ಹು-ಧಾ ಪಾಲಿಕೆ ಚುನಾವಣೆ: ಕರ್ತವ್ಯನಿರತ ಪೇದೆ ದುರಂತ ಸಾವು! ಬಿಕ್ಕಿಬಿಕ್ಕಿ ಅಳುತ್ತಲೇ ಶವ ತೆಗೆದ ಪೊಲೀಸರು

accident death
Published on

ಧಾರವಾಡ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಇಂದು (ಶುಕ್ರವಾರ) ಮತದಾನ ನಡೆದಿದ್ದು, ಈ ವೇಳೆ ಕರ್ತವ್ಯನಿರತ ಪೊಲೀಸ್ ಪೇದೆಯೊಬ್ಬರು ದುರಂತ ಅಂತ್ಯ ಕಂಡಿದ್ದಾರೆ.

ನಿಂಗಪ್ಪ ಭೂಷಣ್ಣವರ (28) ಮೃತ ದುರ್ದೈವಿ. ವಿದ್ಯಾಗಿರಿ ಪೊಲೀಸ್​ ಠಾಣೆಯಲ್ಲಿ ಪೇದೆಯಾಗಿದ್ದ ನಿಂಗಪ್ಪ ಭೂಷಣ್ಣವರ ಅವರು ನಗರದ ಯಾಲಕ್ಕಿ ಶೆಟ್ಟರ್ ಬಡಾವಣೆಯಲ್ಲಿ ಎಲೆಕ್ಸನ್​ ಡ್ಯೂಟಿಯಲ್ಲಿದ್ದ ಸಹೋದ್ಯೋಗಿ ಪೊಲೀಸರಿಗೆ ಊಟ ಕೊಡಲು ತೆರಳುತ್ತಿದ್ದರು. ಈ ವೇಳೆ ಹುಬ್ಬಳ್ಳಿ-ಧಾರವಾಡ ರಸ್ತೆಯಲ್ಲಿ ಜವರಾಯನಂತೆ ಬಂದ ಬೋರ್‌ವೆಲ್ ಲಾರಿ ನಿಂಗಪ್ಪರ ತಲೆ ಮೇಲೆ ಹರಿದಿದ್ದು, ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಓಡೋಡಿ ಬಂದ ಸಹೋದ್ಯೋಗಿ ಪೊಲೀಸರು ಬಿಕ್ಕಿಬಿಕ್ಕಿ ಅಳುತ್ತಲೇ ಲಾರಿ ಚಕ್ರದಡಿ ಸಿಲುಕಿದ್ದ ನಿಂಗಪ್ಪರ ಮೃತದೇಹ ಹೊರತೆಗೆಯುತ್ತಿದ್ದ ದೃಶ್ಯ ಮನಕಲಕುವಂತಿತ್ತು. ವಿದ್ಯಾಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net