ಬೇಸಿಗೆ ಬಿಸಿಲಿಗೆ ಬತ್ತಿದ ಜಲಮೂಲ

02-01
Published on

ಕುಸಿದ ಅಂತರ್ಜಲಮಟ್ಟ-ನೀರಿಗೆ ಹಾಹಾಕಾರ

ಎನ್​.ಮುನಿವೆಂಕಟೇಗೌಡ, ಕೋಲಾರ: ಜಿಲ್ಲೆಯಲ್ಲಿ ಬೇಸಿಗೆ ಪ್ರಾರಂಭದ ಹಂತದಲ್ಲಿಯೇ ಕೆರೆಗಳಲ್ಲಿ ನೀರು ಬರಿದಾಗಿದ್ದು, ಅಂತರ್ಜಲ ಮಟ್ಟ ದಿನೇದಿನೆ ಕುಸಿಯುತ್ತಿದ್ದು, ಮುಂದಿನ ಬೇಸಿಗೆಯನ್ನು ಯಾವ ರೀತಿ ಎದುರಿಸಬೇಕು ಎಂಬುದು ರೈತರ ಚಿಂತಿಯಾಗಿದೆ.

ಜಿಲ್ಲೆಯಲ್ಲಿ 2,520 ಕೆರೆಗಳಿದ್ದು, ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಗೆ ಬರುವ 138 ಕೆರೆಗಳು, ಪಂಚಾಯತ್​ರಾಜ್​ ಇಲಾಖೆಯ ವ್ಯಾಪ್ತಿಗೆ 2,382 ಕೆರೆಗಳಿದ್ದು, ಜತೆಗೆ ಗ್ರಾಮೀಣ ಕುಡಿಯುವ ನೀರಿನ ಇಲಾಖೆಯ ವ್ಯಾಪ್ತಿಗೆ ಕೋಲಾರ ನಗರದ ಅಮ್ಮೇರನಹಳ್ಳಿ ಮತ್ತು ಬೇತಮಂಗಳ ಕೆರೆಗಳು ಸೇರಲಿವೆ. ಕೆ.ಸಿ.ವ್ಯಾಲಿಯ ಮೊದಲನೇ ಫೇಸ್​ನಲ್ಲಿ 146 ಕೆರೆಗಳಿಗೆ ನೀರು ಹರಿಸಲಾಗಿತ್ತು. 2ನೇ ಫೇಸ್​ನಲ್ಲಿ 272 ಕೆರೆಗಳಿಗೆ ನೀರು ಹರಿಸಲು ಪೈಪ್​ ಲೈನ್​ ಕಾಮಗಾರಿ ನಡೆಯುತ್ತಿದೆ. ಈಗಾಗಲೇ ಮೊದಲನೇ ಹಂತದಲ್ಲಿ ಕಳೆದ 2 ವರ್ಷಗಳ ಹಿಂದೆ ಕೆ.ಸಿ.ವ್ಯಾಲಿ ನೀರು 146 ಕೆರೆಗಳಿಗೆ ನೀರು ಹರಿಸಲಾಗಿತ್ತು. ಆಗ ಜಿಲ್ಲೆಯು ಮಳೆಯು ಚೆನ್ನಾಗಿ ಆದ ಕಾರಣ ಮಳೆ ನೀರಿನ ಜೊತೆಗೆ ಕೆ.ಸಿ.ವ್ಯಾಲಿ ನೀರು ತುಂಬಿ ಕೆರೆಗಳು ಕೋಡಿ ಹರಿದವು. ಇದರ ಜೊತೆಗೆ ಉಳಿದ ಕೆರೆಗಳು ಕೋಡಿ ಹರಿದಿತ್ತು. ಕಳೆದ 2 ವರ್ಷಗಳಿಂದ ಜಿಲ್ಲೆಯಲ್ಲಿ ಸರಿಯಾಗಿ ಮಳೆಯಾಗದ ಕಾರಣ ಕೆ.ಸಿ.ವ್ಯಾಲಿ ನೀರು ಹರಿಯುವ ಕೆರೆಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಜಿಲ್ಲೆಯಾದ್ಯಂತ ಶೇ.80 ಕೆರೆಗಳಲ್ಲಿ ನೀರು ಖಾಲಿಯಾಗಿದೆ. ಕೆ.ಸಿ.ವ್ಯಾಲಿ ನೀರು ಕೋಲಾರ ತಾಲೂಕು, ಶ್ರೀನಿವಾಸಪುರ ತಾಲೂಕಿನ ಕಸಬಾ ಹೋಬಳಿ ಹಾಗೂ ಮಾಲೂರು ತಾಲೂಕಿನ ಕೆಲ ಕೆರೆಗಳಲ್ಲಿ ಮಾತ್ರ ಶೇ.20 ಇದ್ದು, ಉಳಿದಂತೆ ಮುಳಬಾಗಿಲು, ಕೆಜಿಎಫ್​, ಬಂಗಾರಪೇಟೆ, ಶ್ರೀನಿವಾಸಪುರ ತಾಲೂಕಿನ ಬಹುತೇಕ ಕೆರೆಗಳಲ್ಲಿ ನೀರು ಬರಿದಾಗಿದೆ.

ಅಧಿಕಾರಿಗಳಲ್ಲೂ ಆತಂಕ: ಮುಳಬಾಗಿಲು ತಾಲೂಕಿನಲ್ಲಿ 34ಕ್ಕೂ ಹೆಚ್ಚು ಕೊಳವೆ ಬಾವಿಗಳಲ್ಲಿ ಅಂತರ್ಜಲ ಕುಸಿದಿದ್ದು, ಜಿಲ್ಲೆಯ ಎಲ್ಲ ತಾಲೂಕಿನಲ್ಲಿ ಅಂತರ್ಜಲ ಕುಸಿದಿರುವ ಬಗ್ಗೆ ಮಾಹಿತಿ ಲಭ್ಯವಾಗಬೇಕಾಗಿದೆ ಎಂದು ಜಿಲ್ಲಾ ಪಂಚಾಯಿತಿ ಇಲಾಖೆಯ ಅಧಿಕಾರಿಯೊಬ್ಬರು ವಿಜಯವಾಣಿಗೆ ಮಾಹಿತಿ ನೀಡಿದ್ದಾರೆ. ಕಳೆದ 2 ವರ್ಷಗಳಿಂದ ಯಾವುದೇ ಬೆಳೆಗಳಿಲ್ಲದೆ ನಷ್ಟ ಅನುಭವಿಸಿದ್ದ ರೈತರು ಜೂನ್​ನಿಂದ ಪ್ರಾರಂಭವಾಗುವ ಟೊಮ್ಯಾಟೊ ಸುಗ್ಗಿಗೆ ಟೊಮ್ಯಾಟೊ ಸಸಿಗಳನ್ನು ನಾಟಿ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ಈಗಾಗಲೇ ಕೊಳವೆ ಬಾವಿಗಳಲ್ಲಿ ಅಂತರ್ಜಲ ಕುಸಿಯುತ್ತಿರುವುದರಿಂದ ಟೊಮ್ಯಾಟೊ ಸುಗ್ಗಿಯನ್ನು ಯಾವ ರೀತಿ ಎದುರಿಸುವುದು ಎಂಬುದು ರೈತರಲ್ಲಿ ಆತಂಕ ಉಂಟಾಗಿದೆ. ಕಳೆದ 15 ದಿನಗಳಿಂದ ಬಿಸಿಲಿನ ತಾಪಮಾನ ಹೆಚ್ಚಾಗತೊಡಗಿದ್ದು, ಮಾರ್ಚ್​&ಏಪ್ರಿಲ್​ ಕಳೆಯುವುದು ಹೇಗೆ ಎಂಬುದು ಆಂತಕ ಶುರುವಾಗಿದ್ದು, ಕುಡಿಯಲು ಮತ್ತು ಜಾನುವಾರುಗಳಿಗೆ ನೀರಿನ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ನೀರಿನ ಸಮಸ್ಯೆಯನ್ನು ನಿವಾರಿಸಲು ಜಿಲ್ಲಾಪಂಚಾಯತ್​ ಇಲಾಖೆ ಸಿದ್ಧವಾಗಿದ್ದು, ಈಗಾಗಲೇ ಅಂಜತರ್ಜಲ ಕುಸಿದಿರುವ ಕೊಳವೆ ಬಾವಿಗಳ ಪಟ್ಟಿ ತಯಾರಿಸಲಾಗುತ್ತಿದೆ. ಹೊಸದಾಗಿ ಬೋರ್​ ಕೊರೆಯಲು ಸರ್ಕಾರದಿಂದ ಅನುಮತಿ ಇಲ್ಲ. ಕೊಳವೆ ಬಾವಿಯ ಆಳದಲ್ಲಿ ರೀ ಡ್ರಿಲ್ಲಿಂಗ್​ ಮಾಡಿಸಬಹುದು. ಓಬಿರಾಯನ ಕಾಲದ ಪಂಪು ಮೋಟಾರು ಬದಲಾಯಿಸಲು ಅವಕಾಶವಿದೆ. ಜತೆಗೆ ಖಾಸಗಿ ಕೊಳವೆ ಬಾವಿಗಳನ್ನು ಗುತ್ತಿಗೆ ಪಡೆದು ಅದರ ಮೂಲಕ ನೀರು ಕೊಡುವ ಕೆಲಸ ಮಾಡಲಾಗುವುದು. ಕೊನೆಯದಾಗಿ ಟ್ಯಾಂಕರ್​ ಮೂಲಕ ನೀರು ಕೊಡುವ ವ್ಯವಸ್ಥೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.  -ಬಿ.ಶಿವಕುಮಾರ್​ ಉಪಕಾರ್ಯದರ್ಶಿ, ಜಿಲ್ಲಾಪಂಚಾಯತ್​ ಕೆರೆಗಳಲ್ಲಿ ಈಗಾಗಲೇ ಶೇ.80 ನೀರು ಖಾಲಿಯಾಗಿದೆ. ಕೆ.ಸಿ.ವ್ಯಾಲಿ ಹರಿಯುವ ನೀರಿನ ಕೆರೆಗಳಲ್ಲಿ ಹೊರತುಪಡಿಸಿದರೆ ಮಳೆ ನೀರು ಹರಿಯುವ ಕೆರೆಗಳಲ್ಲಿ ನೀರು ಬರಿದಾಗಿದೆ. ಪ್ರಸ್ತುತ ಅಂತರ್ಜಲಮಟ್ಟ ಕುಸಿದಿಲ್ಲ. ಮಾರ್ಚ್​ ತಿಂಗಳಲ್ಲಿ ಕುಸಿಯಬಹುದು. ಕಳೆದ ವರ್ಷದ ಬೇಸಿಗೆಯಲ್ಲಿ 1.6 ಮೀಟರ್​ ಅಷ್ಟು ಅಂತರ್ಜಲ ಕುಸಿದಿತ್ತು. ಆದರೆ ನೀರಿನ ಅಭಾವ ಕಂಡುಬರಲಿಲ್ಲ. ಮುಂದಿನ ದಿನಗಳಲ್ಲಿ ಎಷ್ಟು ಪ್ರಮಾಣದಲ್ಲಿ ಅಂತರ್ಜಲ ಕುಸಿಯುತ್ತದೆಯೋ ಕಾದು ನೋಡಬೇಕಾಗಿದೆ.  -ಹರಿಕೃಷ್ಣ ಎಇಇ, ಸಣ್ಣ ನೀರಾವರಿ ಇಲಾಖೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net