ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರ ನಡುವೆ ಗಲಾಟೆ, ಹಲ್ಲೆ: ಮಾಜಿ ಶಾಸಕ ಸುರೇಶ್​ ಗೌಡರ ಶಿಷ್ಯನ ವಿರುದ್ಧ ಕೇಸ್​

suresh gowda
Published on

ತುಮಕೂರು: ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಸಾಮಾಜಿಕ ಜಾಲತಾಣ ವಿಭಾಗದ ಕಾರ್ಯಕರ್ತನ ಮೇಲೆ ಮಾಜಿ ಜಿಲ್ಲಾಧ್ಯಕ್ಷ ಬಿ.ಸುರೇಶ್​ಗೌಡರ ಬೆಂಬಲಿಗನೊಬ್ಬ ತೀವ್ರ ಹಲ್ಲೆ ನಡೆಸಿರುವ ಪ್ರಕರಣ ಹೊಸ ಬಡಾವಣೆ ಠಾಣೆ ಮೆಟ್ಟಿಲೇರಿದೆ.

ಮಂಗಳವಾರ ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸಭೆ ಹಿನ್ನೆಲೆಯಲ್ಲಿ ಪಕ್ಷದ ಹಿರಿಯ ಮುಖಂಡರು ಭಾಗವಹಿಸಿದ್ದ ಸಂದರ್ಭದಲ್ಲಿಯೇ ಕಾರ್ಯಕರ್ತರ ನಡುವೆ ಗಲಾಟೆಯಾಗಿದೆ. ಕ್ಯಾತಸಂದ್ರದ ಬಿಜೆಪಿ ಕಾರ್ಯಕರ್ತ ಕಾಂತರಾಜು, ಸಾಮಾಜಿಕ ಜಾಲತಾಣದ ಪ್ರಚಾರದಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿ ವಿಭಾಗದ ಸಂಚಾಲಕ ವಿನಯ ಅದ್ವೈತ್​​ ಮೇಲೆ ತೀವ್ರ ಹಲ್ಲೆ ನಡೆಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವ ಆರಗ ಜ್ಞಾನೇಂದ್ರ ಜಿಲ್ಲೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಭೇಟಿಯಾಗಿದ್ದ ತುಮಕೂರು ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕ ಬಿ.ಸುರೇಶ್​ಗೌಡ ಅವರ ಹೆಸರನ್ನು ಸಾಮಾಜಿಕ ಜಾಲತಾಣದ ಪ್ರಚಾರದಲ್ಲಿ ಬಳಸಿಲ್ಲ ಎಂಬ ಕಾರಣಕ್ಕೆ ಅದ್ವೈತ್​ ಮೇಲೆ ಹಲ್ಲೆ ನಡೆದಿದೆ.

ಶಿಸ್ತಿನ ಪಕ್ಷದ ಯುವ ಕಾರ್ಯಕರ್ತರು ಪಕ್ಷದ ಕಚೇರಿಯಲ್ಲಿಯೇ ಬಡಿದಾಡಿಕೊಂಡು ಠಾಣೆಯಲ್ಲಿ ದೂರು ದಾಖಲಿಸಿರುವುದು ಪಕ್ಷದ ಮುಖಂಡರ ನಡುವೆಯೇ ಮುಸುಕಿನ ಗುದ್ದಾಟಕ್ಕೂ ಕಾರಣವಾಗಿದೆ. ಹೊಸ ಬಡಾವಣೆ ಠಾಣೆಯಲ್ಲಿ ಮಂಗಳವಾರ ಸಂಜೆ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net