ಯುವಕನಿಗೆ ಚಾಕುವಿನಿಂದ ಇರಿದ ಭಗ್ನಪ್ರೇಮಿ

Rajesh ambiga
Published on

ಕುಮಟಾ: ಪ್ರೀತಿ ನಿರಾಕರಿಸಿದ ಯುವತಿಯೊಂದಿಗೆ ಮದುವೆ ನಿಶ್ಚಯವಾಗಿದ್ದ ಯುವಕನ ಮೇಲೆ ಭಗ್ನಪ್ರೇಮಿಯೊಬ್ಬ ಚಾಕುವಿನಿಂದ ಹಲ್ಲೆ ಮಾಡಿದ ಘಟನೆ ಪಟ್ಟಣದ ಮಣಕಿ ಮೈದಾನದ ಬಳಿ ಬುಧವಾರ ನಡೆದಿದೆ.

ದುಂಡಕುಳಿಯ ಆಟೋಚಾಲಕ ಸಂತೋಷ ಪಾಂಡುರಂಗ ಅಂಬಿಗ(27) ಹಲ್ಲೆಗೊಳಗಾದ ವ್ಯಕ್ತಿ. ತಾಲೂಕಿನ ಹೆಗಡೆ ಚಿಟ್ಟಿಕಂಬಿಯ ನಿವಾಸಿ ವಾಟರ್ ಸರ್ವಿಸ್ ಕೆಲಸ ಮಾಡುವ ರಾಜೇಶ ರಮೇಶ ಅಂಬಿಗ(27) ಆರೋಪಿ.

ಆರೋಪಿ ರಾಜೇಶ ಅಂಬಿಗ ಯುವತಿಯನ್ನು ಪ್ರೀತಿಸುತ್ತಿದ್ದ. ಆದರೆ, ರಾಜೇಶನ ನಡವಳಿಕೆ ಸರಿಯಾಗಿಲ್ಲದಿದ್ದರಿಂದ ಯುವತಿ ರಾಜೇಶನಿಂದ ದೂರ ಸರಿದಿದ್ದಳು. ನಂತರ ಯುವತಿಯು ಸಂತೋಷ ಅಂಬಿಗನನ್ನು ಪ್ರೀತಿಸಿದ್ದು ಮದುವೆಯಾಗಲು ಇಚ್ಛಿಸಿದ್ದರು. ಇದರಿಂದ ಕೋಪಗೊಂಡ ರಾಜೇಶ ಅಂಬಿಗ, ಮಣಕಿ ಮೈದಾನಕ್ಕೆ ಸಂತೋಷ ಅಂಬಿಗನನ್ನು ಕರೆಸಿದ್ದಾನೆ. ತಾನು ಪ್ರೀತಿಸಿದ ಯುವತಿಯನ್ನು ಮದುವೆಯಾಗದಂತೆ ಕೊಲೆ ಬೆದರಿಕೆ ಹಾಕಿ, ಖಾರದ ಪುಡಿ ಎರಚಿ ಚಾಕುವಿನಿಂದ ಕುತ್ತಿಗೆಯ ಮೇಲೆ ತಿವಿದಿದ್ದಾನೆ. ಅಲ್ಲಿಂದ ಹೇಗೋ ತಪ್ಪಿಸಿಕೊಂಡ ಬಂದ ಸಂತೋಷನನ್ನು ಕುಮಟಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಕೋಡ್ಕಣಿಯ ಸುಬ್ರಹ್ಮಣ್ಯ ನಾರಾಯಣ ಅಂಬಿಗ ನೀಡಿದ ದೂರಿನನ್ವಯ ಪ್ರಕರಣ ದಾಖಲಾಗಿದ್ದು ತನಿಖೆ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net