

ನರಗುಂದ: ವೈಜ್ಞಾನಿಕವಾಗಿ ಕಸ ವಿಲೇವಾರಿ. ಸ್ವಚ್ಛ ಪರಿಸರಕ್ಕೆ ಸಹಕಾರಿ. ಆದಾಯಯಕ್ಕೊಂದು ದಾರಿ. ನಗರ-ಪಟ್ಟಣಗಳಿಗೆ ಮಾದರಿ…
ಇದು ಪಟ್ಟಣದ ಸವದತ್ತಿ ರಸ್ತೆ ಹೊರವಲಯದಲ್ಲಿರುವ ಪುರಸಭೆಯಿಂದ ನಿರ್ಮಿಸಲಾದ ತಾಜ್ಯ ವಿಲೇವಾರಿ ಘಟಕದ ವಿಶೇಷತೆ.
9 ಎಕರೆ ಜಾಗದಲ್ಲಿ 2010-11ರಲ್ಲಿ ಪ್ರಾರಂಭಿಸಲಾದ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಸ್ವಚ್ಛ ಭಾರತ ಮಿಷನ್ ಯೋಜನೆಯ 1.29 ಕೋಟಿ ರೂ, ನಗರಾಭಿವೃದ್ಧಿ ಯೋಜನೆ ಹಾಗೂ 15ನೇ ಹಣಕಾಸು ಯೋಜನೆಯಡಿ 40 ಲಕ್ಷ ರೂ. ವೆಚ್ಚದಲ್ಲಿ ತಾಜ್ಯ ವಿಲೇವಾರಿ ಘಟಕದ ವಿವಿಧ ಯಂತ್ರೋಪಕರಣಗಳನ್ನು ಖರೀದಿಸಿ ಪರಿಣಾಮಕಾರಿ ಕಸ ವಿಲೇವಾರಿ ಮಾಡಲಾಗುತ್ತಿದೆ. ಪರಿಣಾಮ ಕೇಂದ್ರ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದಿಂದ ನಡೆಸಿರುವ ಸ್ವಚ್ಛ ಸರ್ವೇಕ್ಷಣಾ ಸಮೀಕ್ಷೆಯಲ್ಲಿ ನರಗುಂದ ಪುರಸಭೆ ರಾಜ್ಯಕ್ಕೆ 8ನೇ ಸ್ಥಾನ ಹಾಗೂ ಗದಗ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ವಿಶೇಷ ಸಾಧನೆ ಮಾಡಿದೆ.
ನಿತ್ಯ ಸಂಗ್ರಹಗೊಳ್ಳುವ ಹಸಿ ಕಸದಿಂದ 644 ಕೆಜಿ ಬಯೋ ಗ್ಯಾಸ್ ಉತ್ಪಾದಿಸಲಾಗುತ್ತಿದೆ. ಇದನ್ನು ಮುಂಬರುವ ದಿನಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ಬಿಸಿಯೂಟ ತಯಾರಿಸಲು, ವಸತಿ ಶಾಲೆಗಳಿಗೆ ಉಚಿತವಾಗಿ ನೀಡಲು ಪುರಸಭೆ ನಿರ್ಣಯ ಕೈಗೊಂಡಿದೆ. ಇಲ್ಲಿನ ತಾಜ್ಯ ವಿಲೇವಾರಿ ಘಟಕದಲ್ಲಿ ಉತ್ಪಾದನೆಗೊಂಡ 40 ಸಾವಿರ ರೂ. ಮೌಲ್ಯದ ಎರೆಹುಳು ಗೊಬ್ಬರ ಮಾರಾಟ ಮಾಡಲಾಗಿದೆ. ತ್ಯಾಜ್ಯದಲ್ಲಿ ಬರುವ ರಟ್ಟು, ಕವರ್, ಪ್ಲಾಸ್ಟಿಕ್ ಬಾಟಲ್‌ಗಳನ್ನು ಯಂತ್ರದಿಂದ ಪ್ರೆಸ್ ಮಾಡಿ ಮಾರಾಟ ಮಾಡಲಾಗುತ್ತಿದೆ. ಇದರಿಂದ ತಿಂಗಳಿಗೆ ಪುರಸಭೆಗೆ 20 ಸಾವಿರ ರೂ. ಆದಾಯ ಬರುತ್ತಿದೆ. ಎರೆಹುಳು ಗೊಬ್ಬರವನ್ನು ಪ್ರತಿ ಕೆಜಿಗೆ 7 ರೂ.ದಂತೆ 10, 25 ಕೆಜಿಯ ಪ್ಯಾಕೆಟ್‌ಗಳನ್ನು ಮಾಡಿ ಮಾರಾಟ ಮಾಡಲಾಗುತ್ತಿದೆ. ಎರೆಹುಳುಗಳಿಂದ ತಯಾರಿಸಿದ ಯರೇಜಿಲ್ ಗಂಜಲವನ್ನು ಲೀಟರ್‌ಗೆ 100 ರೂ.ದಂತೆ ಮಾರಾಟ ಮಾಡಲಾಗುತ್ತದೆ.
9 ಎಕರೆ ವಿಸ್ತೀರ್ಣ ಹೊಂದಿರುವ ತ್ಯಾಜ್ಯ ವಿಲೇವಾರಿ ಘಟಕದ 2 ಎಕರೆ ಪ್ರದೇಶದಲ್ಲಿ ಗುಲಾಬಿ ಹೂ, ದೇವ ಗರಗಲ, ದಾಸವಾಳ, 670 ಸಾಗವಾನಿ, 20 ತೆಂಗು, 10 ನೇರಳೆ, 6 ರುದ್ರಾಕ್ಷಿ, 10 ಮಹಾಗನಿ, 10 ಹೊಂಗೆ ಗಿಡಗಳನ್ನು ಬೆಳೆಸಿ, ಸುಂದರ ಉದ್ಯಾನ ನಿರ್ಮಿಸಲಾಗಿದೆ. ಅಲ್ಲದೆ ಪ್ರೊಸೆಸಿಂಗ್ ಸೀಡ್ ಯಂತ್ರ ಅಳವಡಿಸಿದ್ದು ನಿತ್ಯ ಹಸಿ ಮತ್ತು ಒಣ ಕಸವನ್ನು ಬೇರ್ಪಡಿಲಾಗುತ್ತಿದೆ. ನಿತ್ಯವೂ 644 ಕೆಜಿ ಬಯೋ ಗ್ಯಾಸ್ ಉತ್ಪಾದಿಸಲಾಗುತ್ತಿದ್ದು ಇದನ್ನು ಸರ್ಕಾರಿ ಶಾಲೆಗಳಲ್ಲಿ ಬಿಸಿಯೂಟ ತಯಾರಿಸಲು ಹಾಗೂ ವಸತಿ ಶಾಲೆಗಳಿಗೆ ಉಚಿತವಾಗಿ ನೀಡಲು ನಿರ್ಧರಿಸಲಾಗಿದೆ. ಅಮಿತ್ ತಾರದಾಳೆ, ನರಗುಂದ ಪುರಸಭೆ ಮುಖ್ಯಾಧಿಕಾರಿ
ನರಗುಂದದ ತ್ಯಾಜ್ಯ ವಿಲೇವಾರಿ ಘಟಕ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಇದು ಜಿಲ್ಲೆಯ ಎಲ್ಲರಿಗೂ ಮಾದರಿಯಾಗಬೇಕು. ಇಲ್ಲಿನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಅಗತ್ಯವಿರುವ ಎಲ್ಲ ಸಹಾಯ, ಸಹಕಾರ ನೀಡಲಾಗುತ್ತದೆ.ವೈಶಾಲಿ ಎಂ.ಎಲ್, ಜಿಲ್ಲಾಧಿಕಾರಿ
ಅಧಿಕಾರಿಗಳ ತಂಡ ಪರಿಶೀಲನೆ: ತಾಜ್ಯ ವಿಲೇವಾರಿ ಘಟಕಕ್ಕೆ ಶುಕ್ರವಾರ ಅಧಿಕಾರಿಗಳೊಂದಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಅವರು ಮುಖ್ಯಾಧಿಕಾರಿ ಅಮಿತ್ ತಾರದಾಳೆ, ಪುರಸಭೆಯ ಹಿರಿಯ ಆರೋಗ್ಯ ನಿರೀಕ್ಷಕ ಸಂಗಮೇಶ ಬ್ಯಾಳಿ ಅವರಿಂದ ಮಾಹಿತಿ ಪಡೆದು ಘಟಕ ನಿರ್ವಹಣೆಯ ಉತ್ತಮ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲದೆ, ತ್ಯಾಜ್ಯ ವಿಲೇವಾರಿ ಘಟಕದ ಬಯೋ ಗ್ಯಾಸ್ ಮೂಲಕ ತಯಾರಿಸಿದ ಚಹಾ ಕುಡಿದು ಸಂತಸಗೊಂಡರು. ತ್ಯಾಜ್ಯ ವಿಲೇವಾರಿ ಘಟಕಕ್ಕೆ ಬೇಕಾದ ಎಲ್ಲ ಸಹಾಯ, ಸಹಕಾರ ನೀಡುವುದಾಗಿ ಮುಖ್ಯಾಧಿಕಾರಿಗೆ ಭರವಸೆ ನೀಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್.ನೇಮಗೌಡ, ತಹಸೀಲ್ದಾರ್ ಶ್ರೀಶೈಲ ತಳವಾರ, ಸಿಪಿಐ ಮಂಜುನಾಥ ನಡುವಿನಮನಿ, ಡಿವೈಎಸ್‌ಪಿ ಪ್ರಭುಗೌಡ ಕಿರೇದಳ್ಳಿ, ರಾಚಪ್ಪ ಕೆರೂರ, ಗ್ರಾಮಾಡಳಿತ ಅಧಿಕಾರಿ ಮಲ್ಲಿಕಾರ್ಜುನ ಶೆಟ್ಟರ ಇತರರಿದ್ದರು.