ಹಿರಿಯ ನಟ 'ಕಲಾತಪಸ್ವಿ' ರಾಜೇಶ್​ ಆರೋಗ್ಯ ಸ್ಥಿತಿ ಗಂಭೀರ

film actor rajesh
Published on

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ, 'ಕಲಾತಪಸ್ವಿ' ರಾಜೇಶ್​ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ.

ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ರಾಜೇಶ್​ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ. 84 ವರ್ಷದ ರಾಜೇಶ್​ ಅವರು ಕಿಡ್ನಿ ಸಮಸ್ಯೆ ಮತ್ತು ವಯೋಸಹಜ ಕಾಯಿಲೆಗಳಿಂದ ಬಳತ್ತಿದ್ದಾರೆ.

ರಾಜೇಶ್​ 1935ರ ಏಪ್ರಿಲ್ 15ರಂದು ಬೆಂಗಳೂರಿನಲ್ಲಿ ಜನಿಸಿದರು. ಇವರ ಮೊದಲ ಹೆಸರು ಮುನಿ ಚೌಡಪ್ಪ. ಚಿಕ್ಕವಯಸ್ಸಿನಲ್ಲೇ ನಟನೆಯಲ್ಲಿ ಆಸಕ್ತಿ ಬೆಳೆಸಿಕೊಂಡ ಮುನಿ ಚೌಡಪ್ಪ, ರಂಗಭೂಮಿ ಪ್ರವೇಶಿಸಿದರು. ತಂದೆ-ತಾಯಿಗೆ ಗೊತ್ತಿಲ್ಲದಂತೆ ಸುದರ್ಶನ ನಾಟಕ ಮಂಡಳಿ ಸೇರಿದ ಮುನಿ ಚೌಡಪ್ಪ ರಂಗಭೂಮಿಯಲ್ಲಿ 'ವಿದ್ಯಾಸಾಗರ್’ ಹೆಸರಿನಿಂದ ಗುರುತಿಸಿಕೊಂಡರು. ಬಳಿಕ ತಮ್ಮದೇ ಆದ 'ಶಕ್ತಿ ನಾಟಕ ಮಂಡಳಿ'ಯನ್ನ ವಿದ್ಯಾಸಾಗ ಅಂತಾ ಬದಲಾಯಿಸಿಕೊಂಡರು. 1964ರಲ್ಲಿ ನಿರ್ದೇಶಕ ಹುಣಸೂರು ಕೃಷ್ಣಮೂರ್ತಿ ನಿರ್ದೇಶನದ 'ವೀರ ಸಂಕಲ್ಪ' ಸಿನಿಮಾ ಮೂಲಕ ಪಾದಾರ್ಪಣೆ ಮಾಡಿದ ಅವರು ರಾಜೇಶ್ ಎಂದೇ ಗುರುತಿಸಿಕೊಂಡರು.

ಸೊಸೆ ತಂದ ಸೌಭಾಗ್ಯ, ಬಿಡುಗಡೆ, ಕ್ರಾಂತಿವೀರ, ವಿಷಕನ್ಯೆ, ದೇವರ ದುಡ್ಡು, ಕಲಿಯುಗ, ವಸಂತ ನಿಲಯ, ದೇವರ ಮನೆ, ತವರು ಮನೆ, ಭಲೇ ಭಾಸ್ಕರ, ನಮ್ಮ ಬದುಕು, ದೇವರ ಮಕ್ಕಳು, ಕಾಣಿಕೆ, ಎರಡು ಮುಖ, ಕಪ್ಪು ಬಿಳುಪು, ಸುಖ ಸಂಸಾರ, ಪೂರ್ಣಿಮಾ, ಪಿತಾಮಹ, ಶ್ರೀರಾಮಾಂಜನೇಯ ಯುದ್ದ, ಪ್ರತಿಧ್ವನಿ... ಹೀಗೆ 150ಕ್ಕೂ ಹೆಚ್ಚು ಸಿನಿಮಾಗಳಲ್ಲಿ ರಾಜೇಶ್​ ಅಭಿನಯಿಸಿದ್ದಾರೆ. ಕಲಾತಪಸ್ವಿ ಎಂದೇ ಖ್ಯಾತಿ ಪಡೆದಿದ್ದಾರೆ. ಇವರ ಮಗಳು-ಅಳಿಯ, ಮೊಮ್ಮಗಳೂ ಕೂಡ ಚಿತ್ರರಂಗದಲ್ಲಿ ಮಿಂಚಿದ್ದಾರೆ.

ಬಹುಭಾಷಾ ನಟ ಅರ್ಜುನ್ ಸರ್ಜಾ ಅವರ ಮಾವ ರಾಜೇಶ್. ನಟ ಶಿವರಾಜ್​ಕುಮಾರ್​ ಅಭಿನಯದ ರಥಸಪ್ತಮಿ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದ ಆಶಾರಾಣಿ ಅವರು ರಾಜೇಶ್​ರ ಮಗಳು. ಆಶಾರಾಣಿಯ ಪತಿ ಅರ್ಜುನ್​ ಸರ್ಜಾ. ಕಲಾತಪಸ್ವಿ ರಾಜೇಶ್​ರ ಆರೋಗ್ಯ ಚೇತರಿಕೆಗಾಗಿ ಅಭಿಮಾನಿಗಳು ಮತ್ತು ಕುಟುಂಬಸ್ಥರು ಪ್ರಾರ್ಥಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net