ಲೋಕಾಯುಕ್ತರಿಗೆ ಆಸ್ಪತ್ರೆಯ ವಾಸ್ತವ ದರ್ಶನ!

1
Published on

ಅವ್ಯವಸ್ಥೆ ಕಂಡು ಕೆಂಡಾಮಂಡಲರಾದ ನ್ಯಾಯಮೂರ್ತಿ ಬಿ.ಎಸ್​.ಪಾಟೀಲ್​ | ಜಿಲ್ಲೆಯ ವಿವಿಧ ಕಚೇರಿಗೆ ಭೇಟಿ, ಪರಿಶೀಲನೆ

ವಿಜಯವಾಣಿ ಸುದ್ದಿಜಾಲ ತುಮಕೂರು
ಭಷ್ಟ್ರಾಚಾರ ನಿಮೂರ್ಲನೆಗೆ ಕಂಕಣ ತೊಟ್ಟಿರುವ ಲೋಕಾಯುಕ್ತರು ಸರ್ಕಾರಿ ಕಚೇರಿ, ವಿದ್ಯಾರ್ಥಿನಿಲಯ, ಆಸ್ಪತ್ರೆಗೆ "ಚಿಕಿತ್ಸೆ' ನೀಡಲು ಮುಂದಾಗಿದ್ದಾರೆ. ಬುಧವಾರ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್​.ಪಾಟೀಲ್​ ಅಲ್ಲಿನ ಅನೈರ್ಮಲ್ಯ ಕಂಡು ಕೆಂಡಾಮಂಡಲವಾದರು. ಅಪಘಾತ ತುರ್ತು ಚಿಕಿತ್ಸಾ ಕೇಂದ್ರ, ಡಯಾಲಿಸಿಸ್​ ಕೇಂದ್ರ, ಹೆರಿಗೆ ವಾರ್ಡ್​, ಮಕ್ಕಳ ವಾರ್ಡ್​, ತೀವ್ರ ನಿಗಾ ಘಟಕ ಸೇರಿ ವಿವಿಧ ವಾರ್ಡ್​ಗಳಿಗೆ ಭೇಟಿ ನೀಡಿದಾಗ "ಸರ್ಕಾರಿ ಆಸ್ಪತ್ರೆ'ಗಳ ವಾಸ್ತವ ದರ್ಶನವಾಯಿತು.


ಆಸ್ಪತ್ರೆಯ ಆವರಣ, ಶೌಚಗೃಹ ಮತ್ತು ವಾರ್ಡ್​ಗಳಲ್ಲಿ ಸ್ವಚ್ಛತೆ ಇಲ್ಲದಿರುವುದನ್ನು ಕಂಡ ನ್ಯಾ.ಪಾಟೀಲ್​, ಆಸ್ಪತ್ರೆಯ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರಲ್ಲದೆ, ಸ್ವಚ್ಛತೆ ನಿರ್ವಹಣೆಗಾಗಿ ಅನುದಾನ ನೀಡುತ್ತಿದ್ದು, ಸ್ವಚ್ಛತೆಗೆ ಮೊದಲ ಆದ್ಯತೆ ನೀಡುವಂತೆ ತಾಕೀತು ಮಾಡಿದರು. ಎಲ್ಲ ಔಷಧಗಳನ್ನು ಉಚಿತವಾಗಿ ಆಸ್ಪತ್ರೆಯಲ್ಲೇ ವಿತರಿಸಲಾಗುತ್ತಿದೆಯೇ ಎಂಬ ಬಗ್ಗೆ ರೋಗಿಗಳ ಸಂಬಂಧಿಕರ ಬಳಿ ಮಾಹಿತಿ ಪಡೆದು ಖಚಿತಪಡಿಸಿಕೊಂಡರು. ಮುಖ್ಯ ಔಷಧ ಉಗ್ರಾಣಕ್ಕೂ ಭೇಟಿ ನೀಡಿ ಔಷಧ ದಾಸ್ತಾನು, ವಿತರಣೆಗೆ ಸಂಬಂಧಿಸಿದಂತೆ ನೋಂದಣಿ ಪುಸ್ತಕಗಳನ್ನು ಖುದ್ದು ಪರಿಶೀಲಿಸಿದರು. ಒಂದು ವೇಳೆ ಔಷಧಗಳನ್ನು ಹೊರಗಡೆಯಿಂದ ತರಿಸಿದ ಪ್ರಕರಣ ಕಂಡುಬಂದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ತ್ಯಾಜ್ಯ ವಿಲೇವಾರಿಗೂ ಲೋಕಾ ಬಿಸಿ!
ನಗರದಲ್ಲಿ ತ್ಯಾಜ್ಯ ವಿಲೇವಾರಿ ಸಮಸ್ಯೆ ಬೆಟ್ಟದಂತಿದೆ. ವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿ ಮಾಡದ ಸ್ಥಳಿಯ ಸಂಸ್ಥೆಗಳ ವಿರುದ್ಧ ಪ್ರಕರಣ ದಾಖಲಿಸಲಾಗುವುದು. ತ್ಯಾಜ್ಯ ನಿರ್ವಹಣೆ ಪರಿಶೀಲಿಸಲು ರಾಜ್ಯದಲ್ಲಿ 8 ವಲಯಗಳನ್ನು ಗುರುತಿಸಿ ಜಾಗೃತ ದಳದ ಅಧಿಕಾರಿಯನ್ನು ನೇಮಿಸಲಾಗಿದೆ. ದೂರು ಬಂದ ಪ್ರದೇಶಕ್ಕೆ ಜಾಗೃತ ದಳ ಭೇಟಿ ನೀಡಿ ಪರಿಶೀಲಿಸಲಿದೆ. ಈ ಕ್ರಮದಿಂದ ಚಿತ್ರದುರ್ಗ, ವಿಜಯಪುರ, ಶಿವಮೊಗ್ಗ ನಗರಗಳಲ್ಲಿ ಸಂಗ್ರಹವಾಗಿದ್ದ 100 ಟನ್​ಗೂ ಹೆಚ್ಚಿನ ತ್ಯಾಜ್ಯ ವಿಲೇವಾರಿಯಾಗಿದೆ. ತ್ಯಾಜ್ಯ ವಿಲೇವಾರಿಯಲ್ಲಿ ಜವಾಬ್ದಾರಿ ನಿರ್ವಹಿಸದ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ ಎಂದು ಪಾಟೀಲ್​ ಎಚ್ಚರಿಸಿದರು.

ಕಟ್ಟಡ ರಿಪೇರಿ, ಸೋಲಾರ್​ ಅಳವಡಿಸಿ
ಬಿ.ಎಚ್​.ರಸ್ತೆಯ ಮೆಟ್ರಿಕ್​ ನಂತರದ ಬಾಲಕಿಯರ ಡಿ.ಇಡಿ, ಬಿ.ಇಡಿ ವಿದ್ಯಾರ್ಥಿನಿಲಯಕ್ಕೆ ಭೇಟಿ ನೀಡಿದ ನ್ಯಾ.ಬಿ.ಎಸ್​.ಪಾಟೀಲ್​, ಊಟ, ಉಪಾಹಾರದ ಗುಣಮಟ್ಟದ ಬಗ್ಗೆ ವಿದ್ಯಾರ್ಥಿನಿಯರಿಂದಲೇ ಮಾಹಿತಿ ಪಡೆದರು. ಈ ವೇಳೆ ಹೆಣ್ಣುಮಕ್ಕಳಿಗೆ ಬಿಸಿನೀರಿನ ಸೌಲಭ್ಯಕ್ಕೆ ಸೋಲಾರ್​ ಅಳವಡಿಸಿ, ಕಟ್ಟಡವನ್ನ ರಿಪೇರಿ ಮಾಡಿಸಿ ಎಂದು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೃಷ್ಣಪ್ಪ ಅವರಿಗೆ ಸೂಚನೆ ನೀಡಿದರು. ಸಂದರ್ಶನ ಪುಸ್ತಕದಲ್ಲಿ ಹೆಣ್ಣುಮಕ್ಕಳ ಮಾನಸಿಕ, ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ಯೋಗಾಭ್ಯಾಸ ಮಾಡಿಸಿ. ವ್ಯಕ್ತಿತ್ವ ನಿರ್ಮಾಣ, ಸಾಮಾಜಿಕ ಜವಾಬ್ದಾರಿ ಹೆಚ್ಚಿಸಲು ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ ವಿಶೇಷ ಉಪನ್ಯಾಸ ಏರ್ಪಡಿಸಿ ಎಂದು ಸಲಹೆ ದಾಖಲಿಸಿದರು.

ಕೆರೆ ಒತ್ತುವರಿ ಪ್ರಕರಣ ದಾಖಲು…
ಕೆರೆ ಒತ್ತುವರಿಗೆ ಸಂಬಂಧಿಸಿದಂತೆ ತುಮಕೂರಿನ ಎಲ್ಲ ಕೆರೆಗಳ ಮೇಲೆ ಲೋಕಾದಲ್ಲಿ ಪ್ರಕರಣ ದಾಖಲಾಗಿದೆ. ಕೆರೆ-ಕಟ್ಟೆಗಳನ್ನು ಹೊಸದಾಗಿ ನಿಮಾರ್ಣ ಮಾಡಲು ಸಾಧ್ಯವಿಲ್ಲದಿದ್ದರೂ ಇರುವ ಕೆರೆಗಳನ್ನು ಉಳಿಸಿಕೊಳ್ಳಬೇಕು. ಒತ್ತುವರಿ ತೆರವುಗೊಳಿಸಿ ಕೆರೆಗಳನ್ನು ಪುನಶ್ಚೇತನಗೊಳಿಸಬೇಕು. ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆಯಾಗಲಿದೆ. ಸಾರ್ವಜನಿಕ ಆಸ್ತಿಯಾದ ಕೆರೆಗಳ ಮೇಲೆ ಮನೆಗಳನ್ನು ನಿಮಾರ್ಣ ಮಾಡಿದರೆ ಕೆರೆ ಉಳಿಸುವುದಾದರೂ ಹೇಗೆ ಸಾಧ್ಯ?. 3 ವರ್ಷಗಳಿಂದ ಕೆರೆ ಒತ್ತುವರಿ ಸಮೀಕ್ಷೆ ನಡೆಸಿ ವರದಿ ನೀಡಲು ಹತ್ತಾರುಬಾರಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದರೂ ಬೇಜವಾಬ್ದಾರಿ ತೋರಿಸುತ್ತಿದ್ದಾರೆ. ಅಧಿಕಾರಿಗಳು ಸುಧಾರಿಸಿಕೊಳ್ಳದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ನ್ಯಾ.ಪಾಟೀಲ್​ ಎಚ್ಚರಿಕೆ ನೀಡಿದರು.

ಭ್ರಷ್ಟಾಚಾರ ನಿಮೂರ್ಲನೆಗೆ ಬದ್ಧ: ಸಿಟಿ ರೌಂಡ್ಸ್​ಗೂ ಮುನ್ನ ನಗರದ ಸರ್ಕಾರಿ ಅತಿಥಿಗೃಹದಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಲೋಕಾಯುಕ್ತ ನ್ಯಾ.ಬಿ.ಎಸ್​.ಪಾಟೀಲ್​, ಭ್ರಷ್ಟಾಚಾರ ನಿಮೂರ್ಲನೆಗೆ ಲೋಕಾಯುಕ್ತ ಬದ್ಧವಾಗಿದೆ. ಈ ನಿಟ್ಟಿನಲ್ಲಿ ರಾಜ್ಯದ ಎಲ್ಲ ಜಿಲ್ಲೆಯ ಸರ್ಕಾರಿ ಕಚೇರಿ, ಆಸ್ಪತ್ರೆ, ವಿದ್ಯಾರ್ಥಿನಿಲಯ, ಗ್ರಾಪಂಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಲಾಗುತ್ತಿದೆ ಎಂದರು. ಜನಪ್ರತಿನಿಧಿಗಳು, ಸರ್ಕಾರಿ ಇಲಾಖೆ ಅಧಿಕಾರಿ, ಸಿಬ್ಬಂದಿವರ್ಗ, ಸ್ಥಳಿಯ ಸಂಸ್ಥೆಗಳು ಪ್ರಾಮಾಣಿಕವಾಗಿ ಸಾರ್ವಜನಿಕ ಸೇವೆ ಒದಗಿಸಬೇಕು. ಸರ್ಕಾರದಿಂದ ವಿವಿಧ ಯೋಜನೆಗಳಡಿ ಬಿಡುಗಡೆಯಾಗುವ ಹಣವನ್ನು ಅರ್ಹರಿಗೆ ತಲುಪಿಸಬೇಕು. ವಿವಿಧ ಅಭಿವೃದ್ಧಿ ಯೋಜನೆಗಳಡಿ ಬಿಡುಗಡೆಯಾಗುವ ಕೋಟ್ಯಂತರ ರೂಪಾಯಿಗಳ ಅನುದಾನವನ್ನು ಉದ್ದೇಶಿತ ಕಾಮಗಾರಿಗಳಿಗೆ ವಿನಿಯೋಗಿಸುವಲ್ಲಿ ರ್ನಿಲಕ್ಷ್ಯ ತೋರುವ ಅಧಿಕಾರಿಗಳ ಮೇಲೆ ಸ್ವಯಂಪ್ರೇರಿತವಾಗಿ ಲೋಕಾಯುಕ್ತ ಪ್ರಕರಣ ದಾಖಲಿಸಿಕೊಳ್ಳಲಾಗುವುದು ಎಂದು ತಿಳಿಸಿದರು.

ಸಾರ್ವಜನಿಕ ದೂರುಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸಲು ಲೋಕಾಯುಕ್ತದಲ್ಲಿ ಪೊಲೀಸ್​, ಕಾನೂನು, ತಾಂತ್ರಿಕ, ಆಡಳಿತ ಶಾಖೆ ಸೇರಿ ಪ್ರತ್ಯೇಕ ಶಾಖೆಗಳಿದ್ದು, ಸಂಬಂಧಿಸಿದ ಶಾಖೆಗಳ ಅಧಿಕಾರಿಗಳು ಸ್ವೀಕೃತ ದೂರುಗಳ ಬಗ್ಗೆ ತನಿಖೆ ನಡೆಸಿ ಲೋಕಾಯುಕ್ತಕ್ಕೆ ವಿವರಣಾತ್ಮಕ ವರದಿ ನೀಡಲಿದ್ದಾರೆ. ವರದಿಯನ್ನಾಧರಿಸಿ ಲೋಪಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಲ್ಲದೆ ಲೋಪ ಸರಿಪಡಿಸಲು ಸೂಕ್ತ ನಿರ್ದೇಶನ ನೀಡಲಾಗುವುದು ಎಂದರು. ಜಿಲ್ಲಾಧಿಕಾರಿ ಶುಭಕಲ್ಯಾಣ್​, ಜಿಪಂ ಸಿಇಒ ಜಿ.ಪ್ರಭು, ಲೋಕಾಯುಕ್ತ ಎಸ್ಪಿ ಎ.ವಿ.ಲಕ್ಷಿ$್ಮನಾರಾಯಣ, ಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜ, ಎಎಸ್ಪಿ ವಿ.ಮರಿಯಪ್ಪ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಚಂದ್ರಶೇಖರ್​, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ,ಅಸ್ಗರ್​ ಬೇಗ್​, ಎಸಿ ಗೌರವಕುಮಾರ್​ ಶೆಟ್ಟಿ, ತಹಸೀಲ್ದಾರ್​ ಸಿದ್ದೇಶ್​, ಇತರ ಅಧಿಕಾರಿಗಳು ಇದ್ದರು.

ಸಮರ್ಪಕ ದಾಖಲೆ ಇಲ್ಲ!
ಲೋಕಾಯುಕ್ತದಿಂದ ಇತ್ತೀಚೆಗಷ್ಟೆ ರಾಜ್ಯದ 18 ಗ್ರಾಪಂಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಿದ ವೇಳೆ ಒಂದೇ ಒಂದು ಗ್ರಾಪಂನಲ್ಲೂ ಸಮರ್ಪಕ ದಾಖಲೆ ನಿರ್ವಹಣೆ ಮಾಡಿಲ್ಲ. ನಗದು ಪುಸ್ತಕದಲ್ಲಿ ಪಂಚಾಯಿತಿಗೆ ಹಣ ಸಂದಾಯ ಹಾಗೂ ವೆಚ್ಚದ ಮಾಹಿತಿಗಳೇ ಇಲ್ಲ. ಪಂಚಾಯಿತಿ ಆಸ್ತಿ ಬಗ್ಗೆಯೂ ಸೂಕ್ತ ದಾಖಲೆಗಳಿಲ್ಲ. ಕಚೇರಿಗಳಲ್ಲಿ ಎಲ್ಲದಕ್ಕೂ ಸೂಕ್ತ ದಾಖಲೆಗಳಿರಬೇಕು. ಪಾರದರ್ಶಕವಾಗಿ ಸೇವೆ ಸಲ್ಲಿಸಬೇಕು ಎಂದು ನ್ಯಾ.ಬಿ.ಎಸ್​.ಪಾಟೀಲ್​ ಎಚ್ಚರಿಕೆ ನೀಡಿದರು.

ಸರ್ಕಾರಿ ಅಧಿಕಾರಿಗಳ ವಿರುದ್ಧ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾದಲ್ಲಿ ಹುದ್ದೆಯಲ್ಲಿ ಮುಂಬಡ್ತಿ, ವೇತನ ಬಡ್ತಿ, ವಯೋನಿವೃತ್ತಿ ವೇತನದಿಂದ ವಂಚಿತರಾಗಬೇಕಾಗುತ್ತದೆ. ವೈಯಕ್ತಿಕ ಬದುಕಿನ ಮೇಲೂ ಪರಿಣಾಮ ಬೀರುತ್ತದೆ. ಅಧಿಕಾರಿಗಳು ಜನರ ಶಾಪಕ್ಕೆ ಗುರಿಯಾಗಿ ಅಭಿವೃದ್ಧಿ ಮಾಡದೆ ಜಿಲ್ಲೆಯ ಬೆಳವಣಿಗೆಗೆ ಶ್ರಮಿಸಬೇಕು. ಭ್ರಷ್ಟ ಅಧಿಕಾರಿಗಳನ್ನು ಪತ್ತೆ ಹಚ್ಚಿ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು. | ನ್ಯಾ.ಬಿ.ಎಸ್​.ಪಾಟೀಲ್​, ಲೋಕಾಯುಕ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net