

ತುಮಕೂರು: ಕರೊನಾ ಸೃಷ್ಟಿಸುತ್ತಿರುವ ಅವಾಂತರ ಅಷ್ಟಿಷ್ಟಲ್ಲ. ಕೋವಿಡ್ ಸೋಂಕಿತರ ಸಂಖ್ಯೆ ಉಲ್ಬಣಗೊಂಡಂತೆ ಸಾವು-ನೋವಿನ ಪ್ರಮಾಣ ಹೆಚ್ಚುತ್ತಲೇ ಇದೆ. ಕರೊನಾ ಸೋಂಕು ತಗುಲಿದೆ ಎಂಬ ಸುದ್ದಿ ಕೇಳಿಯೇ ಆಘಾತಕ್ಕೊಳಗಾಗುವ ಜನರ ನಡುವೆ ಕೆಲವು ಆತ್ಮಹತ್ಯೆಯ ಹಾದಿ ಹಿಡಿಯುತ್ತಿರುವುದು ವಿಪರ್ಯಾಸ. ಆದರೆ ಇಲ್ಲೊಬ್ಬ ಬಾಲಕಿ ತನ್ನ ದೊಡ್ಡಮ್ಮ ಕರೊನಾಗೆ ಬಲಿಯಾದ ಸುದ್ದಿ ಕೇಳುತ್ತಿದ್ದಂತೆ ಪ್ರಾಣಬಿಟ್ಟ ಘಟನೆ ಜಿಲ್ಲೆಯಲ್ಲಿ ಸಂಭವಿಸಿದೆ.
ಮಂಗಳವಾರ ರಾತ್ರಿ ಮಲ್ಲಿಕಾ (45) ಎಂಬುವರು ಕರೊನಾ ಸೋಂಕಿನಿಂದ ಮೃತಪಟ್ಟಿದ್ದರು. ಬುಧವಾರ ಬೆಳಗ್ಗೆ ಅಂತ್ಯ ಸಂಸ್ಕಾರ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿತ್ತು. ಇದನ್ನು ತಿಳಿದ ಮಲ್ಲಿಕಾ ಅವರ ಮೈದುನನ ಮಗಳು ಜಾಗೃತಿ(19) ತೀವ್ರ ಹೃದಯಾಘಾತಕ್ಕೆ ಒಳಗಾದರು.
ಜಾಗೃತಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತಾದರೂ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾಳೆ, ಹಲವು ದಿನಗಳಿಂದ ಜಾಗೃತಿಯನ್ನು ದೊಡ್ಡಮ್ಮ ಮಲ್ಲಿಕಾ ಅವರೇ ಆರೈಕೆ ಮಾಡುತ್ತಿದ್ದರು. ದೊಡ್ಡಮ್ಮನ ಸಾವಿನ ಸುದ್ದಿ ಜಾಗೃತಿಗೆ ಆಘಾತ ಉಂಟು ಮಾಡಿದ್ದು, ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾಳೆ ಎಂದು ಕುಟುಂಬಸ್ಥರು ಹೇಳಿದ್ದಾರೆ.