

ಹುಬ್ಬಳ್ಳಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಬಜೆಟ್ ದೇಶದ ಹಿತಾಸಕ್ತಿ, ಜನರ ಅಭಿವೃದ್ಧಿಗೆ ಪೂರಕವಾಗಿದೆ. ಎಲ್ಲ ರೀತಿಯ ಆಯಾಮಗಳಲ್ಲಿಯೂ ಜನರಿಗೆ ಅನುಕೂಲಕರವಾಗಿದೆ ಎಂದು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಪ್ರಕಾಶ ಶೃಂಗೇರಿ ಬಣ್ಣಿಸಿದ್ದಾರೆ.
ರೈತರ ಪ್ರಗತಿಗಾಗಿ ಮತ್ತು ಸಾವಯುವ ಕೃಷಿಗೆ ಪ್ರೋತ್ಸಾಹ ನೀಡಲಾಗಿದೆ. ಶಿಕ್ಷಣ, ಭಾಷಾ ಅಭಿವೃದ್ಧಿ, ತಂತ್ರಜ್ಞಾನದ ಕ್ಷೇತ್ರ, ಬಡವರು ಮತ್ತು ಮಧ್ಯಮ ವರ್ಗದ ಹಿತವನ್ನು ಕಾಪಾಡುವಂತಹ ತೆರಿಗೆ ನೀತಿಗಳು ಬದಲಾಗಿವೆ. ವ್ಯಾಪಾರದ ದೃಷ್ಟಿಯಿಂದ, ರಕ್ಷಣಾ ವಲಯದ ಸುರಕ್ಷತೆವರೆಗೆ ಎಲ್ಲ ಕ್ಷೇತ್ರಗಳಿಗೆ ಅನುದಾನ ನೀಡಿರುವ ಈ ಅಮೃತಕಾಲ ಬಜೆಟ್ ಅನ್ನು ನಾನು ಸ್ವಾಗತಿಸುತ್ತೇನೆ. ಒಟ್ಟಾರೆ ದೇಶವನ್ನು ಆರ್ಥಿಕ ಚೌಕಟ್ಟಿನೊಳಗೆ ಅಭಿವೃದ್ಧಿಯುತವಾಗಿ ನಡೆಸುವ ದೂರದೃಷ್ಟಿಯ ಬಜೆಟ್ ಇದಾಗಿದೆ ಎಂದಿದ್ದಾರೆ.