

ಬೂದಿಕೋಟೆ: ಕ್ಷೇತ್ರದ ಹಾಲು ಉತ್ಪಾದಕರಿಗೆ ಹಾಗೂ ಹಾಲು ಡೇರಿಗಳನ್ನು ಅಭಿವೃದ್ಧಿಪಡಿಸಲು ಎಸ್.ಎನ್ ನಾರಾಯಣಸ್ವಾಮಿ ಅವರು ಕೋಮುಲ್ ಚುನಾವಣೆ ಗೆಲುವು ಸಾಧಿಸಿರುವುದು ಮುಂಬರುವ ಚುನಾವಣೆಗಳಿಗೆ ಸಹಕಾರಿಯಾಗುವುದರ ಜತೆಗೆ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಸಮಾಜ ಸೇವಕ ಎ.ಬಾಬು ಹೇಳಿದರು.
ಕೋಲಾರ ಹಾಲು ಒಕ್ಕೂಟದ ಚುನಾವಣೆಯಲ್ಲಿ ಶಾಸಕ ಎಸ್.ಎನ್ ನಾರಾಯಣಸ್ವಾಮಿ ಗೆಲುವು ಹಿನ್ನೆಲೆಯಲ್ಲಿ ಬೂದಿಕೋಟೆಯಲ್ಲಿ ಮುಖಂಡರು ಹಾಗೂ ಕಾರ್ಯಕರ್ತರು ಹಮ್ಮಿಕೊಂಡಿದ್ದ ವಿಜಯೋತ್ಸವದಲ್ಲಿ ಮಾತನಾಡಿ, ಈ ಒಂದು ದಾಪುಗಾಲಿನಿಂದ ಕ್ಷೇತ್ರದ ಎಲ್ಲರಿಗೂ ಒಳಿತಾಗಲಿದೆ. ಮುಂಬರುವ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗಳಿಗೂ ಸಹಕಾರಿಯಾಗುತ್ತದೆ ಎಂದರು.
ಗ್ರಾಪಂ ಅಧ್ಯಕ್ಷ ಬಿ.ಆರ್.ಮಂಜುನಾಥ್ ಮಾತನಾಡಿ, ಈಗಾಗಲೇ ಶಾಸಕರು ಹೆಚ್ಚಿನ ಅನುದಾನ ತಂದು ಎಲ್ಲ ಗ್ರಾಮಗಳಿಗೆ ಮೂಲ ಸೌಲಭ್ಯ ಕಲ್ಪಿಸಿದ್ದಾರೆ ಎಂದರು.
ವಿಎಸ್ಸೆಸ್ಸೆನ್ ಮಾಜಿ ಅಧ್ಯಕ್ಷ ಆರ್.ವಿಜಯ್ ಕುಮಾರ್ ಮಾತನಾಡಿ, ಹಾಲು ಒಕ್ಕೂಟದ ಚುನಾವಣೆಗೆ ಶಾಸಕರು ಸ್ಪರ್ಧಿಸಬಾರದೆಂದು ವಿರೋಧ ಪಕ್ಷದವರು ಅನೇಕ ಕುತಂತ್ರ ನಡೆಸಿದರೂ ಶಾಸಕರು ಕುಗ್ಗದೆ ಕ್ಷೇತ್ರದ ಹಾಲು ಉತ್ಪಾದಕರ ಅಭಿವೃದ್ಧಿಗಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ ಎಂದರು.