

ಶೃಂಗೇರಿ: ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತುವ ಹಕ್ಕು ಭಾರತೀಯ ಮಾನವ ಹಕ್ಕುಗಳ ಸಂಸ್ಥೆಯ ಮೂಲ ಉದ್ದೇಶವಾಗಬೇಕು ಎಂದು ಪೊಲೀಸ್ ಉಪನಿರೀಕ್ಷಕ ಜಕ್ಕಣನವರ್ ತಿಳಿಸಿದರು.
ಸೋಮವಾರ ತಾಲೂಕು ಭಾರತೀಯ ಮಾನವ ಹಕ್ಕುಗಳ ಸಂಸ್ಥೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಸಂಸ್ಥೆ ಸಮಾಜದ ಕಟ್ಟಕಡೆಯ ಜನರ ಪರವಾಗಿ ಕೆಲಸ ಮಾಡಬೇಕು. ಗ್ರಾಮೀಣ ಜನರಿಗೆ ಕಾನೂನು ಅರಿವು ಮೂಡಿಸುವ ಗುರುತರ ಜವಾಬ್ದಾರಿಯನ್ನು ಪದಾಧಿಕಾರಿಗಳು ನಿರ್ವಹಿಸಬೇಕು. ಇಂಥ ಸಂಘ-ಸಂಸ್ಥೆಗಳು ಸಾಂಕ ಮನೋಭಾವದಿಂದ ದುಡಿದಾಗ ಸಮಾಜ ಉನ್ನತೀಕರಣ ಸಾಧ್ಯ ಎಂದರು.
ಸಂಸ್ಥೆ ರಾಜ್ಯಾಧ್ಯಕ್ಷ ನಾರಾಯಣ ಜಿ. ಈಳಿಗೇರ ಮಾತನಾಡಿ, ಸಮಾಜದ ಶ್ರೇಯಸ್ಸಿಗೆ ಭ್ರಷ್ಟಾಚಾರ ಮಾರಕವಾಗಿದೆ. ಭ್ರಷ್ಟಾಚಾರ ವಿರುದ್ಧ ಧ್ವನಿ ಎತ್ತುವ ಕಾರ್ಯವನ್ನು ಸಂಸ್ಥೆ ಮಾಡುತ್ತಿದೆ ಎಂದು ಹೇಳಿದರು.
ಸಂಸ್ಥೆಯ ಗುರುತಿನ ಕಾರ್ಡ್ ಹಾಗೂ ಆದೇಶ ಪತ್ರವನ್ನು ನೂತನ ಪದಾಧಿಕಾರಿಗಳಿಗೆ ಹಸ್ತಾಂತರಿಸಲಾಯಿತು. ಸಂಸ್ಥೆಯ ರಾಜ್ಯ ಉಪಾಧ್ಯಕ್ಷ ಜೆ.ಗಿರಿಧರ್, ತಾಲೂಕು ಅಧ್ಯಕ್ಷ ಜಿ.ವಿ.ಮೋಹನ್, ಕಾರ್ಯದರ್ಶಿ ಸಚಿನ್, ಪದಾಧಿಕಾರಿಗಳಾದ ನವೀನ್‌ಕುಮಾರ್, ವೇಣುಗೋಪಾಲ್, ಬಾಲಗಂಗಾಧರ್, ಮಹೇಶ್ ಇದ್ದರು.