

ಚಾಮರಾಜನಗರ: ದ್ವಾದಶ ಜ್ಯೋತಿರ್ಲಿಂಗಗಳ ದರ್ಶನ ಮಾಡುವುದರಿಂದ ಮೌಲ್ಯಯುತ ಜೀವನ ಸಾಧ್ಯ ಎಂದು ಮಾಜಿ ಶಾಸಕಿ ಪರಿಮಳಾ ನಾಗಪ್ಪ ತಿಳಿದರು.
ಕೊಳ್ಳೇಗಾಲ ತಾಲೂಕಿನ ರಾಮಾಪುರ ಗ್ರಾಮದಲ್ಲಿ ಆಯೋಜಿಸಿದ್ದ ಗ್ರಾಮ ದೇವತೆ ಮಾರಮ್ಮನವರ ಜಾತ್ರಾ ಮಹೋತ್ಸವದ ಅಂಗವಾಗಿ ಅಂತಾರಾಷ್ಟ್ರೀಯ ಆಧ್ಯಾತ್ಮಿಕ ಸಂಸ್ಥೆ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ವತಿಯಿಂದ ಇತ್ತೀಚೆಗೆ ಆಯೋಜಿಸಿರುವ ದ್ವಾದಶ ಜ್ಯೋತಿರ್ಲಿಂಗಗಳ ಪುಣ್ಯ ದರ್ಶನ, ಚೈತನ್ಯ ದೇವಿಯರ ಪುಣ್ಯ ದರ್ಶನ ಹಾಗೂ ಉದ್ಭವಲಿಂಗ ದರ್ಶನದ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದರು.
ಈಶ್ವರೀಯ ವಿಶ್ವ ವಿದ್ಯಾಲಯದವರು ಪರಮಾತ್ಮನ ಯತಾರ್ಥ ಪರಿಚಯದ ಬಗ್ಗೆ ದ್ವಾದಶ ಜ್ಯೋತಿರ್ಲಿಂಗಗಳ ಪುಣ್ಯ ದರ್ಶನದ ಮೂಲಕ ಅರಿವು ಮೂಡಿಸುತ್ತಿದ್ದಾರೆ. ಭಾರತದ ಮೂಲೆ ಮೂಲೆಯಲ್ಲಿರುವ ದ್ವಾದಶ ಜ್ಯೋತಿರ್ಲಿಂಗ ಮಾದರಿಯನ್ನು ಒಂದೇ ವೇದಿಕೆಯಲ್ಲಿ ಗ್ರಾಮೀಣ ಜನತೆಗೆ ಹತ್ತಿರದಿಂದ ಪುಣ್ಯ ದರ್ಶನ ಮಾಡಿಸಿದ್ದಾರೆ. ಈ ಮೂಲಕ ಅವರಲ್ಲಿ ಮಾನವೀಯ ಮೌಲ್ಯಗಳ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಮೆಚ್ಚಿಗೆ ವ್ಯಕ್ತಪಡಿಸಿದರು.
ಸ್ವಾಮಿ ವಿವೇಕಾನಂದ ಸದ್ಭಾವನಾ ರಾಜ್ಯ ಪ್ರಶಸ್ತಿ ಪುರಸ್ಕೃತೆ ರಾಜಯೋಗಿನಿ ಬ್ರಹ್ಮಾಕುಮಾರಿ ದಾನೇಶ್ವರೀಜೀ ಮಾತನಾಡಿ, ಮಹಾತ್ಮ ಗಾಂಧಿ ಅವರು ಕನಸು ಕಂಡಿದ್ದ ರಾಮರಾಜ್ಯವನ್ನು ನಾವು ಅಧ್ಯಾತ್ಮ ಮಾರ್ಗದಿಂದ ನಿರ್ಮಾಣ ಮಾಡಬಹುದಾಗಿದೆ. ಈ ಮೂಲಕ ಜನರಲ್ಲಿ ಅರಿವು ಮೂಡಿಸುವ ಕಾರ್ಯ ಮಾಡಲಾಗುತ್ತಿದೆ ಎಂದರು.
ಈ ವೇಳೆ ಜಿಲ್ಲಾ ಸಂಚಾಲಕಿ ರಾಜ ಯೋಗಿನಿ ಬ್ರಹ್ಮಾಕುಮಾರಿ ಪ್ರಭಾಮಣೀಜೀ, ಓಂ ಶಾಂತಿ ಬಿ.ಕೆ.ಆರಾಧ್ಯ, ಬಿಂದು, ಶಾಂಭವಿ, ಪುಷ್ಪಾ, ಸಂತೋಷ, ಶ್ರೀನಿವಾಸ, ಶಂಕರ್, ಗಿರೀಶ್, ನಾಗರಾಜು ಇತರರು ಇದ್ದರು.