ಅಧಿಕಾರಿಗಳು-ಸದಸ್ಯರ ನಡುವೇ ಮಾತಿನ ಚಕಮಕಿ

A verbal spat between officers and members
ಬಾಗಲಕೋಟೆ ನಗರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯ ಸ್ಮಿತಾ ಪವಾರ ಆಕ್ರೋಶ ವ್ಯಕ್ತಪಡಿಸಿದ ಪರಿ.
Published on

ಬಾಗಲಕೋಟೆ: ನಗರಸಭೆ ಸದಸ್ಯರಿಗೆ ಆಯುಕ್ತರಾದಿಯಾಗಿ ಯಾವ ಅಧಿಕಾರಿಗಳೂ ಗೌರವ ನೀಡುವುದಿಲ್ಲ. ಅದರಲ್ಲೂ ಹಳೇ ಬಾಗಲಕೋಟೆ ನಗರದ ಅಭಿವೃದ್ಧಿ ಕೆಲಸಗಳಿಗೆ ಅನುದಾನ ನೀಡುವುದಿಲ್ಲ. 35 ವಾರ್ಡ್‌ಗಳು ಇದ್ದರು ಕೇವಲ ನಾಲ್ಕು ವಾರ್ಡ್‌ಗಳಿಗೆ ಮಾತ್ರ ಪ್ರಾಧಾನ್ಯತೆ ನೀಡಲಾಗುತ್ತಿದೆ...!

ನಗರದ ನಗರಸಭೆ ಸಭಾ ಭವಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಾಮಾನ್ಯ ಸಭೆಯಲ್ಲಿ ನಗರಸಭೆ ಬಿಜೆಪಿ ಸದಸ್ಯರು ಆಯುಕ್ತ ಆರ್. ವಾಸಣ್ಣ ವಿರುದ್ಧ ಆರೋಪಗಳ ಸುರಿಮಳೆಗೈದರು.

ಆರಂಭದಲ್ಲಿ ಬಿಜೆಪಿ ಸದಸ್ಯ ಸ್ಮಿತಾ ಪವಾರ ಮಾತನಾಡಿ, ವಾರ್ಡ್‌ನ ಸಮಸ್ಯೆ ಪರಿಹರಿಸಲು ಆಯುಕ್ತರ ಕಚೇರಿಗೆ ಹೋದರೆ ಸರಿಯಾಗಿ ಸ್ಪಂದಿಸುವುದಿಲ್ಲ. ಸಾರ್ವಜನಿಕರ ಎದುರು ಅಪಮಾನ ಮಾಡಿಮಾತನಾಡುತ್ತಾರೆ. ನಾವೇನು ನಮ್ಮ ವೈಯಕ್ತಿಕ ಕೆಲಸಕ್ಕೆ ಹೋಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಬಿಜೆಪಿ ಬಹುತೇಕ ಸದಸ್ಯರು ಧ್ವನಿಗೂಡಿಸಿದರು. ಆಯುಕ್ತರ ನಡೆ ಬಗ್ಗೆ ಅಸಮಾಧಾನ ಹೊರ ಹಾಕಿದರು.

ಮಧ್ಯ ಪ್ರವೇಶ ಮಾಡಿದ ನಗರಸಭೆ ಸಭಾಪತಿ ಯಲ್ಲಪ್ಪ ನಾರಾಯಣಿ ಬಿಜೆಪಿ ಸದಸ್ಯರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರೂ ಸದಸ್ಯೆ ಸ್ಮಿತಾ ಪವಾರ ‘ನಿಮ್ಮಿಂದ ಏನೂ ಆಗುವುದಿಲ್ಲ. ಸುಮ್ಮನೇ ಕೂಡಿ’ ಎಂದು ಆಕ್ರೋಶ ಹೊರಹಾಕಿದರು.

ಇನ್ನೂ ಪಕ್ಕದಲ್ಲೇ ಇದ್ದ ನಗರಸಭೆ ಅಧ್ಯಕ್ಷೆ, ಉಪಾಧ್ಯಕ್ಷೆಯೂ ಕೂಡ ಸದಸ್ಯರಿಗೆ ಈ ರೀತಿ ಮಾಡುವುದು ತಪ್ಪು ಎಂದು ಯಾವುದೇ ಒಂದು ಮಾತು ಕೂಡ ಪ್ರಸ್ತಾಪಿಸಲಿಲ್ಲ. ಸದಸ್ಯರಿಗೆ ಗೌರವ ಕೊಡುವ ಕೆಲಸ ಮಾಡಬೇಕು ಎಂದು ಅಧ್ಯಕ್ಷೆ ಹೇಳಿ ಸುಮ್ಮನಾದರು.

ಬಿಜೆಪಿ ಸದಸ್ಯ ಶ್ರೀನಾಥ ಸಜ್ಜನ್ ಮಾತನಾಡಿ, ನಗರದಲ್ಲಿ 35 ವಾರ್ಡ್‌ಗಳು ಇದ್ದರೂ ಕೂಡಾ ನಾಲ್ಕು ವಾರ್ಡ್‌ಗಳಿಗೆ ಮಾತ್ರ ಅನುದಾನ ಹಂಚಿಕೆ ಮಾಡಲಾಗುತ್ತಿದೆ. ಲಕ್ಷಾಂತರ ಅನುದಾನ ಬಂದರು ಕೆಲವೇ ವಾರ್ಡ್‌ಗಳಿಗೆ ಮಾತ್ರ ಸೀಮಿತವಾಗಿದೆ. ಅವುಗಳಿಗೆ ಮಾತ್ರ ಟೆಂಡರ್ ಕರೆಯುವುದು ನೋಡಿದರೆ ಅನುಮಾನ ಮೂಡುತ್ತಿದೆ. ಯಾವ ಉದ್ದೇಶ ಇಟ್ಟುಕೊಂಡು ಕೆಲಸ ಮಾಡುತ್ತಿದ್ದೀರಿ? ಎಂದು ಆಯುಕ್ತರ ವಿರುದ್ಧ ದೂರಿದರು.

ಮತ್ತೆ ಸದಸ್ಯರ ಪ್ರಶ್ನೆಗೆ ಉತ್ತರ ನೀಡಿದ ಆಯುಕ್ತ ಆರ್. ವಾಸಣ್ಣ, ಶಾಸಕರ ನಿರ್ದೇಶನದ ಮೇರೆಗೆ ಎಲ್ಲಿ ಯುಜಿಡಿ, ಗಟಾರು, ರಸ್ತೆ ಸಮಸ್ಯೆ ಇದೆ ಅದನ್ನು ಗಮನಿಸಿ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ ಎಂದು ಹೇಳುತ್ತಿದ್ದಂತೆ ಮತ್ತಷ್ಟು ಕುಪಿತಗೊಂಡ ಬಿಜೆಪಿ ಸದಸ್ಯರು ಉಳಿದ ವಾರ್ಡಿನಲ್ಲಿ ಯಾವ ಸಮಸ್ಯೆ ಇಲ್ಲವೇ? ಎಂದು ವಾಗ್ವಾದ ನಡೆಸಿದರು.

ಬಿಜೆಪಿ ಸದಸ್ಯೆ ಶಶಿಕಲಾ ಮಜ್ಜಗಿ, ಕಳೆದ ಆರು ವರ್ಷಗಳಿಂದ ನಮ್ಮ ವಾರ್ಡಿಗೆ ಅಂಗನವಾಡಿ ಕೇಂದ್ರ ಕೊಡಿ ಎಂದು ಕೇಳಿಕೊಂಡರೂ ನಮ್ಮ ಅವಧಿ ಪೂರ್ಣಗೊಳ್ಳುತ್ತಾ ಬಂದರೂ ಜಾರಿಗೊಂಡಿಲ್ಲ. ಮಕ್ಕಳು ಎಲ್ಲಿ ಓದಬೇಕು? ಯಾಕೆ ಕೊಡುತ್ತಿಲ್ಲ? ಎಂದು ಅಧಿಕಾರಿಗಳ ವಿರುದ್ಧ ಹರಿಹಾಯ್ದರು.

ನಗರ ಆಶ್ರಯ ಯೋಜನೆಯಡಿ ಈ ಹಿಂದೆ ಮನೆಗಳನ್ನು ಪಡೆದ ಲಾನುಭವಿಗಳು ಮೃತರಾಗಿದ್ದು ಅವರ ನೇರ ವಾರಸುದಾರ ಹೆಸರಿಗೆ ಬದಲಾವಣೆ ಮಾಡಲು ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸುವುದು. ಕರ್ನಾಟಕ ಪುರಸಭೆ ಅಧಿನಿಯಮ ಕಾಯ್ದೆ -1964ರ ಕಲಂ 256 ರ ಪ್ರಕಾರ ವ್ಯಾಪಾರ ಪರವಾನಗಿ ಶುಲ್ಕ ನಿಗದಿ ಪಡಿಸುವುದು. ಅಮೃತ ಯೋಜನೆಯಡಿ ನಿರ್ವಹಿಸಿರುವ ನೀರು ಸರಬರಾಜು ಜೋಡಣೆಗಳಿಗ ನೀರಿನ ದರಗಳನ್ನು ನಿಗದಿ ಪಡಿಸುವುದು. ಅಮೃತ ಯೋಜನೆಯ ಮೂಲ ಅನುದಾನದಡಿ ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ನಿರ್ವಹಿಸಿರುವ ನೀರು ಸರಬರಾಜು ಕಾಮಗಾರಿಯ ನಿರ್ವಹಣೆಯನ್ನು 5 ವರ್ಷದ ಅವಧಿಗೆ ಒಡಂಬಡಿಕೆ ಮಾಡಿಕೊಳ್ಳುವುದು ಸೇರಿದಂತೆ ಇನ್ನಿತರ ವಿಷಯಗಳನ್ನು ಸಭೆಯಲ್ಲಿ ಚರ್ಚಿಸಿ ಅನುಮೋದನೆ ಪಡೆದುಕೊಳ್ಳಲಾಯಿತು.

ನಗರಸಭೆ ಅಧ್ಯಕ್ಷೆ ಸವಿತಾ ಲೆಂಕೆನ್ನವರ, ಉಪಾಧ್ಯಕ್ಷ ಶೋಭಾ ರಾವ, ಸಭಾಪತಿ ಯಲ್ಲಪ್ಪ ನಾರಾಯಣಿ, ಸದಸ್ಯರಾದ ವಿ.ವಿ. ಶಿರಗಣ್ಣವರ, ಸ್ಮಿತಾ ಕಲಬುರ್ಗಿ, ಸಾಗರ ಬಂಡಿ, ಬಸವರಾಜ ಅವರಾದಿ, ಹಾಜಿಸಾಬ ದಂಡಿ, ಚನ್ನವೀರ ಅಂಗಡಿ ಇತರರು ಇದ್ದರು.

ಅಧ್ಯಕ್ಷ, ಉಪಾಧ್ಯಕ್ಷ ನೀರವ ಮೌನ

ನಗರಸಭೆ ಸಾಮಾನ್ಯ ಸಭೆಯಲ್ಲಿ ನಗರಸಭೆಯಲ್ಲಿ ಆಡಳಿತದಲ್ಲಿ ಹಿಡಿತ ತಪ್ಪಿರುವುದು ಗೋಚರವಾಯಿತು. ನಗರಸಭೆ ಅಧ್ಯಕ್ಷೆ ಸವಿತಾ ಲೆಂಕೆನ್ನವರ, ಉಪಾಧ್ಯಕ್ಷೆ ಶೋಭಾ ರಾವ್ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ, ಅವರ ವಾರ್ಡ್‌ನ ಸಮಸ್ಯೆ ಪರಿಹರಿಸುವಲ್ಲಿ ವಿಫಲವಾಗಿರುವುದು ಕಂಡಿತು. ಸಾಮಾನ್ಯ ಸಭೆಯಲ್ಲಿ ಗದ್ದಲ, ಗಲಾಟೆ ನಡೆದರೂ ಸಹ ನೀರವ ಮೌನ ವಹಿಸಿದ್ದು ಬಿಜೆಪಿ ಸದಸ್ಯರ ಆಕ್ರೋಶಕ್ಕೆ ಕಾರಣವಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net