honawad (JDS)
ವಿಜಯಪುರ ಖಾಸಗಿ ಹೋಟೆಲ್‌ನಲ್ಲಿ ಜೆಡಿಎಸ್ ಅಭ್ಯರ್ಥಿ ಬಸವರಾಜ ಹೊನವಾಡ ಸುದ್ದಿಗೋಷ್ಠಿ ನಡೆಸಿದರು. ಅಬ್ದುಲ್ಸಾಬ ಉಮರಾಣಿ, ಅಬ್ದುಲ್‌ಸಾಬ ಮುಲ್ಲಾ, ಶಂಕರ ಹಾಲಳ್ಳಿ ಮತ್ತಿತರರಿದ್ದಾರೆ.
Published on

ವಿಜಯಪುರ: ಕಾಗೆ ಕಾಶಿಗೆ ಹೋಗಿ ಬಂದ ಮಾತ್ರಕ್ಕೆ ಕೋಗಿಲೆ ಆಗಲ್ಲ. ವಿಜುಗೌಡ ಅತ್ತ ಮಾತ್ರಕ್ಕೆ ಅನುಕಂಪ ಸಿಗಲ್ಲ. ಕಾಂಗ್ರೆಸ್ ಎಂಎಲ್‌ಸಿ ಸುನೀಲಗೌಡ ಕೈಗೆ ‘ಸಲೈನ್’ ಹಚ್ಚಿಕೊಂಡು ಬಂದರೆ ಮಾಡಿದ ಪಾಪ ತೊಳೆಯಲ್ಲ. ಬಬಲೇಶ್ವರದಲ್ಲಿ ಈ ಬಾರಿ ದರ್ಪ, ದಬ್ಬಾಳಿಕೆ ನಡೆಯಲ್ಲ. ಕ್ಷೇತ್ರ ಅಭಿವೃದ್ಧಿಯೂ ಆಗಿಲ್ಲ, ಹಣ-ಅನುಕಂಪದ ಅಲೆಯಿಲ್ಲ. ಕೇವಲ ಜೆಡಿಎಸ್‌ನ ಸ್ವಾಭಿಮಾನದ ಅಲೆಯಿದೆ ಎಂದು ಪಕ್ಷದ ಅಭ್ಯರ್ಥಿ ಬಸವರಾಜ ಹೊನವಾಡ ಹೇಳಿದರು.

ಬಬಲೇಶ್ವರ ಕ್ಷೇತ್ರ ಮೂಲ ಸೌಕರ್ಯಗಳಿಂದ ವಂಚಿತವಾಗಿದೆ. ಪ್ರಶ್ನೆ ಮಾಡಿದರೆ ದಬ್ಬಾಳಿಕೆ, ದರ್ಪ ಮೆರೆಯಲಾಗುತ್ತಿದೆ. ತುಂಬಿದ ಸಭೆಯಲ್ಲಿಯೇ ಜನ ಪ್ರಶ್ನೆ ಮಾಡುತ್ತಿರುವುದು ಗಮನಿಸಿದರೆ ಕಾಂಗ್ರೆಸ್‌ನ ಅಸಲಿಯತ್ತು ಏನೆಂಬುದು ಎಲ್ಲರಿಗೂ ಗೊತ್ತಾಗಿದೆ. ಇತ್ತೀಚೆಗೆ ದೇವಾಪುರದಲ್ಲಿ ಯುವಕನೊಬ್ಬ ಪ್ರಶ್ನೆ ಮಾಡಿದರೆ ಕಾಂಗ್ರೆಸ್ ಅಭ್ಯರ್ಥಿ ಕಪಾಳಮೋಕ್ಷ ಮಾಡಿದ್ದಾರೆ. ಇದು ದಬ್ಬಾಳಿಕೆಗೆ ಹಿಡಿದ ಕೈಗನ್ನಡಿ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಹರಿಹಾಯ್ದರು.

ಬಿಜೆಪಿ ಅಭ್ಯರ್ಥಿಯನ್ನು ಜನ ಮೂರು ಬಾರಿ ತಿರಸ್ಕರಿಸಿದರೂ ಆ ಪಕ್ಷ ಮತ್ತದೇ ಅಭ್ಯರ್ಥಿಗೆ ಟಿಕೆಟ್ ನೀಡುವುದನ್ನು ಗಮನಿಸಿದರೆ ಹೊಂದಾಣಿಕೆ ರಾಜಕಾರಣ ಎಷ್ಟರ ಮಟ್ಟಿಗೆ ಬೇರೂರಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಬಿಜೆಪಿ ಅಭ್ಯರ್ಥಿ ಮೂಲಕ ತಮ್ಮ ಗೆಲುವಿನ ಹಾದಿ ಸುಗಮಗೊಳಿಸುವ ಕಾಂಗ್ರೆಸ್ ಆಟ ಇನ್ಮುಂದೆ ನಡೆಯಲ್ಲ. ಹೊಂದಾಣಿಕೆಗೆ ಕಡಿವಾಣ ಹಾಕಲೆಂದೇ ಜೆಡಿಎಸ್‌ಗೆ ಜನ ಮಣೆ ಹಾಕುತ್ತಿದ್ದಾರೆಂದರು.

ಒಬ್ಬರು ಆಸ್ತಿ ಮಾಡಲು ರಾಜಕಾರಣಕ್ಕೆ ಬಂದರೆ, ಇನ್ನೊಬ್ಬರು ಹಣ ಹಂಚಿ ಅಧಿಕಾರಕ್ಕೆ ಬರುತ್ತಿದ್ದಾರೆ. ಬಬಲೇಶ್ವರದಲ್ಲಿ ಜನ ಮಾತ್ರ ಮತ ಹಾಕಿ ಬಡವರಾಗುತ್ತಿದ್ದಾರೆ. ಇತ್ತ ವಿಜುಗೌಡ ಪಾಟೀಲ ಮತ್ತು ಎಂ.ಬಿ. ಪಾಟೀಲ ಮಾತ್ರ ಶ್ರೀಮಂತರಾಗುತ್ತಿದ್ದಾರೆ. ನಿಮ್ಮ ಸಂಪತ್ತಿಗೆ ನನ್ನ ಸವಾಲಿದೆ ಎಂದರು.

ಮುಖಂಡ ಅಬ್ದುಲ್ ಸಾಬ ಉಮರಾಣಿ ಮಾತನಾಡಿ, ಅಲ್ಪಸಂಖ್ಯಾತರು, ದೀನರು, ದಲಿತರು, ಶೋಷಿತರು ಜೆಡಿಎಸ್ ಪರ ಇದ್ದೇವೆ ಎಂದರು. ಮುಖಂಡರಾದ ಅಬ್ದುಲ್‌ಸಾಬ ಮುಲ್ಲಾ, ಶಂಕರ ಹಾಲಳ್ಳಿ, ಶಿವಾಜಿ ಸಿಂಗಾಡಿ, ರಂಜಾನ್ ಜಮಾದಾರ, ಸೋಮನಾಥ ಧನಗೊಂಡ, ಬೀರಪ್ಪ ಟಕ್ಕಳಕಿ, ಚೇತನ ಗವಾರಿ, ರಾಜೇಶ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net