

ಎನ್.ಆರ್.ಪುರ: ಕಾರ್ಗಿಲ್ ಯುದ್ಧವಾಗಿದ್ದು ಅಟಲ್ ಬಿಹಾರಿ ವಾಜಪೇಯಿ ಪ್ರಧಾನಮಂತ್ರಿಯಾಗಿದ್ದ ಅವಧಿಯಲ್ಲಿ. ಕಾರ್ಗಿಲ್ ವಿಜಯೋತ್ಸವ ಬಿಜೆಪಿಗೆ ಲಾಭವಾಗುತ್ತದೆ ಎಂಬ ಕಾರಣಕ್ಕಾಗಿ ಕಾಂಗ್ರೆಸ್ ವಿಜಯೋತ್ಸವ ಆಚರಿಸಿಲ್ಲ ಎಂದು ಜಿಲ್ಲಾ ಬಿಜೆಪಿ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಶಶಿ ಆಲ್ದೂರ್ ಆರೋಪಿಸಿದರು.
ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಕಾರ್ಗಿಲ್ ವಿಜಯಜ್ಯೋತಿ ರಥಯಾತ್ರೆ ಆಗಮನದ ಅಂಗವಾಗಿ ಬಿಜೆಪಿ ಯುವ ಮೋರ್ಚಾ ಗುರುವಾರ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿ, ಕಾರ್ಗಿಲ್ ಯುದ್ಧ ನಮ್ಮ ದೇಶದ ಉಳಿವಿಗಾಗಿ, ರಕ್ಷಣೆಗಾಗಿ ಆಗಿದ್ದೇ ಹೊರತು ದುರುದ್ದೇಶಕ್ಕಲ್ಲ. ಆದರೆ ಕಾಂಗ್ರೆಸ್ ಇದೂವರೆಗೂ ಕಾರ್ಗಿಲ್ ವಿಜಯ ದಿನ ಆಚರಿಸದೆ ಇರುವುದು ದುರಂತ ಎಂದರು.
ಪಟ್ಟಣಕ್ಕೆ ಕಾರ್ಗಿಲ್ ವಿಜಯಜ್ಯೋತಿ ರಥಯಾತ್ರೆ ಆಗಮಿಸುತ್ತದೆ ಎಂದು ಅನ್ಯ ಕೋಮಿನ ಧಾರ್ಮಿಕ ಕೇಂದ್ರಗಳ ಬಳಿ ಪೊಲೀಸರನ್ನು ರಾಜ್ಯ ಸರ್ಕಾರ ನಿಯೋಜಿಸಿರುವುದು ಖಂಡನೀಯ. ವಿಜಯೋತ್ಸವ ದಿವಸ ದೇಶದ ಅತ್ಯಂತ ಸಂತಸದ ದಿನವಾಗಿದೆ. ಇಂಥ ದಿನವನ್ನು ಕೋಮುಗಳ ಮಧ್ಯೆ ವಿಷ ಬೀಜ ಬಿತ್ತುವ ಕೆಲಸವಾಗುತ್ತಿದೆ. ಇದು ದೇಶದಲ್ಲಿ ಆಗುತ್ತಿರುವ ಅತ್ಯಂತ ಕೀಳುಮಟ್ಟದ ಬೆಳವಣಿಗೆ ಆಗಿದೆ ಎಂದು ದೂರಿದರು.
ನಿವೃತ್ತ ಯೋಧ ಗಣೇಶ್ ಮಾತನಾಡಿ, ಕಾರ್ಗಿಲ್ ಯುದ್ಧದಲ್ಲಿ 400ಕ್ಕೂ ಅಧಿಕ ಭಾರತೀಯ ಯೋಧರು ವೀರ ಮರಣ ಹೊಂದಿದರು. ಪಾಕಿಸ್ತಾನದ 696 ಯೋಧರು ಸಾವನ್ನಪ್ಪಿದ್ದಾರೆ. ಅವರು ಆಕ್ರಮಿಸಿದ ಪ್ರದೇಶಗಳನ್ನು ನಮ್ಮ ದೇಶದ ಯೋಧರು ವಶ ಪಡಿಸಿಕೊಳ್ಳಬೇಕಾದರೆ 83 ದಿನ ಬೇಕಾಯಿತು ಎಂದು ತಿಳಿಸಿದರು.
ಬಿಜೆಪಿ ಮಂಡಲ ಅಧ್ಯಕ್ಷ ಅರುಣ್‌ಕುಮಾರ್ ಮಾತನಾಡಿ, ನಮ್ಮ ದೇಶದ ವಿಜಯೋತ್ಸವದ ದಿನವನ್ನು ರಥ ಯಾತ್ರೆಯಾಗಿ ಎಲ್ಲ ಸಮುದಾಯದ ಜನರೂ ಸೇರಿ ಆಚರಿಸುತ್ತಿದ್ದೇವೆ ಎಂದರು.
ಬಿ.ಎಚ್.ಕೈಮರದಿಂದ ಪಟ್ಟಣದ ಅಂಬೇಡ್ಕರ್ ವೃತ್ತದವರೆಗೆ ವಾಹನಗಳ ಮೆರವಣಿಗೆಯೊಂದಿಗೆ ಕಾರ್ಗಿಲ್ ವಿಜಯಜ್ಯೋತಿ ರಥವನ್ನು ಕರೆತರಲಾಯಿತು. ಕಾರ್ಗಿಲ್ ಯುದ್ಧದಲ್ಲಿ ಮರಣ ಹೊಂದಿದ ಯೋಧರಿಗೆ ಒಂದು ನಿಮಿಷ ಮೌನಾಚರಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಂತೋಷ್ ಕೋಟ್ಯಾನ್, ಉಪಾಧ್ಯಕ್ಷ ಶ್ರೇಯಸ್, ತಾಲೂಕು ಯುವ ಮೋರ್ಚಾ ಅಧ್ಯಕ್ಷ ಪ್ರೀತಮ್ ಗೌಡ, ಕಾರ್ಯದರ್ಶಿ ಮೂಡಬಾಗಿಲು ಸಚಿನ್, ಮುಖಂಡರಾದ ಅಶ್ವನ್, ಕೆ.ಪಿ.ಸುರೇಶ್‌ಕುಮಾರ್, ಬಿ.ಎಸ್.ಆಶೀಶ್‌ಕುಮಾರ್, ಕೆಸವೆ ಮಂಜುನಾಥ್, ಎನ್.ಎಂ.ಕಾಂತರಾಜ್, ಎಂ.ಎನ್.ನಾಗೇಶ್, ಎಸ್.ಎಸ್.ಸಂತೋಷ್‌ಕುಮಾರ್, ಎ.ಬಿ.ಮಂಜುನಾಥ್, ಸುರಭಿ ರಾಜೇಂದ್ರ, ಮಂಜುನಾಥ್ ಲಾಡ್, ಟಿ.ಆರ್.ಜಯರಾಂ, ವೈ.ಎಸ್.ರವಿ, ರಶ್ಮಿ ದಯಾನಂದ್, ಸವಿತಾ, ಎಂ.ಟಿ.ಪ್ರವೀಣ್ ಇತರರಿದ್ದರು.