

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಹಿತಾಸಕ್ತಿ ಮತ್ತು ಗೌಪ್ಯತೆ ಕಾಪಾಡಬೇಕು ಎಂದು ಮುಡಾ ಅಧ್ಯಕ್ಷ ಕೆ.ಮರೀಗೌಡ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.
50:50 ಬದಲಿ ನಿವೇಶನ ಹಗರಣ ಸೇರಿದಂತೆ ವಿವಿಧ ಅಕ್ರಮಗಳ ಕಾರಣಕ್ಕೆ ರಾಜ್ಯಾದ್ಯಂತ ಸುದ್ದಿಯಾಗಿರುವ ಮುಡಾ ಇದೀಗ ಎಚ್ಚೆತ್ತುಕೊಂಡಿದೆ. ನಿತ್ಯ ಚಟುವಟಿಕೆಗಳ ಕಾರ್ಯನಿರ್ವಹಣೆಯಲ್ಲಿ ರಹಸ್ಯ ಕಾಯ್ದುಕೊಳ್ಳಲು ಮುಂದಾಗಿದೆ. ಬಹಳ ದಿನಗಳ ಬಳಿಕ ಮುಡಾ ಅಧ್ಯಕ್ಷ ಕೆ.ಮರೀಗೌಡ ಅವರು ಗುರುವಾರ ತಮ್ಮ ಕಚೇರಿಯಲ್ಲಿ ಅಧಿಕಾರಿಗಳು, ಎಲ್ಲ ಶಾಖೆಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿ ಕೆಲ ಸೂಚನೆಗಳನ್ನು ನೀಡಿದ್ದಾರೆ.
ಮುಡಾ ಕುರಿತು ರಾಜ್ಯದ ಸುದ್ದಿವಾಹಿನಿಗಳಲ್ಲಿ ನಿತ್ಯ ವಿವಿಧ ವಿಚಾರ ಬಿತ್ತರಿಸಲಾಗುತ್ತಿದೆ. ಇದರಿಂದಾಗಿ ಶತಮಾನದ ಇತಿಹಾಸವಿರುವ ಮುಡಾದ ಕುರಿತು ಮಾಧ್ಯಮಗಳಲ್ಲಿ ವ್ಯತಿರಿಕ್ತವಾಗಿ ಬಿಂಬಿಸುತ್ತಿರುವುದು ಬೇಸರದ ಸಂಗತಿಯಾಗಿದೆ. ಆದ್ದರಿಂದ ಪ್ರಾಧಿಕಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಅಧಿಕಾರಿಗಳು ಮತ್ತು ನೌಕರರು ಪ್ರಾಧಿಕಾರದ ಹಿತಾಸಕ್ತಿ ಹಾಗೂ ಗೌಪ್ಯತೆ ಕಾಪಾಡಿಕೊಂಡು ಕಾರ್ಯನಿರ್ವಹಿಸಬೇಕು ಎಂದು ಅಧ್ಯಕ್ಷರು ನಿರ್ದೇಶಿಸಿದರು.
ದಸರಾ ಬಳಿಕ ಸಾಮಾನ್ಯ ಸಭೆ: ಬಹಳ ದಿನಗಳಿಂದ ನನೆಗುದಿಗೆ ಬಿದ್ದಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸಾಮಾನ್ಯ ಸಭೆಯನ್ನು ದಸರಾ ಮಹೋತ್ಸವದ ಬಳಿಕ ನಡೆಸಲು ತೀರ್ಮಾನಿಸಲಾಗಿದ್ದು, ಈ ಸಭೆಗೆ ಮಂಡಿಸಲಾಗುವ ವಿಷಯಗಳನ್ನು ಪೂರ್ಣ ಮಾಹಿತಿಯೊಡನೆ ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಲಾಯಿತು.
ಕೆಲಸ, ಕಾರ್ಯಗಳ ನಿಮಿತ್ತ ಸಾರ್ವಜನಿಕರು ಬೆಳಗ್ಗೆಯಿಂದ ಸಂಜೆವರೆಗೆ ಮುಡಾ ಕಚೇರಿ ಕಾರಿಡಾರ್‌ಗಳಲ್ಲಿ ಕಾಯುತ್ತಿರುವುದನ್ನು ಗಮನಿಸಲಾಗಿದೆ. ಇದರಿಂದಾಗಿ ಕಡತ ವಿಲೇವಾರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಇನ್ನು ಮುಂದೆ ಸಾರ್ವಜನಿಕರ ಸಂದರ್ಶನದ ಸಮಯವನ್ನು ಮಧ್ಯಾಹ್ನ 3ರಿಂದ 5.30ರವರೆಗೆ ನಿಗದಿಪಡಿಸಲಾಗಿದೆ.
ಈ ಸಮಯದಲ್ಲಿ ಅಧಿಕಾರಿಗಳು, ನೌಕರರು ಸಾರ್ವಜನಿಕ ಸಮಸ್ಯೆಗಳನ್ನು ಇತ್ಯರ್ಥಪಡಿಸಲು ಸೂಚಿಸಲಾಗಿದೆ.
ಆರ್‌ಟಿಐ ಅರ್ಜಿಗಾಗಿ ಪ್ರತ್ಯೇಕ ಕೌಂಟರ್: ಮುಡಾದಲ್ಲಿ ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸುವ ಅರ್ಜಿಗಳಿಗಾಗಿ ಪ್ರತ್ಯೇಕ ಕೌಂಟರ್ ತೆರೆಯಲಾಗಿದ್ದು, ಈ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ಅಧಿಕಾರಿಗಳಿಗೆ ಅಧ್ಯಕ್ಷರು ನಿರ್ದೇಶಿಸಿದರು.
ಮುಡಾದಿಂದ ಈ ಹಿಂದೆ ಹಂಚಿಕೆಯಾಗಿರುವ ನಾಗರಿಕ ಸೌಕರ್ಯ ನಿವೇಶನಗಳನ್ನು(ಸಿಎ ಸೈಟ್) ಹಂಚಿಕೆಯಾದ ಉದ್ದೇಶಕ್ಕೆ ಬಳಸಿಲ್ಲ. ಈ ಮೂಲಕ ನಿಯಮ ಉಲ್ಲಂಘಿಸಿ ಮಳಿಗೆ ನಿರ್ಮಿಸಿ ಬಾಡಿಗೆ ನೀಡಿರುವ ಬಗ್ಗೆ ಅನೇಕ ದೂರುಗಳು ಬಂದಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಪ್ರಾಧಿಕಾರದಿಂದ ಹಂಚಿಕೆಯಾಗಿರುವ ನಾಗರಿಕ ಸೌಲಭ್ಯ ನಿವೇಶನಗಳ ಕುರಿತು ಪರಿಶೀಲಿಸಿ ವರದಿ ನೀಡಲು ಸೂಚಿಸಲಾಯಿತು.
ಸಿಎ ಸೈಟ್‌ಗಳ ಒಟ್ಟಾರೆ ಸಂಖ್ಯೆ, ಸಾರ್ವಜನಿಕರಿಂದ ಅರ್ಜಿ ಸ್ವೀಕರಿಸಿರುವ ವಿವರ, ನ್ಯಾಯಾಲಯದಲ್ಲಿರುವ ಸಿಎ ನಿವೇಶನ ಸಂಬಂಧಿಸಿದಂತೆ ಪ್ರಕರಣಗಳ ವಿವರ, ನಿಯಮ ಉಲ್ಲಂಘಿಸಿರುವ ನಾಗರಿಕ ಸೌಕರ್ಯ ನಿವೇಶನಗಳ ವಿವರವನ್ನು ಎಲ್ಲ ವಲಯ ಅಧಿಕಾರಿಗಳು, ವಿಶೇಷ ತಹಸೀಲ್ದಾರ್ ಕೂಡಲೇ ಸಲ್ಲಿಸಬೇಕು ಎಂದು ತಾಕೀತು ಮಾಡಿದರು.
ಮುಡಾದ ಆರ್ಥಿಕ ಸ್ಥಿತಿ ಗಮನದಲ್ಲಿರಿಸಿಕೊಂಡು ಪ್ರಾಧಿಕಾರದಿಂದ ಹಂಚಿಕೆಯಾಗಿರುವ ನಾಗರಿಕ ಸೌಕರ್ಯ ನಿವೇಶನಗಳ ವಾರ್ಷಿಕ ಗುತ್ತಿಗೆ ಹಣ ಮತ್ತು ತೆರಿಗೆ ಸಂಗ್ರಹಿಸಲು ಅಗತ್ಯ ಕ್ರಮವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸಾವಿರಾರು ಕೋಟಿ ರೂ. ಬೆಲೆಬಾಳುವ ಖಾಲಿ ಜಮೀನು, ಆಸ್ತಿಗಳನ್ನು ಒತ್ತುವರಿಯಾಗಿರುವ ಬಗ್ಗೆ ದೂರುಗಳು ಬಂದಿದ್ದು, ಇವುಗಳನ್ನು ಕೂಡಲೇ ಪತ್ತೆಹಚ್ಚಲು ಎಲ್ಲ ವಲಯ ಅಧಿಕಾರಿಗಳಿಗೆ ಸೂಚಿಸಲಾಯಿತು. ಕಾರ್ಯದರ್ಶಿಗಳು, ವಿಶೇಷ ಭೂಸ್ವಾಧೀನ ಅಧಿಕಾರಿಗಳು ಖಾಲಿ ಇರುವ ಪ್ರಾಧಿಕಾರದ ಜಮೀನು, ಆಸ್ತಿಗಳನ್ನು ನಿಖರವಾಗಿ ಸರ್ವೇ ಮಾಡಿಸಬೇಕು. ಒತ್ತುವರಿಯಾಗಿದ್ದಲ್ಲಿ ಮುಲಾಜಿಲ್ಲದೆ ತೆರವುಗೊಳಿಸಲು ಕ್ರಮಕೈಗೊಳ್ಳುವಂತೆ ಸಭೆಯಲ್ಲಿ ತಿಳಿಸಿದರು. ಪ್ರಾಧಿಕಾರದ ಜಮೀನು, ಆಸ್ತಿಗಳನ್ನು ಸಂರಕ್ಷಿಸಲು ತಂತಿಬೇಲಿ ಅಳವಡಿಸಿ, ಪ್ರಾಧಿಕಾರದ ಆಸ್ತಿಯೆಂದು ಕಡ್ಡಾಯವಾಗಿ ನಾಮಫಲಕ ಅಳವಡಿಸಲೂ ನಿರ್ದೇಶಿಸಲಾಯಿತು.
ಮುಡಾದ ಹೊಸ ಬಡಾವಣೆ ನಿರ್ಮಾಣ ಕೈಗೆತ್ತಿಗೊಳ್ಳಲು ಈ ಹಿಂದೆಯು ಸೂಚಿಸಲಾಗಿದ್ದು, ಸಾರ್ವಜನಿಕರಿಗೆ ನಿವೇಶನ ಹಂಚಿಕೆ ಮಾಡಲು ಅನುವು ಆಗುವಂತೆ ಈ ಹಿಂದೆ ರೈತರ ಸಹಭಾಗಿತ್ವದಲ್ಲಿ ಕೈಗೊಳ್ಳಲು ಉದ್ದೇಶಿಸಿರುವ ಬಲ್ಲಹಳ್ಳಿ ಹಾಗೂ ಬೊಮ್ಮೇನಹಳ್ಳಿ ಬಡಾವಣೆಯನ್ನು ತ್ವರಿತವಾಗಿ ಕೈಗೊಳ್ಳಬೇಕಾದ ಕ್ರಮದ ಬಗ್ಗೆ ವಿವರ ನೀಡಲು ತಿಳಿಸಲಾಯಿತು.
ಗುಂಪು ವಸತಿ ಯೋಜನೆಯಡಿ ಮನೆಗಳನ್ನು ನಿರ್ಮಿಸುವ ಯೋಜನೆಯನ್ನು ಕೈಗೆತ್ತಿಕೊಳ್ಳಲು ಅಧಿಕಾರಿಗಳಿಗೆ ಸಭೆಯಲ್ಲಿ ನಿರ್ದೇಶನ ನೀಡಲಾಯಿತು. ಆಯುಕ್ತ ಎ.ಎನ್.ರಘುನಂದನ್ ಇತರರಿದ್ದರು.