ಸಾಮಾನ್ಯ ಜನರ ಹಿತ ಕಾಪಾಡಿದ ಧೀಮಂತ ನಾಯಕ

20sor1
ಸೊರಬದಲ್ಲಿ ದೇವರಾಜು ಅರಸು ಜಯಂತ್ಯುತ್ಸವಕ್ಕೆ ಎಂ.ಡಿ.ಉಮೇಶ್ ಚಾಲನೆ ನೀಡಿದರು. ಡಾ. ಉಮೇಶ್ ಭದ್ರಾಪುರ, ಡಾ. ಪ್ರದೀಪ್ ಕುಮಾರ್, ರೇವಣಪ್ಪ, ಮತ್ಯುಂಜಯಗೌಡ ಇತರರಿದ್ದರು.
Published on

ಸೊರಬ: ಹಿಂದುಳಿದ ಸಮುದಾಯಗಳಿಗೆ ಮೀಸಲಾತಿ ದಕ್ಕಲು ಡಿ.ದೇವರಾಜ ಅರಸು ಅವರ ಇಚ್ಛಾಶಕ್ತಿ ಕಾರಣ ಎಂದು ಉಪನ್ಯಾಸಕ ಡಾ. ಉಮೇಶ್ ಭದ್ರಾಪುರ ಹೇಳಿದರು.

ಭಾನುವಾರ ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಡಿ. ದೇವರಾಜ ಅರಸು ಜಯಂತ್ಯುತ್ಸವದಲ್ಲಿ ಮಾತನಾಡಿ, 70ರ ದಶಕದಲ್ಲಿ ಆರ್ಥಿಕವಾಗಿ, ಬೌದ್ಧಿಕವಾಗಿ ಉತ್ತುಂಗದಲ್ಲಿದ್ದ ಎರಡು ಪ್ರಬಲ ಸಮುದಾಯಗಳನ್ನು ಎದುರಿಸಿ ಸಾಮಾನ್ಯ ಜನರ ಹಿತ ಕಾಪಾಡಲು ಕಾನೂನು ರೂಪಿಸುವಲ್ಲಿ ಇಚ್ಛಾಶಕ್ತಿ ತೋರಿದವರು ಅರಸು. ಮೈಸೂರು ರಾಜ್ಯಕ್ಕೆ ಬದಲಾಗಿ ಅಖಂಡತೆ ಸಾರುವ ಕರ್ನಾಟಕ ಎಂದು ನಾಮಕರಣ ಮಾಡಿದ ಶ್ರೇಯ ಅವರಿಗೆ ಸಲ್ಲುತ್ತದೆ ಎಂದರು.
ಹಿಂದುಳಿದ ವರ್ಗದ ಜನಪ್ರತಿನಿಧಿಗಳಿಗೆ ಸಂಸತ್ ಹಾಗೂ ವಿಧಾನಸಭೆಯಲ್ಲಿ ರಾಜಕೀಯ ಮೀಸಲಾತಿ ಪಡೆಯಲು ಒಗ್ಗಟ್ಟಾಗಿ ಹೋರಾಟ ಮಾಡಬೇಕಿದೆ ಎಂದು ಸಮಾಜ ಚಿಂತಕ ರಾಜಪ್ಪ ಮಾಸ್ತರ್ ಹೇಳಿದರು. ಪುರಸಭೆ ಮಾಜಿ ಅಧ್ಯಕ್ಷ ಎಂ.ಡಿ.ಉಮೇಶ್ ಕಾರ್ಯಕ್ರಮ ಉದ್ಘಾಟಿಸಿದರು. ತಹಸೀಲ್ದಾರ್ ಹುಸೇನ್ ಸರಾವಕಾಸ್ ಅಧ್ಯಕ್ಷತೆ ವಹಿಸಿದ್ದರು. ತಾಲೂಕಿನ ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಗಾಗಿ ದೇವರಾಜ ಅರಸು ಅವರ ಬಗ್ಗೆ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಅತಿ ಹೆಚ್ಚು ಅಂಕ ಪಡೆದ ಹಾಸ್ಟೆಲ್ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಪ್ರಭಾರ ಕಾರ್ಯ ನಿರ್ವಾಹಣಾಧಿಕಾರಿ ಡಾ. ಪ್ರದೀಪ್ ಕುಮಾರ್, ಸಮಾಜ ಕಲ್ಯಾಣಾಧಿಕಾರಿ ರೇವಣಪ್ಪ, ಶರಣ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಮತ್ಯುಂಜಯಗೌಡ, ಕೆ.ಮಂಜುನಾಥ್ ಹಳೇ ಸೊರಬ, ಪಾಣಿರಾಜಪ್ಪ, ಶಂಕರಗುರು, ಪ್ರಶಾಂತ್, ಕೃಷ್ಣಪ್ಪ, ಶೇಖರ್, ಫಕೀರಪ್ಪ, ವಿನೋದ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net