ಕುಲಕರ್ಣಿ ಹತ್ಯೆ ಪ್ರಕರಣಕ್ಕೆ ತಿರುವು

Crime Logo
Published on

ಮನೆ ನಿರ್ಮಾಣ ವಿಷಯಕ್ಕೆ ನೆರೆ ಮನೆ ಸದಸ್ಯರಿಂದ ಕೊಲೆ

ದೂರು ನೀಡಿದ ನಿವೃತ್ತ ಐಬಿ ಕುಟುಂಬ ಸದಸ್ಯರು

ಮೈಸೂರು: ನಿವೃತ್ತ ಐಬಿ (ಇಂಟಲಿಜೆನ್ಸ್ ಬ್ಯೂರೋ) ಅಧಿಕಾರಿ ಆರ್.ಎನ್.ಕುಲಕರ್ಣಿ ಅವರ ಮೇಲೆ ಕಾರು ಹರಿಸಿ ಹತ್ಯೆ ನಡೆಸಿರುವ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಮನೆ ನಿರ್ಮಾಣದ ವಿಚಾರಕ್ಕೆ ಆರ್.ಎನ್. ಕುಲಕರ್ಣಿ ಅವರನ್ನು ನೆರೆ ಮನೆಯವರು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ಕುಟುಂಬದ ಸದಸ್ಯರು ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಶಾರದಾದೇವಿನಗರದ ನಿವಾಸಿಯಾಗಿದ್ದ ಕುಲಕರ್ಣಿ ಅವರು ಶುಕ್ರವಾರ ಸಂಜೆ ಮಾನಸಗಂಗೋತ್ರಿಯಲ್ಲಿ ಎಂದಿನಂತೆ ವಾಯುವಿಹಾರಕ್ಕೆ ತೆರಳಿದ್ದರು. ಆ ಸಂದರ್ಭದಲ್ಲಿ ಅವರಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದಿತ್ತು. ಇದೊಂದು ಅಪಘಾತವೆಂದು ತಿಳಿದು ಪ್ರಾರಂಭದಲ್ಲಿ ಪೊಲೀಸರು ಅಪಘಾತ ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ ಇದೀಗ ಆರ್.ಎನ್. ಕುಲಕರ್ಣಿ ಅವರನ್ನು ನೆರೆ ಮನೆಯ ನಿವಾಸಿ ಮಾದಪ್ಪ ಮತ್ತು ಮಕ್ಕಳು ಕೊಲೆ ಮಾಡಿದ್ದಾರೆಂದು ಆರೋಪಿಸಿ, ಕುಲಕರ್ಣಿ ಅವರ ಅಳಿಯ ಸಂಜಯ ಅಂಗಡಿ ದೂರು ನೀಡಿದ್ದು, ಜಯಲಕ್ಷ್ಮೀಪುರಂ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಈ ನಡುವೆ, ಮನೆಯ ವಿಚಾರವಾಗಿ ಕಾನೂನು ಹೋರಾಟ ಆರಂಭಿಸಿದ್ದಾಗಿನಿಂದಲೂ ಮಾದಪ್ಪ ಮತ್ತವರ ಮಕ್ಕಳು ಹಾಗೂ ಸಹಚರರು ನನ್ನನ್ನು ಹತ್ಯೆ ಮಾಡಲು ಸಂಚು ಮಾಡುತ್ತಿದ್ದಾರೆ ಎಂದು ಕುಲಕರ್ಣಿ ಅವರು ಅಮೆರಿಕದಲ್ಲಿದ್ದ ತಮ್ಮ ಮಗಳು ಮತ್ತು ಅಳಿಯನ ಜತೆ ಹೇಳಿಕೊಂಡಿದ್ದರು. ಮಗಳು ಮತ್ತು ಅಳಿಯನ ಸಲಹೆ ಮೇರೆಗೆ ಮಾದಪ್ಪ ಈ ಕುರಿತು ಪೊಲೀಸ್ ಠಾಣೆ, ನಗರ ಪೊಲೀಸ್ ಆಯುಕ್ತರು, ಪ್ರಧಾನಮಂತ್ರಿ ಕಚೇರಿಗೆ ಮಾದಪ್ಪ ಮತ್ತವರ ಮಕ್ಕಳು ಬಳಸುವ ವಾಹನಗಳ ನಂಬರ್ ಸಮೇತ ದೂರು ನೀಡಿದ್ದರು ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ.
ಪ್ರಕರಣದ ಹಿನ್ನೆಲೆಯಲ್ಲಿ ಮೂರು ವಿಶೇಷ ತಂಡಗಳನ್ನು ರಚಿಸಲಾಗಿದೆ. ಕಾರು ಚಾಲಕನ ಪತ್ತೆಗಾಗಿ ಶೋಧ ಕಾರ್ಯ ನಡೆಸುತ್ತಿರುವ ಪೊಲೀಸರು, ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಅಂತ್ಯಕ್ರಿಯೆ: ಕುಲಕರ್ಣಿ ಅವರ ಅಂತ್ಯಕ್ರಿಯೆ ಸೋಮವಾರ ಬೆಳಗ್ಗೆ ಚಾಮುಂಡಿಬೆಟ್ಟ ತಪ್ಪಲಿನ ಹರಿಶ್ಚಂದ್ರಘಾಟ್ ಚಿತಾಗಾರದಲ್ಲಿ ನಡೆಯಿತು. ಇದಕ್ಕೂ ಮುನ್ನ ಖಾಸಗಿ ಆಸ್ಪತ್ರೆಯಿಂದ ಶವವನ್ನು ಮನೆಗೆ ತಂದು, ಬೆಳಗ್ಗೆ 9.30ರವರೆಗೂ ಅಂತಿಮ ದರ್ಶನಕ್ಕೆ ಇಡಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net