

ಸದೇಶ್ ಕಾರ್ಮಾಡ್ ಮೈಸೂರು
ಪ್ರತಿನಿತ್ಯ ಜನರು ತ್ಯಾಜ್ಯ ತಂದು ಎಸೆಯುವ ಜಾಗಗಳನ್ನು ಕೆಲವು ವರ್ಷಗಳಿಂದ ನಗರ ಪಾಲಿಕೆ ಅಭಿವೃದ್ಧಿ ಪಡಿಸಿ ಸುಂದರ ತಾಣವಾಗಿ ರೂಪಿಸುತ್ತಿದ್ದು, ಇದರ ಮುಂದುವರೆದ ಭಾಗವಾಗಿ ಎನ್.ಆರ್.ಮೊಹಲ್ಲಾದಲ್ಲಿ ತ್ಯಾಜ್ಯದ ತಾಣವನ್ನು ಇದೀಗ ಸುಂದರ ತಾಣವಾಗಿ ರೂಪಿಸಲಾಗಿದೆ.
ಇದುವರೆಗೆ ತ್ಯಾಜ್ಯದ ತಾಣಗಳನ್ನು ಸುಂದರ ತಾಣವನ್ನಾಗಿ ರೂಪಿಸಲು ಸಾವಿರಾರು ರೂ.ಗಳನ್ನು ವಿನಿಯೋಗಿಸಲಾಗುತಿತ್ತು. ತ್ಯಾಜ್ಯದ ತಾಣಗಳನ್ನು ಶುಚಿಗೊಳಿಸಿ ಆ ಜಾಗಗಳಲ್ಲಿ ಟೈಲ್ಸ್ ಹಾಗೂ ಕುರ್ಚಿಗಳನ್ನು ಅಳವಡಿಸುವುದು, ಮಕ್ಕಳ ಆಟಿಕೆಗಳನ್ನು ಅಳವಡಿಸಿ ಮಕ್ಕಳು ಆಟವಾಡುವ ವಾತಾವರಣ ನಿರ್ಮಾಣ ಮಾಡುವುದು ಸೇರಿದಂತೆ ಹಲವು ಚಟುವಟಿಕೆಯ ತಾಣ ಮಾಡಲು ಹಲವಾರು ಕ್ರಮಗಳನ್ನು ಅನುಸರಿಸಲಾಗಿತ್ತು. ನಗರ ಪಾಲಿಕೆಯ ಈ ಪ್ರಯತ್ನಕ್ಕೆ ನಗರದ ಬಹುತೇಕ ಕಡೆ ಉತ್ತಮ ಸ್ಪಂದನೆ ದೊರೆತ್ತಿದ್ದು, ಕೆಲವು ಕಡೆ ಫಲ ನೀಡಲಿಲ್ಲ. ನಗರ ಪಾಲಿಕೆ ಅಭಿವೃದ್ಧಿ ಪಡಿಸಿದ ಜಾಗಗಳನ್ನು ಇದೀಗ ಸಾರ್ವಜನಿಕರು ಬಳಕೆ ಮಾಡುತ್ತಿರುವ ಪರಿಣಾಮ ಸ್ಥಳದಲ್ಲಿ ತ್ಯಾಜ್ಯ ಬೀಳುವುದು ನಿಂತಿದೆ.
ಕಸದಿಂದ ರಸ:
ತ್ಯಾಜ್ಯದ ತಾಣಗಳನ್ನು ಅಭಿವೃದ್ಧಿ ಪಡಿಸಲು ಸಾವಿರಾರು ರೂ.ಗಳನ್ನು ಖರ್ಚು ಮಾಡುವ ಬದಲು ಅತ್ಯಂತ ಕಡಿಮೆ ವೆಚ್ಚದಲ್ಲಿ ಸುಂದರ ತಾಣವಾಗಿ ರೂಪಿಸಲು ನಗರ ಪಾಲಿಕೆ ಇದೀಗ ಹೆಜ್ಜೆ ಇರಿಸಿದ್ದು, ಇದರ ಮೊದಲ ಪ್ರಯತ್ನದ ಭಾಗವಾಗಿ ತ್ಯಾಜ್ಯದ ತಾಣವಾಗಿದ್ದ ನಗರದ ಎನ್‌ಆರ್ ಮೊಹಲ್ಲಾದ ದೊಡ್ಡಮ್ಮ ತಾಯಿ ದೇವಸ್ಥಾನ ಬಳಿಯ ಖಾಲಿ ನಿವೇಶನದ ತಡೆಗೋಡೆಯ ಆವರಣವನ್ನು ಶುಚಿಗೊಳಿಸಿ ಅಲಂಕಾರಗೊಳಿಸಲಾಗಿದೆ.
ಸ್ಥಳದಲ್ಲಿ ರಾಶಿಗಟ್ಟಲೇ ಸಂಗ್ರಹವಾಗಿದ್ದ ತ್ಯಾಜ್ಯವನ್ನು ಮೊದಲು ತೆರವುಗೊಳಿಸಲಾಯಿತು. ನಂತರ ಕಸದ ರಾಶಿಯಲ್ಲಿ ದೊರೆತ ಉಪಯುಕ್ತ ವಸ್ತುಗಳನ್ನು ಒಂದೆಡೆ ಸಂಗ್ರಹಿಸಲಾಯಿತು. ಈ ವಸ್ತುಗಳನ್ನೇ ಅಲಂಕಾರಿಕ ವಸ್ತುಗಳಾಗಿ ಪರಿವರ್ತಿಸಿ ತ್ಯಾಜ್ಯದ ತಾಣದ ಸೌಂದರೀಕರಣಕ್ಕೆ ಬಳಕೆ ಮಾಡಲಾಗಿದೆ.
ತಡೆಗೋಡೆಗೆ ಆಕರ್ಷಕ ಬಣ್ಣ ಬಳಿದು ಕಂಗೊಳಿಸುವಂತೆ ಮಾಡಲಾಯಿತು. ನಂತರ ತ್ಯಾಜ್ಯದ ರಾಶಿಯಲ್ಲಿ ಸಿಕ್ಕ ಪ್ಲಾಸ್ಟಿಕ್ ಡಬ್ಬಗಳನ್ನು ಪಾಟ್ ಮಾದರಿಯಲ್ಲಿ ಕತ್ತರಿಸಿ ಅದಕ್ಕೆ ಮಣ್ಣು ತುಂಬಿ ಗಿಡಗಳನ್ನು ನೆಡಲಾಗಿದೆ. ಈ ಪಾಟ್‌ಗಳನ್ನು ಗೋಡೆಗಳಲ್ಲಿರುವ ಇಟ್ಟಿಗೆಗಳ ಮೇಲೆ ಇಡಲಾಗಿದ್ದು, ಇದೀಗ ಈ ತಾಣ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.
ಈ ಹಿಂದೆ ತ್ಯಾಜ್ಯದ ತಾಣಗಳ ಅಭಿವೃದ್ಧಿಗೆ ಗುತ್ತಿಗೆ ನೀಡಲಾಗುತಿತ್ತು. ಆದರೆ, ಈ ತ್ಯಾಜ್ಯದ ತಾಣವನ್ನು ಪೌರ ಕಾರ್ಮಿಕರು ಹಾಗೂ ಪಾಲಿಕೆ ಸಿಬ್ಬಂದಿ ಸೇರಿ ಅಭಿವೃದ್ಧಿ ಪಡಿಸಿರುವುದು ಸಂತಸದ ವಿಚಾರ. ನಗರ ಪಾಲಿಕೆ ಆಯುಕ್ತ ಆಸಾದ್ ಉರ್ ರೆಹಮಾನ್ ಷರೀಫ್ ಸೂಚನೆಯ ಮೇರೆಗೆ ವಲಯ ಕಚೇರಿ 8ರ ಆಯುಕ್ತ ಆನಂದ್, ಪರಿಸರ ಇಂಜಿನಿಯರ್ ನಾಜಿಯಾ ಇಫತ್, ಆರೋಗ್ಯ ನಿರೀಕ್ಷಕಿ ರಾಜೇಶ್ವರಿ ಬಾಯಿ, ಮೇಸ್ತ್ರಿ ಆಂಜನಪ್ಪ, ಸ್ವಚ್ಛತಾ ವಾಹನ ಸಂಘದ ಪದಾಧಿಕಾರಿಗಳು, ಪೌರ ಕಾರ್ಮಿಕರು ಹಾಗೂ ಆಟೋ ಟಿಪ್ಪರ್ ಚಾಲಕರು ಶ್ರಮದಾನದಲ್ಲಿ ಪಾಲ್ಗೊಂಡಿದ್ದರು.
ಸ್ವಚ್ಛತೆಗೆ ಆದ್ಯತೆ ನೀಡಲಿ:
ನಗರ 2024ರ ಸ್ವಚ್ಛ ಸರ್ವೇಕ್ಷಣೆಯಲ್ಲಿ ರಾಷ್ಟ್ರಮಟ್ಟದಲ್ಲಿ 27ನೇ ಸ್ಥಾನಕ್ಕೆ ಕುಸಿತ ಕಂಡಿದ್ದು, ನಗರ ಮತ್ತೆ ಟಾಪ್-10 ಸ್ಥಾನಕ್ಕೆ ಮರಳಲು ಇಂತಹ ಸೃಜನಶೀಲ ಪ್ರಯತ್ನಗಳು ಅವಶ್ಯಕ. ಇದೇ ರೀತಿ ನಗರದ ವಿವಿಧ ಭಾಗಗಳಲ್ಲಿ ತ್ಯಾಜ್ಯದ ತಾಣಗಳನ್ನು ಅಭಿವೃದ್ಧಿ ಪಡಿಸಲು ನಗರ ಪಾಲಿಕೆ ಮುಂದಾಗಬೇಕು. ಅಭಿವೃದ್ಧಿ ಪಡಿಸಿದ ಜಾಗದಲ್ಲಿ ಮತ್ತೆ ತ್ಯಾಜ್ಯ ಎಸೆಯುವುದನ್ನು ಜನರು ನಿಲ್ಲಿಸಿದರೆ ನಗರವನ್ನು ಶುಚಿಯಾಗಿಡಬಹುದು. ಪ್ರತಿನಿತ್ಯ ನಗರದ ಮನೆ ಮನೆಗಳಿಂದ ತ್ಯಾಜ್ಯ ಸಂಗ್ರಹಿಸಲು ಪೌರ ಕಾರ್ಮಿಕರು ಮನೆ ಬಾಗಿಲಿಗೆ ಆಗಮಿಸುತ್ತಾರೆ. ಆ ಸಂದರ್ಭ ಜನರು ತ್ಯಾಜ್ಯವನ್ನು ನೀಡಿ ಸಹಕರಿಸಿದರೆ ನಗರದಲ್ಲಿ ಎಲ್ಲೆಂದರಲ್ಲಿ ತ್ಯಾಜ್ಯ ಹರಡುವುದನ್ನು ಸಂಪೂರ್ಣ ತಪ್ಪಿಸಬಹುದು.
ದಂಡ ವಿಧಿಸಲಿ:
ಇಷ್ಟೆಲ್ಲ ಪ್ರಯತ್ನದ ನಡುವೆಯೂ ಸ್ವಚ್ಛತೆಗೆ ಸಹಕರಿಸದವರಿಗೆ ಪಾಲಿಕೆ ದಂಡ ವಿಧಿಸುವ ಕಾರ್ಯಕ್ಕೆ ಮುಂದಾಗಬೇಕು. ಸಾರ್ವಜನಿಕ ರಸ್ತೆ, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಹಾಗೂ ಇತರೆ ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವುದು, ಉಗುಳುವುದು, ಬಹಿರ್ದೆಸೆ ಮಾಡುವುದು, ಮೂತ್ರ ವಿಸರ್ಜಿಸುವುದು ಕಂಡು ಬಂದರೆ ಮೊದಲ ಬಾರಿ 500 ರೂ., ಪುನರಾವರ್ತನೆಗೆ 1,000 ರೂ. ದಂಡ ವಿಧಿಸಲಾಗುತ್ತಿದೆ. ಅದೇ ರೀತಿ ತ್ಯಾಜ್ಯವನ್ನು ಮೂಲದಲ್ಲಿಯೇ ಹಸಿಕಸ ಮತ್ತು ಒಣಕಸ, ಕೈತೋಟದ ತ್ಯಾಜ್ಯ ವೈದ್ಯಕೀಯ ತ್ಯಾಜ್ಯ, ವಿಷಕಾರಿ ತ್ಯಾಜ್ಯ ಹಾಗೂ ಇತರೆ ತ್ಯಾಜ್ಯವನ್ನು ಬೇರ್ಪಡಿಸಿ ನೀಡದೆ ಹೋದರೆ ನಿವಾಸಿಗಳಿಗೆ ಮೊದಲ ಬಾರಿ 200 ರೂ., ಪುನರಾವರ್ತನೆಯಾದರೆ 500 ರೂ., ವಾಣಿಜ್ಯ ಉದ್ದಿಮೆದಾರರಿಗೆ ಮೊದಲ ಬಾರಿ 500 ರೂ., ಪುನರಾವರ್ತನೆ ಮಾಡಿದರೆ 1,000 ರೂ. ದಂಡ ವಿಧಿಸಲಾಗುತ್ತಿದೆ.
ನಗರದ ಎನ್‌ಆರ್ ಮೊಹಲ್ಲಾದಲ್ಲಿ ತ್ಯಾಜ್ಯದ ತಾಣವನ್ನು ಸುಣ್ಣ ಬಣ್ಣ ಬಳಿದು ಅಭಿವೃದ್ಧಿ ಪಡಿಸಲಾಗಿದೆ. ಆ ಜಾಗದಲ್ಲಿ ದೊರೆತ ಉಪಯುಕ್ತ ತ್ಯಾಜ್ಯಗಳನ್ನು ಬಳಕೆ ಮಾಡಿಕೊಂಡು ಸ್ಥಳವನ್ನು ಅಲಂಕಾರ ಮಾಡಲಾಗಿದೆ. ಅಭಿವೃದ್ಧಿ ಪಡಿಸಿದ ಜಾಗದಲ್ಲಿ ಜನರು ಮತ್ತೆ ತ್ಯಾಜ್ಯ ಎಸೆಯದೆ ನಗರದ ಸ್ವಚ್ಛತೆಗೆ ಸಹಕರಿಸಬೇಕು. ಆ ಮೂಲಕ ಸ್ವಚ್ಛ ಸರ್ವೇಕ್ಷಣೆಯಲ್ಲಿ ನಗರ ಮತ್ತೆ ಉತ್ತಮ ಸ್ಥಾನ ಗಳಿಸಲು ಎಲ್ಲರು ಕೈಜೋಡಿಸಬೇಕು.
ಡಾ.ವೆಂಕಟೇಶ್, ಪಾಲಿಕೆ ಆರೋಗ್ಯಾಧಿಕಾರಿ