ನೀರೂರಿಸಿದ ಬಟರ್‌ಫ್ರೂಟ್ ಖಾದ್ಯ

A watered down butterfruit dish
Published on

ಸುನಿಲ್ ಪೊನ್ನೇಟಿ ಮಡಿಕೇರಿ:

ಬಟರ್ ಫ್ರೂಟ್ ಎಂದರೆ ಸಕ್ಕರೆ, ಬೆಲ್ಲ ಅಥವಾ ಜೇನಿನ ಜತೆ ಮಿಶ್ರ ಮಾಡಿ ಸವಿದು ರುಚಿ ನೋಡಿಯಷ್ಟೇ ಗೊತ್ತಿದ್ದವರಿಗೆ ಶನಿವಾರ ಚೆಟ್ಟಳ್ಳಿಯಲ್ಲಿರುವ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದಲ್ಲಿ ನಡೆದ ಬೆಣ್ಣೆ ಹಣ್ಣಿನ ಕ್ಷೇತ್ರೋತ್ಸವ ಮತ್ತು ವೈವಿಧ್ಯತಾ ಮೇಳದಲ್ಲಿ ಆಶ್ಚರ್ಯ ಕಾದಿತ್ತು. ಬೆಣ್ಣೆ ಹಣ್ಣಿನಿಂದ ಇಷ್ಟೆಲ್ಲಾ ಖಾದ್ಯಗಳನ್ನು ಮಾಡಬಹುದಾ ಎನ್ನುವಷ್ಟರ ಮಟ್ಟಿಗೆ ಇಲ್ಲಿ ವೈವಿಧ್ಯಮಯ ತಿನಿಸುಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಬೆಣ್ಣೆ ಹಣ್ಣಿನ ಬಳಕೆಯ ಹೊಸ ಸಾಧ್ಯತೆಗಳನ್ನು ತೆರೆದಿಡುವ ಮೂಲಕ ಇಲ್ಲಿ ಪ್ರಯೋಗಶೀಲರು ಗಮನಸೆಳೆದರು.

ಬಟರ್‌ಫ್ರೂಟ್ ಕೇಕ್, ಅವಾಕಡೋ ಮೂಸ್, ಅವಾಕಡೋ ಟೋಸ್ಟ್, ಅವಾಕೊಡೋ ಪರೋಟ, ಅವಾಕಡೋ ಬಿಸ್ಕಟ್, ಅವಾಕಡೋ ಕಟ್ಲೆಟ್, ಅವಾಕಡೋ ಸ್ಯಾಂಡ್‌ವಿಚ್, ಅವಾಕಡೋ ಡ್ರೆöÊ ಫ್ರೂಟ್ ಮಿಕ್ಸ್, ಅವಾಕಡೋ ಚೀಸ್ ಕೇಕ್, ಅವಾಕಡೋ ಮಫಿನ್ಸ್, ಅವಾಕಡೋ ಬನಾನ ಕೇಕ್, ಅವಾಕಡೋ ಫ್ರೂಡ್ ಸಲಾಡ್, ಅವಾಕಡೋ ಐಸ್‌ಕ್ರೀಮ್, ಅವಾಕಡೋ ಮಿಲ್ಕ್ ಶೇಕ್… ಹೀಗೆ ಬೆಣ್ಣೆ ಹಣ್ಣು ಉಪಯೋಗಿಸಿ ಮಾಡಿದ ಖಾದ್ಯಗಳು ಒಂದಕ್ಕಿAತ ಒಂದು ಆಕರ್ಷಕವಾಗಿದ್ದು, ಬಟರ್ ಫ್ರೂಟ್‌ನಿಂದ ಇಷ್ಟೆಲ್ಲಾ ಮಾಡಬಹುದಾ ಎಂದು ಬೆಣ್ಣೆ ಹಣ್ಣಿನ ಕ್ಷೇತ್ರೋತ್ಸವ ಮತ್ತು ವೈವಿಧ್ಯತಾ ಮೇಳಕ್ಕೆ ಆಗಮಿಸಿದ್ದವರು ಹುಬ್ಬೇರಿಸುವಂತೆ ಆಗಿತ್ತು.

ಬೆಣ್ಣೆ ಹಣ್ಣಿನ ಹಣ್ಣು, ಬೀಜ, ಸಿಪ್ಪೆ ಎಲ್ಲವನ್ನೂ ಒಂದಿಲ್ಲೊAದು ಕಾರ್ಯಕ್ಕೆ ಉಪಯೋಗಿಸಬಹುದಾಗಿದೆ. ಹಾಗಾಗಿ ಈ ಹಣ್ಣಿನಲ್ಲಿ ತ್ಯಾಜ್ಯ ಎನ್ನುವುದು ಇಲ್ಲದಂತೆ ಪ್ರಯೋಗಶೀಲರು ಬಳಸಿಕೊಳ್ಳುತ್ತಿದ್ದಾರೆ. ಬಟರ್‌ಫ್ರೂಟ್ ಬೀಜದಿಂದ ಎಣ್ಣೆ ತೆಗೆದು ಅಡುಗೆಗೆ ಬಳಸಬಹುದು. ಸಿಪ್ಪೆಯನ್ನು ಒಣಗಿಸಿ ಪುಡಿ ಮಾಡಿ ತಲೆಕೂದಲಿನ ಆರೋಗ್ಯ ರಕ್ಷಣೆಗೂ ಉಪಯೋಗಿಸಬಹುದು. ಇಂಥ ಉತ್ಪನ್ನಗಳನ್ನೂ ಪ್ರದರ್ಶನದಲ್ಲಿ ಇಡಲಾಗಿತ್ತು.

ಇದೇ ಕಾರ್ಯಕ್ರಮದಲ್ಲಿ ವಿವಿಧೆಡೆಯಿಂದ ಸಂಗ್ರಹಿಸಿ ತರಲಾಗಿದ್ದ ವೈವಿಧ್ಯಮಯ ತಳಿಯ ಬೆಣ್ಣೆಹಣ್ಣುಗಳನ್ನೂ ಪ್ರದರ್ಶನಕ್ಕೆ ಇಡಲಾಗಿತ್ತು. ಸಾಮಾನ್ಯ ಅಡಿಕೆ ಗಾತ್ರದಿಂದ ಕುಂಬಳಕಾಯಿ ಗಾತ್ರದ ತನಕದ ಬೆಣ್ಣೆಹಣ್ಣುಗಳು ಇಲ್ಲಿದ್ದವು. ಹಸಿರು, ಹಳದಿ, ಕಂದು ಬಣ್ಣದ ಬಟರ್‌ಫ್ರೂಟ್‌ಗಳನ್ನೂ ಪ್ರದರ್ಶನಕ್ಕೆ ಇಡಲಾಗಿತ್ತು.

ಚೆಟ್ಟಳ್ಳಿ ತೋಟಗಾರಿಕೆ ಪ್ರಾಯೋಗಿಕಾ ಕೇಂದ್ರದಲ್ಲೇ ಅಭಿವೃದ್ಧಿಪಡಿಸಲಾದ ಉತ್ತಮ ಇಳುವರಿ ಕೊಡುವ ಕೂರ್ಗ್ ಅರ್ಕಾ ರವಿ, ಅರ್ಕಾ ಸುಪ್ರೀಮ್ ಸೇರಿದಂತೆ ವಿವಿಧ ತಳಿಯ ಬೆಣ್ಣೆಹಣ್ಣುಗಳೂ ಇಲ್ಲಿದ್ದವು. ವಿದೇಶಿ ತಳಿಯ ಬೆಣ್ಣೆಹಣ್ಣುಗಳು ಸೇರಿದಂತೆ 150 ರೀತಿಯ ಹಣ್ಣುಗಳನ್ನು ಇಲ್ಲಿ ಪ್ರದರ್ಶನಕ್ಕೆ ಇಡಲಾಗಿತ್ತು. ಹಣ್ಣುಗಳ ಪ್ರದರ್ಶನ ಮತ್ತು ಖಾದ್ಯಗಳ ಪ್ರದರ್ಶನ ಸ್ಪರ್ಧೆಯನ್ನೂ ಆಯೋಜಿಸಲಾಗಿತ್ತು.

ಸಂಪೂರ್ಣ ಬೆಣ್ಣೆ ಹಣ್ಣುಮಯವಾಗಿದ್ದ ಈ ಕಾರ್ಯಕ್ರಮದಲ್ಲಿ ಮುಖ್ಯದ್ವಾರದ ಅಲಂಕಾರಕ್ಕೂ ಬೆಣ್ಣೆ ಹಣ್ಣು, ಬೆಣ್ಣೆ ಹಣ್ಣಿನ ಗಿಡದ ಎಲೆಗಳು, ಟೊಂಗೆಗಳನ್ನು ಬಳಸಿಕೊಳ್ಳುವ ಮೂಲಕ ಕಾರ್ಯಕ್ರಮಕ್ಕೆ ಆಗಮಿಸಿದವರ ಮನಸ್ಸನ್ನು ಸೆಳೆಯುವ ಪ್ರಯತ್ನ ಮಾಡಲಾಯಿತು. ಬೆಣ್ಣೆ ಹಣ್ಣಿನ ಕ್ಷೇತ್ರೋತ್ಸವ ಮತ್ತು ವೈವಿಧ್ಯತಾ ಮೇಳದಲ್ಲಿ ಪಾಲ್ಗೊಳ್ಳಲು ಆಗಮಿಸಿದವರನ್ನು ನೋಂದಾಯಿಸಿಕೊAಡ ನಂತರ ವೆಲ್‌ಕಮ್ ಡ್ರಿಂಕ್ ರೂಪದಲ್ಲಿ ಬೆಣ್ಣೆ ಹಣ್ಣಿನ ಮಿಲ್ಕ್ ಶೇಕ್ ಕೊಟ್ಟು ಸ್ವಾಗತಿಸಿದ್ದು ಕೂಡ ವಿಶೇಷವಾಗಿತ್ತು.

ಡಯಟಿಷಿಯನ್ ಬಳಿಗೆ ಹೋದರೆ ಅವರು ಮೊದಲು ಶಿಫಾರಸ್ಸು ಮಾಡುವುದೇ ಅವಾಕಡೋ ತಿನ್ನಿ ಎಂದು. ಮೂರು ಹೊತ್ತು ಬೇಕಾದರೂ ಇದನ್ನು ತಿನ್ನಿ ಎಂದು ಅವರು ಹೇಳುತ್ತಾರೆ. ಏಕೆಂದರೆ ಇದರಲ್ಲಿ ಕೊಬ್ಬಿನ ಅಂಶ ಕಡಿಮೆ ಇದೆ. ಕ್ಯಾಲೋರಿ ಜಾಸ್ತಿ ಇದೆ. ವಿಟಮಿನ್ ಇ, ವಿಟಮಿನ್ ಸಿ ಸೇರಿ 7-8 ವಿಟಮಿನ್‌ಗಳು ಇದರಲ್ಲಿ ಇದ್ದು, ಒಂದೇ ಹಣ್ಣಿನಲ್ಲಿ ಎಲ್ಲಾ ರೀತಿಯ ಆರೋಗ್ಯಕರ ಅಂಶಗಳು ಇರುವುದರಿಂದ ಇದು ತುಂಬಾ ಒಳ್ಳೆಯ ಹಣ್ಣು. ಕೇಕ್, ಮಫಿನ್ಸ್, ಮಿಲ್ಕ್ಶೇಕ್, ಸಲಾಡ್, ಅವಾಕಡೋ ಪೌಡರ್, ಅವಾಕಡೋ ಚಟ್ನಿ ಹೀಗೆ ವೈವಿಧ್ಯಮಯ ಖಾದ್ಯಗಳನ್ನು ಇದರಿಂದ ಮಾಡಬಹುದಾಗಿದೆ.
ರಶ್ಮಿ ಭಾನುಪ್ರಕಾಶ್, ಮಹಿಳಾ ಉದ್ಯಮಿ, ಗೋಣಿಕೊಪ್ಪ

ಕುಶಾಲನಗರದಿಂದ ದುಬಾರೆಗೆ ತೆರಳುವ ರಸ್ತೆ ಬದಿಯಲ್ಲಿ ನಮ್ಮ ಕೆಫೆ ಇದೆ. ನಮ್ಮದೇ ತೋಟದಲ್ಲಿ ಬೆಳೆದ ಬಟರ್‌ಫ್ರೂಟ್, ಕೊಕೋ, ಕಾಫಿ ಮತ್ತಿತರ ಉತ್ಪನ್ನಗಳನ್ನು ಬಳಸಿಕೊಂಡು ಖಾದ್ಯಗಳನ್ನು ತಯಾರಿಸಿ ನಮ್ಮಲ್ಲಿಗೆ ಬರುವ ಪ್ರವಾಸಿಗರಿಗೆ ಕೊಡುತ್ತೇವೆ. ಈ ಮೂಲಕ ಕೊಡಗಿನ ಉತ್ಪನ್ನಗಳ ಬಗ್ಗೆ ಮಾಹಿತಿ ಕೊಡಲಾಗುತ್ತಿದೆ. ಬಟರ್‌ಫ್ರೂಟ್ ಬಳಸಿ ವಿವಿಧ ರೀತಿಯ ಖಾದ್ಯಗಳನ್ನು ಮಾಡಬಹುದಾಗಿದ್ದು, ಗ್ರಾಹಕರು ತುಂಬಾ ಇಷ್ಟಪಡುತ್ತಾರೆ.
ರಾಹುಲ್, ಉದ್ಯಮಿ, ರಸೂಲ್‌ಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net