ತ್ಯಾಜ್ಯ ಘಟಕದಿಂದ ಬದುಕೇ ಬರ್ಬರ, ಕಲುಷಿತ ನೀರನ್ನು ಚರಂಡಿಗೆ ಬಿಟ್ಟಿದ್ದಕ್ಕೆ ಗ್ರಾಮಸ್ಥ ಪ್ರತಿಭಟನೆ, ಆತ್ಮಹತ್ಯೆ ಹೈಡ್ರಾಮಾ

11ank news and photos 01(1)
Published on

ಆನೇಕಲ್: ಬಿಬಿಎಂಪಿ ಘನತ್ಯಾಜ್ಯ ಸಂಸ್ಕರಣಾ ಘಟಕದಿಂದ ಕಲುಷಿತ ನೀರನ್ನು ಹೊರಗೆ ಬಿಡುತ್ತಿದ್ದು, ಇದರಿಂದಾಗಿ ದುರ್ವಾಸನೆ ಜತೆಗೆ ಸೊಳ್ಳೆ, ನೊಣಗಳ ಕಾಟದಿಂದ ಜನರು ಕಾಯಿಲೆಗಳಿಗೆ ತುತ್ತಾಗುವಂತಾಗಿದೆ ಎಂದು ಆರೋಪಿಸಿ ಚಿಕ್ಕನಾಗಮಂಗಲ ನಿವಾಸಿಗಳು ಶನಿವಾರ ಪ್ರತಿಭಟನೆ ನಡೆಸಿದರು.

ಈ ವೇಳೆ ಸ್ಥಳಕ್ಕೆ ಬಂದ ಪೊಲೀಸರ ಜತೆ ವಾಗ್ವಾದದ ನಡೆಸಿದ ಗ್ರಾಪಂ ಮಾಜಿ ಅಧ್ಯಕ್ಷ ವೆಂಕಟೇಶ್ ರಸ್ತೆಯಲ್ಲೇ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಹೈಡ್ರಾಮಾ ಮಾಡಿದ್ದರಿಂದ ಕೆಲ ಹೊತ್ತು ಬಿಗುವಿನ ವಾತಾವರಣ ನಿರ್ಮಾಣವಾಯಿತು.

ಸಮಸ್ಯೆ ಏನು?: ಬೆಂಗಳೂರಿನ ಬಿಬಿಎಂಪಿಯಿಂದ ಶಾಂತಿಪುರ ಪಂಚಾಯಿತಿಯ ಚಿಕ್ಕನಾಗಮಂಗಲದಲ್ಲಿ ಕಸ ಘಟಕ ನಿರ್ಮಿಸಲಾಗಿದೆ. ಇದರಿಂದಾಗಿ ಎರಡು ವರ್ಷಗಳಿಂದಲೂ ಜನ ಹಲವು ಕಾಯಿಲೆಗೆ ತುತ್ತಾಗುವಂತಾಗಿದೆ. ವಾರದಿಂದ ಸಂಸ್ಕರಣ ಘಟಕದಿಂದ ತ್ಯಾಜ್ಯ ನೀರನ್ನು ಹೊರಗೆ ಬಿಟ್ಟಿದ್ದು, ದುರ್ವಾಸನೆ ಹೆಚ್ಚಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಗ್ರಾಪಂ ಮಾಜಿ ಅಧ್ಯಕ್ಷ ವೆಂಕಟೇಶ್ ಮಾತನಾಡಿ, ಘನತ್ಯಾಜ್ಯ ಸಂಸ್ಕರಣಾ ಘಟಕ ಶುರುವಾದ ದಿನದಿಂದಲೂ ಸಹ ಸುತ್ತಮುತ್ತಲಿನ ಗ್ರಾಮದ ಜನಕ್ಕೆ ಒಂದಿಲ್ಲೊಂದು ಸಮಸ್ಯೆ ಎದುರಾಗಿದೆ. ಇಷ್ಟು ದಿನ ತ್ಯಾಜ್ಯ ವಿಂಗಡಣೆಯಿಂದ ಉತ್ಪತ್ತಿಯಾಗುವ ಕಲುಷಿತ ದ್ರವ ತ್ಯಾಜ್ಯವನ್ನು ಗುಂಡಿ, ರಾಜಕಾಲುವೆ ಮೂಲಕ ಹರಿಸಲಾಗುತ್ತಿತ್ತು. ಈಗ ಕಲುಷಿತ ನೀರನ್ನು ನೇರವಾಗಿ ಚರಂಡಿಗೆ ಹರಿಬಿಡುತ್ತಿದ್ದು, ಜನ ಮತ್ತಷ್ಟು ತೊಂದರೆ ಅನುಭವಿಸುವಂತಾಗಿದೆ ಎಂದರು.

ಸ್ಥಳೀಯ ಶ್ರೀಧರ್ ಮಾತನಾಡಿ, ಗ್ರಾಮವೇ ಕಸದ ವಾಸನೆಯಿಂದ ರೋಸಿ ಹೋಗಿದೆ. ಜೀವನ ನಡೆಸಲು ತೊಂದರೆಯಾಗಿದೆ. ಸಂಬಂಧಪಟ್ಟ ಬಿಬಿಎಂಪಿ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದೇವೆ. ಆದರೆ ಜನ ಸಾಮಾನ್ಯರ ಮಾತಿಗೆ ಅಧಿಕಾರಿಗಳು ಸೊಪ್ಪು ಹಾಕುವುದಿಲ್ಲ ಎಂದರು.

ಪೊಲೀಸರೊಂದಿಗೆ ವಾಗ್ವಾದ: ಪ್ರತಿಭಟನೆ ನಡೆಸಲು ಗ್ರಾಮಸ್ಥರು ಅನುಮತಿ ಪಡೆದಿಲ್ಲ ಎಂದು ಸ್ಥಳಕ್ಕಾಗಮಿಸಿದ ಪರಪ್ಪನ ಅಗ್ರಹಾರ ಠಾಣೆಯ ಇನ್‌ಸ್ಪೆಕ್ಟರ್ ನಂದೀಶ್ ಅಸಮಾಧಾನ ವ್ಯಕ್ತಪಡಿಸಿದರು. ಆದರೆ ಅಧಿಕಾರಿಗಳ ವರ್ತನೆಗೆ ಕೆರಳಿದ್ದ ಗ್ರಾಮಸ್ಥರು, ಪೊಲೀಸರು ಸಮಸ್ಯೆಗೆ ಸ್ಪಂದಿಸುವ ಬದಲು ಕೇಸ್ ದಾಖಲಿಸುವ ಬೆದರಿಕೆ ಹಾಕುತ್ತಿದ್ದಾರೆಂದು ದೂರಿದ್ದರಿಂದ ಮಾತಿನ ಚಕಮಕಿಗೆ ಕಾರಣವಾಯಿತು.

ಅಧಿಕಾರಿಗಳ ನಿರ್ಲಕ್ಷ್ಯ: ಸ್ಥಳಕ್ಕೆ ಆಗಮಿಸಿದ ಬಿಬಿಎಂಪಿ ಇಂಜಿನಿಯರ್ ಮಹಂತೇಶ್, ಸಂಸ್ಕರಣಾ ಘಟಕದ ವ್ಯವಸ್ಥಾಪಕರು ರಜಾ ಹೋಗಿದ್ದಾರೆ. ಅವರು ಬಂದ ನಂತರ ಸಮಸ್ಯೆ ಬಗೆಹರಿಸಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net