

ಷಣ್ಮುಖ.ಬಿ.ಈ. ನ್ಯಾಮತಿ
ಬದುಕಿನಲ್ಲಿ ಪ್ರತಿಯೊಬ್ಬರಿಗೂ ಚಿಕ್ಕ ಚಿಕ್ಕ ಕನಸುಗಳಿರುತ್ತವೆ. ಆ ಕನಸು ಈಡೇರಿದಾಗ ಆಗುವ ಸಂತೋಷಕ್ಕೆ ಪಾರವೇ ಇರಲಾರದು. ಒಮ್ಮೆಯಾದರೂ ವಿಮಾನದೊಳಗೆ ಆಗಸದಲ್ಲಿ ಹಾರಾಡಬೇಕು ಎಂದು ಕನಸು ಹೊತ್ತಿದ್ದ ಹಳ್ಳಿಹೈದನೊಬ್ಬ ಶಿವಮೊಗ್ಗ ನಿಲ್ದಾಣದಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಿ ಎಲ್ಲರ ಗಮನ ಸೆಳೆದಿದ್ದಾನೆ.
ಹೌದು.., ಇದೊಂದು ಘಟನೆ ವಿಚಿತ್ರ ಎನಿಸಿದರೂ ಸತ್ಯ. ತಾಲೂಕಿನ ಚಟ್ನಳ್ಳಿ ಗ್ರಾಮದಲ್ಲಿ ಹೈನುಗಾರಿಕೆ ಕೃಷಿ ಕೈಗೊಂಡು ಹಾಲಿನ ವಾಹನ ಓಡಿಸುತ್ತಾ ಜೀವನ ಬಂಡಿ ಸಾಗಿಸುತ್ತಿರುವ ರಾಜಪ್ಪ ಶಾಲೆಯ ಮೆಟ್ಟಿಲನ್ನೇ ತುಳಿದಿಲ್ಲ. ಇದೀಗ ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿದ್ದಾರೆ.
ಚಿಕ್ಕ ಚಿಕ್ಕ ಆಸೆಪಡುವುದು ಮಾನವನ ಹುಟ್ಟುಗುಣ. ಹೀಗಾಗಿ, ಈ ವ್ಯಕ್ತಿ ವಿಮಾನ ಏರುವ ಮೂಲಕ ಆಸೆ ತೀರಿಸಿಕೊಂಡಿದ್ದು, ಚಟ್ನಳ್ಳಿ ಗ್ರಾಮದಲ್ಲೇ ವಿಮಾನ ಏರಿದ ಮೊದಲಿಗ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾನೆ.
ವಿಡಿಯೋ ವೈರಲ್:
ಬೆಂಗಳೂರಿನಲ್ಲಿ ಏನೂ ಕೆಲಸ ಇಲ್ಲದಿದ್ದರೂ ಶಿವಮೊಗ್ಗದಿಂದ ಬೆಂಗಳೂರಿಗೆ ವಿಮಾನದಲ್ಲಿ ಪ್ರಯಾಣ ಮಾಡಿರುವ ರಾಜಪ್ಪ ವಾಪಸ್ ಶಿವಮೊಗ್ಗಕ್ಕೆ ಹಿಂದಿರುಗಿದ್ದಾರೆ. ಇನ್ನು ಸಾಮಾನ್ಯ ರೈತ ಕೂಡ ವಿಮಾನದಲ್ಲಿ ಪ್ರಯಾಣ ಬೆಳೆಸಬಹುದು ಎಂದು ವಿಮಾನದಲ್ಲಿ ಪ್ರಯಾಣಿಸಿದ ಹಳ್ಳಿಹೈದನ ವಿಡಿಯೋವನ್ನು ಶಿವಮೊಗ್ಗ ಸಂಸದ ಬಿ.ವೈ ರಾಘವೇಂದ್ರ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಟಿಕೆಟ್ ಬಗ್ಗೆ ವಿಚಾರಿಸಿದ್ದ ರಾಜಪ್ಪ:
ಶಿವಮೊಗ್ಗ ಕುವೆಂಪು ವಿಮಾನ ನಿಲ್ದಾಣವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಉದ್ಘಾಟಿಸಿದ ಮರುದಿನವೇ ರಾಜಪ್ಪ ವಿಮಾನ ಹಾರಾಟದ ಬಗ್ಗೆ ವಿಮಾನ ನಿಲ್ದಾಣದಲ್ಲಿ ವಿಚಾರಿಸಿದ್ದರು. ಅದಾದ ಬಳಿಕ ಸದ್ಯ ಸ್ವಲ್ಪ ದಿನದಲ್ಲೇ ವಿಮಾನ ನಿಲ್ದಾಣಕ್ಕೆ ವಿಮಾನಗಳು ಬರಲಿವೆ ಎಂದು ಅಲ್ಲಿನ ಸಿಬ್ಬಂದಿ ರಾಜಪ್ಪನವರಿಗೆ ಮಾಹಿತಿ ನೀಡಿದ್ದರು. ವಿಮಾನ ಬಂದರೆ ಹತ್ತುವ ಸಂಕಲ್ಪ ಕೂಡ ಮಾಡಿದ್ದರು. ಬಳಿಕ 2,920 ರೂ. ನೀಡಿ ಟಿಕೆಟ್ ಪಡೆದು ಶಿವಮೊಗ್ಗದಿಂದ ಬೆಂಗಳೂರಿಗೆ ಇಂಡಿಗೋ ವಿಮಾನ ಏರಿ ತೆರಳಿದ್ದು, ಬಳಿಕ ಮತ್ತೊಂದು ಟಿಕೆಟ್ ತೆಗೆಸಿ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಬಂದಿಳಿದು ಹಾಲು ಮಾರುವ ಕಾಯಕದಲ್ಲಿ ತೊಡಗಿಕೊಂಡಿದ್ದೇನೆ ಎಂದು ರಾಜಪ್ಪ ವಿಜಯವಾಣಿಯೊಂದಿಗೆ ಅನುಭವ ಹಂಚಿಕೊಂಡರು.
ಜೀವನದಲ್ಲಿ ಒಮ್ಮೆಯಾದ್ರೂ ವಿಮಾನ ಹತ್ತಬೇಕು ಎಂದು ಸಂಕಲ್ಪ ಮಾಡಿದ್ದೆ. ಆಸೆ ತೀರಿಸಿಕೊಂಡಿದ್ದೇನೆ. ಚಟ್ನಳ್ಳಿ ಗ್ರಾಮದಲ್ಲೇ ವಿಮಾನ ಹತ್ತಿದ ಮೊದಲಿಗ ನಾನು. ನಮ್ಮ ಕುಟುಂಬಸ್ಥರು ಕೂಡ ಸಂತಸ ವ್ಯಕ್ತಪಡಿಸಿದ್ದಾರೆ. ಜನ ಸಾಮಾನ್ಯನೂ ವಿಮಾನದಲ್ಲಿ ಓಡಾಡುವಂತೆ ಮಾಡಿದ ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಸಂಸದ ಬಿ.ವೈ ರಾಘವೇಂದ್ರ ಅವರಿಗೂ ಕೃತಜ್ಞತೆ ಅರ್ಪಿಸುವೆ.
ರಾಜಪ್ಪ