ಉಬ್ಬುಕಟ್ಟಿದವರಿಂದ ಉಪ್ಪು ಕುಂಟೆಯಾದ ಗ್ರಾಮ

illuminati
Published on

ಸಿ.ಎಸ್​.ವಿಶ್ವನಾಥಶಾಸ್ತ್ರಿ ರಾಯಲ್ಪಾಡು

ತಾಲೂಕಿನ ಉಪ್ಪುಕುಂಟೆ ಗ್ರಾಮವು ವೈದ್ಯಕಿಯ, ಶಿಕ್ಷಣ ಕ್ಷೇತ್ರ, ಪೊಲೀಸ್​, ಸಾರಿಗೆ ಇಲಾಖೆ, ರೈತಾಪಿ ವರ್ಗದವರಿಗೆ ಆಶ್ರಯ ನೀಡಿದ್ದು, ವಿಶೇಷವಾಗಿ ವಾಸ್ತುಶಿಲ್ಪ ಕ್ಷೇತ್ರದಲ್ಲಿ ವೈಶಿಷ್ಟ$್ಯಕ್ಕೆ ಹೆಸರುವಾಸಿಯಾಗಿದೆ.

ಗ್ರಾಮಕ್ಕೆ ಹೆಸರು ಹೇಗೆ ಬಂತು?: ಉಪ್ಪುಕುಂಟೆ ಗ್ರಾಮದ ಕುಂಟೆಯ ಬಳಿ ಚೌಳು ಮಣ್ಣು ಸಿಗುವ ಜಾಗವಾಗಿದ್ದು, ಹಿಂದಿನ ಕಾಲದಲ್ಲಿ ಚೌಳು ಮಣ್ಣಿನ ಮೂಲಕ ಉಬ್ಬು ಕಟ್ಟಿ ಬಟ್ಟೆ ತೊಳೆಯುತ್ತಿದ್ದರು. ಮುಡಿಯನೂರು, ಸುತ್ತಮುತ್ತಲಿನ ಹಳ್ಳಿಗಳಲ್ಲಿನ ಮಡಿವಾಳ ಸಮುದಾಯದವರು ಹಾಗೂ ಇತರರು ಬಟ್ಟೆ ಒಗೆಯಲು ಕುಂಟೆ ಬಳಿ ಹೋಗಿ ಅಲ್ಲಿ ಒಂದು ಪಾತ್ರೆಯಲ್ಲಿ ಬಟ್ಟೆ ಹಾಕಿ ಆ ಬಟ್ಟೆಗಳಿಗೆ ಅಲ್ಲಿ ಗೂಡುಕಟ್ಟಿ (ಉಬ್ಬು) ಹಬೆಯಿಂದ ಬಟ್ಟೆಗಳನ್ನು ಸ್ವಚ್ಛ ಮಾಡುತ್ತಿದ್ದರು ಎಂದು ಗ್ರಾಮದ ಹಿರಿಯರಾದ ಆರ್​.ಸಿದ್ದಪ್ಪ ಮಾಹಿತಿ ನೀಡಿದರು.

ಈ ಸ್ಥಳವು ಬಟ್ಟೆಗಳನ್ನು ಒಗೆಯಲು ಉಬ್ಬು ಸಿಗುವ ಜಾಗವಾಗಿದ್ದು, ಇದ್ದರಿಂದ ಉಬ್ಬು ಕುಂಟೆಯ ಸಮೀಪ ಕೆಲವರು ಮನೆ ನಿರ್ಮಿಸಿಕೊಂಡಿದ್ದರು. ಉಬ್ಬುಕುಂಟೆಯು ಕಾಲ ಕಾಲಕ್ಕೆ ಬೇರೆ ಬೇರೆ ಹೆಸರು ಪಡೆದು ಉಪ್ಪುಕುಂಟೆಯಾಗಿ ಇಂದು 200 ಕುಟುಂಬಗಳ ಅಂದಾಜು ಒಂದು ಸಾವಿರ ಜನ ಸಂಖ್ಯೆ ಇರುವ ಗ್ರಾಮವಾಗಿದೆ.

ಗ್ರಾಮದಲ್ಲಿ 24 ಗಂಟೆ ವಿದ್ಯುತ್​ ಸಂಪರ್ಕವಿದ್ದು, ನೀರು, ಚರಂಡಿ, ರಸ್ತೆ ವ್ಯವಸ್ಥೆಗಳೂ ಹಾಗೂ ಇತರ ಮೂಲ ಸೌಕರ್ಯಗಳಿಗೇನು ಕೊರತೆ ಇಲ್ಲ. 1 ರಿಂದ 7ನೇ ತರಗತಿಯ ವರೆಗೂ ಸರ್ಕಾರಿ ಶಾಲೆ ಇದ್ದು, 7ನೇ ತರಗತಿ ಮೇಲ್ಪಟ್ಟ ವಿದ್ಯಾರ್ಥಿಗಳು ಪ್ರೌಢಶಾಲೆಗೆ ಮುಳಬಾಗಿಲು ತಾಲೂಕಿನ ಮುಡಿಯನೂರು ಗ್ರಾಮಕ್ಕೆ ಹಾಗೂ ಕಾಲೇಜಿಗೆ ಶ್ರೀನಿವಾಸಪುರ, ಮುಳಬಾಗಿಲಿಗೆ ಹೋಗುತ್ತಾರೆ. ಗ್ರಾಮಕ್ಕೆ ಸರಿಯಾಗಿ ಬಸ್​ ವ್ಯವಸ್ಥೆ ಇಲ್ಲ ಎಂದು ಗ್ರಾಮಸ್ಥರಾದ ಗಿರೀಶ್​, ಚಲಪತಿ, ಪೂಜಾರಿ ಉತ್ತನೂರಪ್ಪ, ದೂರಿದ್ದು ತಕ್ಷಣ ಜನಪ್ರತಿನಿಧಿಗಳು ಮುತುವರ್ಜಿವಹಿಸಿ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಗ್ರಾಮಕ್ಕೆ ಬಸ್​ ವ್ಯವಸ್ಥೆ ಮಾಡಿಕೊಡುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ

ಲವಣದಿಂದ ಕೂಡಿದ ಭೂಮಿ

ಚೌಳು ಮಣ್ಣು ಸ್ವಲ್ಪ ಉಪ್ಪಿರುವ ಗುಣ, ಲವಣಾಂಶದಿಂದ ಕೂಡಿರುತ್ತಿತ್ತು. ಅಲ್ಲದೆ ಸೋಡಿಯಂ ಕ್ಲೋರೈಡ್​ ಅಥವಾ ಪೊಟ್ಯಾಷಿಯಂ ನೈಟ್ರೇಟ್​ ನಂತಹ ಲವಣಗಳಿಂದ ಸಮೃದ್ಧವಾಗಿರುವ ಭೂಮಿ ಇದಾಗಿತ್ತು. ಇದನ್ನು ಅರಿತ ಮಡಿವಾಳ ಸಮುದಾಯದವರು ಈ ಗ್ರಾಮದ ಬಳಿಯ ಕುಂಟೆಯ ಬಳಿ ಬಟ್ಟೆಗಳನ್ನು ಒಗೆಯುತ್ತಿದ್ದರು ಎನ್ನಲಾಗಿದೆ.

ಗ್ರಾಮವು ಶಿಲ್ಪ ಕಲಾ ವೃತ್ತಿಯಲ್ಲಿ ಪರಿಣಿತಿ ಹೊಂದಿದ್ದು, ರಾಜ್ಯ ಹೊರರಾಜ್ಯಗಳಿಂದಲೂ ಸಹ ನಮ್ಮ ಗ್ರಾಮಕ್ಕೆ ಬಂದು ಕಲ್ಲಿನ ವಿಗ್ರಹಗಳನ್ನು ಹಾಗೂ ಪಂಚಲೋಹ ವಿಗ್ರಹಗಳನ್ನು, ದೇವಸ್ಥಾನಗಳಲ್ಲಿನ ವಿಗ್ರಹಗಳಿಗೆ ಕವಚ ಮಾಡಿಸಿಕೊಂಡು ಹೋಗುತ್ತಾರೆ . ಈ ವೃತ್ತಿ ನಮಗೂ ಸಂತಸ ತಂದಿದೆ.

- ಮಂಜುನಾಥ ಆಚಾರಿ

ಶಿಲ್ಪಿ, ಉಪ್ಪಕುಂಟೆ

ನಮ್ಮದು ಮೂಲ ಶಿವರಾಪಟ್ಟಣ. 300 ವರ್ಷಗಳ ಹಿಂದೆ ವಲಸೆ ಬಂದಿದ್ದು, ಈ ಗ್ರಾಮಸ್ಥರು ನಮ್ಮನ್ನು ಶಿಲೆಗಳನ್ನು ಮಾಡಿಸಲು ಕರೆಸಿದ್ದರು. ಈ ಹಿನ್ನೆಲೆಯಲ್ಲಿ ನಾವು ಇಂದಿಗೂ ಸಹ ಶಿಲ್ಪಿ ವೃತ್ತಿಯನ್ನೇ ಮಾಡಿಕೊಂಡು ಬಂದಿದ್ದೇವೆೆ.

- ಶಂಕರ ಆಚಾರಿ

ಶಿಲ್ಪಿ, ಉಪ್ಪಕುಂಟೆ

ಗ್ರಾಮಕ್ಕೆ ಎಲ್ಲ ಸೌಲಭ್ಯಗಳಿದ್ದು, ಬಸ್​ ಸೌಲಭ್ಯ ಇರುವುದಿಲ್ಲ. ದಯವಿಟ್ಟು ಜನಪ್ರತಿನಿದಿಗಳು, ಅಧಿಕಾರಿಗಳು ಬಸ್​ ವ್ಯವಸ್ಥೆ ಕಲ್ಪಿಸಿ, ಮಕ್ಕಳ ವಿದ್ಯಾಭ್ಯಾಸ ಮತ್ತು ನಾಗರಿಕರ ಸಂಕಷ್ಟ ಬಗೆಹರಿಸಬೇಕಿದೆ.

- ಗಟ್ಟಮ್ಮ

ಉಪ್ಪಕುಂಟೆ ಗ್ರಾಮಸ್ಥೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net