ಶಿವಮೊಗ್ಗಕ್ಕೆ ಬರಲಿದೆ ಯುದ್ಧ ವಿಮಾನ

12 smg 14
ಶಿವಮೊಗ್ಗಕ್ಕೆ ಆಗಮಿಸಿದ ಯುದ್ಧ ಟ್ಯಾಂಕರ್.
Published on

ಶಿವಮೊಗ್ಗ: ಭಾರತ-ಪಾಕಿಸ್ತಾನದ ನಡುವೆ 1971ರ ಯುದ್ಧದಲ್ಲಿ ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸಿ ಕೆಲ ವರ್ಷಗಳ ಹಿಂದೆ ನಿಷ್ಕ್ರಿಯಗೊಂಡಿದ್ದ ರಷ್ಯಾ ನಿರ್ಮಿತ ಟಿ-55 ಯುದ್ಧ ಟ್ಯಾಂಕರನ್ನು ಶನಿವಾರ ಅದ್ದೂರಿಯಾಗಿ ಸ್ವಾತಿಸಲಾಯಿತು. ಈ ಸಂಭ್ರಮದ ನಡುವೆ ಇನ್ನು ಎರಡು ತಿಂಗಳಲ್ಲಿ ಯುದ್ಧ ವಿಮಾನವೊಂದು ಶಿವಮೊಗ್ಗಕ್ಕೆ ಆಗಮಿಸಲಿದೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಘೋಷಿಸಿದರು.
ಅಲಂಕೃತಗೊಂಡು 26 ಚಕ್ರದ ಲಾರಿಯಲ್ಲಿ ಆಗಮಿಸಿದ ಟ್ಯಾಂಕರನ್ನು ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಮಂಗಳವಾದ್ಯ, ಪುಷ್ಪಾರ್ಚನೆಯೊಂದಿಗೆ ಸ್ವಾಗತಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು, ಎಂಆರ್‌ಎಸ್ ವೃತ್ತದ ಪಕ್ಕದಲ್ಲಿರುವ ಮೆಸ್ಕಾಂ ಮೈದಾನದಲ್ಲಿ ಟ್ಯಾಂಕರ್ ಇರಿಸಲಾಗುವುದು. ಅದಕ್ಕೆ ಬಣ್ಣ ಬಳಿದ ಬಳಿಕ ಸೂಕ್ತ ಸ್ಥಳದಲ್ಲಿ ಪ್ರದರ್ಶನಕ್ಕೆ ಇಡಲಾಗುವುದು ಎಂದರು.
2020ರಲ್ಲಿ ರಕ್ಷಣಾ ಇಲಾಖೆಗೆ ಮನವಿ ಸಲ್ಲಿಸಿ ನಿಷ್ಕ್ರಿಯ ಯುದ್ಧ ಟ್ಯಾಂಕರ್ ಅಥವಾ ವಿಮಾನಗಳನ್ನು ನೀಡುವಂತೆ ಮನವಿ ಮಾಡಿದ್ದೆವು. ಈಗ ಅದಕ್ಕೆ ಲ ಸಿಕ್ಕಿದೆ. ಪುಣೆಯ ರಕ್ಷಣಾ ಕಾರ್ಯಾಲಯದಿಂದ ಮೂರು ದಿನದ ಹಿಂದೆ ಹೊರಟಿದ್ದ ಟ್ಯಾಂಕರ್ ನಗರಕ್ಕೆ ಬಂದಿರುವುದು ವಿಶೇಷ ಎಂದು ಹೇಳಿದರು.
ಇದನ್ನು ಎಲ್ಲಿ ಸ್ಥಾಪಿಸಬೇಕೆಂದು ಇನ್ನೂ ಅಂತಿಮ ತೀರ್ಮಾನವಾಗಿಲ್ಲ. ಸದ್ಯದಲ್ಲೇ ನಿಷ್ಕ್ರಿಯ ಯುದ್ಧ ವಿಮಾನ ಕೂಡ ಬರಲಿದ್ದು ಎಂಆರ್‌ಎಸ್ ವೃತ್ತ, ಫ್ರೀಡಂ ಪಾರ್ಕ್ ಅಥವಾ ಐಬಿ ಸರ್ಕಲ್‌ನಲ್ಲಿ ಇರಿಸುವ ಯೋಚನೆ ಇದೆ. ಯುವಕರಲ್ಲಿ ಸೈನ್ಯಕ್ಕೆ ಸೇರ್ಪಡೆ ಆಗಬೇಕೆಂಬ ಮನೋಭಾವ ಬೆಳೆಸಲು ಮುಖ್ಯ ವೃತ್ತದಲ್ಲಿ ಸ್ಥಾಪಿಸಲಾಗುವುದು ಎಂದರು.
ಮಾಜಿ ಸೈನಿಕರ ಸಂಘದ ಕಾರ್ಯದರ್ಶಿ ಉಮೇಶ್ ಬಾಪಟ್ ಮಾತನಾಡಿ, ನಮಗೆಲ್ಲರಿಗೂ ಇಂದು ಸಂಭ್ರಮದ ದಿನವಾಗಿದೆ. ಯುವಕ, ಯುವತಿಯರಿಗೆ ಇದೊಂದು ಆಕರ್ಷಣೆ ಮತ್ತು ಪ್ರೇರಣೆಯಾಗಿದೆ. ಎಲ್ಲ ನಗರಗಳಿಗೆ ಈ ಅವಕಾಶ ಸಿಕ್ಕಿಲ್ಲ. ಸಂಸದ ಬಿ.ವೈ.ರಾಘವೇಂದ್ರ, ನಮ್ಮ ಸಂಘದ ಪ್ರಯತ್ನ ಮತ್ತು ನಗರ ಪಾಲಿಕೆ ಆಸಕ್ತಿಯಿಂದ ಇದು ಸಾಧ್ಯವಾಗಿದೆ ಎಂದು ಹೇಳಿದರು.
ಪಾಲಿಕೆ ಆಯುಕ್ತ ಕೆ.ಮಾಯಣ್ಣಗೌಡ ಮಾತನಾಡಿ, ರಕ್ಷಣಾ ಇಲಾಖೆಯಿಂದ ಈ ಟಿ-55 ನಿಷ್ಕ್ರಿಯ ಯುದ್ಧ ಟ್ಯಾಂಕ್ ನಮ್ಮ ಕೋರಿಕೆ ಮೇರೆಗೆ ನೀಡಿದ್ದು ಆ.15 ರೊಳಗೆ ಅದನ್ನು ಪಡೆಯಬೇಕೆಂದು ತಿಳಿಸಲಾಗಿತ್ತು. ಹಾಗಾಗಿ ನಾವು ಸಮರೋಪಾದಿಯಲ್ಲಿ ಕ್ರಮ ಕೈಗೊಂಡು ಶಿವಮೊಗ್ಗಕ್ಕೆ ನಗರಕ್ಕೆ ಬರಮಾಡಿಕೊಂಡಿದ್ದೇವೆ. ಒಂದು ವಾರದೊಳಗೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಿ ಎಲ್ಲಿ ಸ್ಥಾಪಿಸಬೇಕು ಎಂದು ತೀರ್ಮಾನ ಕೈಗೊಳ್ಳುತ್ತೇವೆ ಎಂದರು.
ವಿಧಾನ ಪರಿಷತ್ ಸದಸ್ಯ ಎಸ್.ರುದ್ರೇಗೌಡ, ಮೇಯರ್ ಶಿವಕುಮಾರ್, ಉಪ ಮೇಯರ್ ಲಕ್ಷ್ಮೀ ಶಂಕರ ನಾಯ್ಕ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ, ಪಾಲಿಕೆ ಸದಸ್ಯರಾದ ಸುವರ್ಣಾ ಶಂಕರ್, ಸುರೇಖಾ ಮುರಳೀಧರ್, ವಿಶ್ವನಾಥ್, ಪ್ರಭು, ಮಂಜುನಾಥ್, ಅನಿತಾ ರವಿಶಂಕರ್, ಧೀರರಾಜ್ ಹೊನ್ನವಿಲೆ, ಮಾಜಿ ಸೈನಿಕರ ಪುನರ್ವಸತಿ ಕಲ್ಯಾಣ ಇಲಾಖೆ ನಿರ್ದೇಶಕ ಡಾ.ಸಿ.ಎ.ಹಿರೇಮಠ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net