

ಹುಬ್ಬಳ್ಳಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ಅತ್ಯಂತ ನಿರಾಶಾದಾಯಕವಾಗಿದೆ. ಕರ್ನಾಟಕ ಅದರಲ್ಲೂ ಉತ್ತರ ಕರ್ನಾಟಕವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಯುವಕರಿಗೆ ಉದ್ಯೋಗ ಸೃಷ್ಟಿಸುವಲ್ಲಿ ವಿಫಲವಾಗಿದೆ ಎಂದು ಕಾಂಗ್ರೆಸ್ ಯುವ ನಾಯಕ ರಜತ್ ಉಳ್ಳಾಗಡ್ಡಿಮಠ ಆರೋಪಿಸಿದ್ದಾರೆ.
ನಿರ್ಮಲಾ ಅವರು ನಮ್ಮ ರಾಜ್ಯವನ್ನು ಪ್ರತಿನಿಧಿಸಿದ್ದರೂ ಕರ್ನಾಟಕಕ್ಕೆ ನಿರಂತರವಾಗಿ ಅನ್ಯಾಯ ಮಾಡುತ್ತಲೇ ಬರುತ್ತಿದ್ದಾರೆ. ಈ ಬಾರಿಯೂ ಬಜೆಟ್‌ನಿಂದ ರಾಜ್ಯಕ್ಕೆ ಮೂರು ಕಾಸಿನ ಪ್ರಯೋಜನವಿಲ್ಲ ಎಂದು ಲೇವಡಿ ಮಾಡಿದ್ದಾರೆ.
ರಾಜ್ಯವು ಅಧಿಕ ಸಂಖ್ಯೆಯಲ್ಲಿ ಬಿಜೆಪಿ ಸಂಸದರನ್ನು ಗೆಲ್ಲಿಸಿ ಕೊಟ್ಟಿದೆ. ಆದರೆ, ಯಾವ ಸಂಸದರಿಗೂ ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಪ್ರಶ್ನಿಸುವ ಧೈರ್ಯವಿಲ್ಲ. ನಮ್ಮ ಧಾರವಾಡ ಸಂಸದರು ಹಾಗೂ ಕೇಂದ್ರ ಸಚಿವರೂ ಆದ ಪ್ರಲ್ಹಾದ ಜೋಶಿ ಅವರು ಬಜೆಟ್ ಬಗ್ಗೆ ನಿರ್ಲಿಪ್ತರಾಗಿದ್ದಾರೆ ಎಂದಿದ್ದಾರೆ.
ಉದ್ಯೋಗ ಸೃಷ್ಟಿ, ರೈಲ್ವೆ ಯೋಜನೆ ಇತರ ಅಭಿವೃದ್ಧಿ ಕಾರ್ಯಗಳನ್ನು ಉತ್ತರ ಕರ್ನಾಟಕಕ್ಕೆ ತರುವಲ್ಲಿ ಪ್ರಲ್ಹಾದ ಜೋಶಿ ಅವರು ಎಡವಿದ್ದಾರೆ. ಕೇಂದ್ರದಲ್ಲಿ ಪ್ರಭಾವಿ ಸಚಿವರಾಗಿದ್ದರೂ ಅವರ ಮಾತಿಗೆ ಕವಡೆ ಕಾಸಿನ ಕಿಮ್ಮಿತ್ತಿಲ್ಲ ಎನ್ನುವುದು ಬಜೆಟ್‌ನಿಂದ ರುಜುವಾತಾಗಿದೆ ಎಂದು ಪ್ರಕಟಣೆಯಲ್ಲಿ ದೂರಿದ್ದಾರೆ.