

ವಿಜಯಪುರ: ಇಡೀ ಜಗತ್ತು ಸಾರ್ವಕಾಲಿಕವಾಗಿ ಒಪ್ಪಿಕೊಳ್ಳಬಹುದಾದ ಮೌಲ್ಯಗಳು, ತತ್ವಗಳಿಂದಾಗಿ ವಚನಸಾಹಿತ್ಯವು ವಿಶ್ವಮಾನ್ಯವಾಗಿದೆ. ವಚನಧರ್ಮವು ಬದುಕಿನ ಮಾರ್ಗಗಳನ್ನು ತಿಳಿಸಿಕೊಡಬಲ್ಲದು. ಶರಣಸಾಹಿತ್ಯದ ಪ್ರಸಾರದಲ್ಲಿ ಸುತ್ತೂರು ಜಗದ್ಗುರು ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ, ಫ.ಗು.ಹಳಕಟ್ಟಿ ವರ ಸಾಧನೆ ಸ್ಮರಣೀಯ ಎಂದು ಜಿಲ್ಲಾ ಶರಣಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಎಚ್.ಎಸ್.ರುದ್ರೇಶಮೂರ್ತಿ ಬಣ್ಣಿಸಿದರು.
ಪಟ್ಟಣದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ದೇವನಹಳ್ಳಿ ತಾಲೂಕು ಶರಣಸಾಹಿತ್ಯ ಪರಿಷತ್ತು, ಸಾಕ್ಷಿ ಮುರುಘ ಸೇವಾ ಟ್ರಸ್ಟ್, ಬಂಗಲೆ ಕುಟುಂಬದಿಂದ ಶರಣಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ, ವಚನದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಉಚಿತ ನೋಟ್ ಪಸ್ತಕಗಳ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಆಡುಭಾಷೆಯಲ್ಲಿ ದೇಸಿ ಸಾಹಿತ್ಯದಲ್ಲಿಯೇ ಜೀವನದ ಸೂತ್ರಗಳನ್ನು ಅನುಭಾವದ ನೆಲೆಗಟ್ಟಿನಲ್ಲಿ ಹೇಳಬಯಸಿದವರು ಶಿವಶರಣರು. ವಚನಗಳನ್ನು ಅಧ್ಯಯನಮಾಡಿ ಮೌಲ್ಯಗಳನ್ನು ತಿಳಿದುಕೊಳ್ಳಬಲ್ಲ ಇಚ್ಛಾಶಕ್ತಿಯು ಎಲ್ಲರಲ್ಲೂ ಬರಬೇಕು. ಸರ್ವರಲ್ಲಿಯೂ ಧಾರ್ಮಿಕ, ಸಾಮಾಜಿಕ, ಆರ್ಥಿಕ ಸಮಾನತೆಯ ಸ್ವಾತಂತ್ರ್ಯವನ್ನು ಒಳಮೂಡಿಸಲು ಶರಣರು ರೂಪಿಸಿದ ಮಾರ್ಗವು ಇಂದಿಗೆ ಪ್ರಸ್ತುತವೆನಿಸುತ್ತದೆ ಎಂದರು.
ಶಿಕ್ಷಕರಾದ ನಾರಾಯಣಸ್ವಾಮಿ, ಆರತಿ ಪತ್ತಾರ್, ಜಯಶ್ರೀ, ಪ್ರತಿಭಾ, ಗಿರಿಜಮ್ಮ, ಅಕ್ಕನ ಬಳಗದ ವಿಮಲಾಂಬ, ಅನ್ನಪೂರ್ಣಮ್ಮ, ನಗರ್ತ ಮಹಿಳಾ ಸಂಘದ ಮಾಜಿ ಅಧ್ಯಕ್ಷೆ ನೀಲಾಂಬಿಕಾ, ಇದ್ದರು. ವಚನಗಾಯನ ನಡೆಯಿತು. ವಿದ್ಯಾರ್ಥಿಗಳಿಗೆ ಉಚಿತ ನೋಟ್‌ಪುಸ್ತಕಗಳನ್ನು ವಿತರಿಸಲಾಯಿತು.
ದಾರಿ ತೋರಬಲ್ಲ ಅಂಶಗಳಿವೆ : ಮೇಲು-ಕೀಳು, ಬಡವ-ಬಲ್ಲಿದ ಭಾವನೆಗಳು ಜನರಲ್ಲಿ ಮನೆಮಾಡಿದ್ದು, ಅಜ್ಞಾನ, ಅನಕ್ಷರತೆ, ಅಂಧಕಾರ, ಕಂದಾಚಾರ, ಅಮಾನವೀಯತೆಗಳು ಮನುಷ್ಯನಿಗೆ ಶತೃಗಳಾಗಿ ಕಾಡುತ್ತಿರುವ ಇಂದಿನ ಕಾಲಘಟ್ಟಕ್ಕೆ ಶರಣರ ವಚನಗಳಲ್ಲಿ ದಾರಿತೋರಬಲ್ಲ ಅಂಶಗಳಿದ್ದು, ವಚನಗಳನ್ನು ಎಲ್ಲರೂ ಅರ್ಥೈಸಿಕೊಳ್ಳಬೇಕಿದೆ. ಅಜ್ಞಾನದ ಅಂಧಕಾರ, ಜೀವನದ ಮಾರ್ಗದ ಕತ್ತಲನ್ನು ಹೋಗಲಾಡಿಸಲು ಜ್ಞಾನದ ಬೆಳಕಿನ ಅಗತ್ಯವಿದೆ. ಶರಣರ ವಚನಗಳಲ್ಲಿ ಬದುಕಿನ ಮಾರ್ಗಗಳಿವೆ ಎಂದು ಎಚ್.ಎಸ್.ರುದ್ರೇಶಮೂರ್ತಿ ಹೇಳಿದರು.
ತಮ್ಮ ಕಷ್ಟದ ಕಾಯಕ ಬದುಕಿನಲ್ಲಿ ಗಳಿಸಿದ ಅನುಭವಗಳ ಸಾರವನ್ನು ವಚನಗಳ ರೂಪದಲ್ಲಿ ನೀಡಿದ ಶರಣಸಾಹಿತ್ಯವು ಕನ್ನಡ ಸಾಹಿತ್ಯಕ್ಕೆ ವಚನಕಾರರು ನೀಡಿದ ಉತ್ತಮ ಕಾಣಿಕೆಯಾಗಿದೆ. ವಚನಗಳು ಉತ್ತಮ ಮೌಲ್ಯಗಳನ್ನು ಕಲಿಸಿಕೊಡುತ್ತವೆ. ಸತ್ಯಶುದ್ಧ ಕಾಯಕ, ದಾಸೋಹ, ಏಕದೇವೋಪಾಸನೆಯಂತಹ ಶರಣರ ಆದರ್ಶಗಳು ಸಾರ್ವಕಾಲಿಕ ಅನುಕರಣೀಯ.ಮ.ಸುರೇಶ್‌ಬಾಬು ದೇವನಹಳ್ಳಿ ತಾಲೂಕು ಶರಣಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಧರ್ಮಗಳ ನಡುವೆ ಭೇಧಭಾವ ಬಾರದೇ ಮಾನವಧರ್ಮದ ಪಾಲನೆಯಾಗುವಂತಾಗಬೇಕು. ಮಕ್ಕಳ ದಿಸೆಯಿಂದಲೇ ವಚನಗಳ ಅಧ್ಯಯನಶೀಲತೆಯನ್ನು ಬೆಳೆಸಬೇಕು. ವಚನಗಳ ಆಳವಾದ ಅರ್ಥವನ್ನು ಪ್ರಸಾರ ಮಾಡುವ ಅಗತ್ಯವಿದೆ.ರಾಜು ಅವ್ಳೇಕರ್ ಮುಖ್ಯಶಿಕ್ಷಕಶರಣ ಸಂಕುಲವು ಅನ್ಯೋನ್ಯತೆಯನ್ನು ಜಗತ್ತಿಗೆ ಆಚರಿಸಿ ತೋರಿಸಿದೆ. ಜನಜೀವನವನ್ನು ಸತ್ಯಶುದ್ಧ ಕಾಯಕ, ದಾಸೋಹ, ಸಹೋದರತ್ವ, ಅನುಭಾವ, ಮಹಿಳಾಸಬಲೀಕರಣ, ದಯೆ, ಸಮಾನತೆ, ಶೀಲದಂತಹ ಗುಣಗಳ ತಳಹದಿಯ ಮೇಲೆ ಕಟ್ಟಿದವರು ಶರಣರು.ಚಂದ್ರಶೇಖರಹಡಪದ ಜಿಲ್ಲಾ ಶರಣಸಾಹಿತ್ಯ ಪರಿಷತ್ತಿನ ಅಧ್ಯಕ್ಷ