ಎಂಪಿ ಚುನಾವಣೆಗೆ ಬಿಂಬಿಸುವ ಕುತಂತ್ರ

abbayya prasad
Published on

ಹುಬ್ಬಳ್ಳಿ: ಕರಸೇವಕ ಶ್ರೀಕಾಂತ ಪೂಜಾರ ಬಂಧನ ವಿಷಯವನ್ನು ಬಿಜೆಪಿಯವರನ್ನು ಭಿನ್ನವಾಗಿ ತೆಗೆದುಕೊಂಡು ಹೊರಟಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಗೆ ಇದನ್ನೇ ಬಿಂಬಿಸುವ ಕುತಂತ್ರಗಾರಿಕೆ ಮಾಡುತ್ತಿದೆ ಎಂದು ಶಾಸಕ ಪ್ರಸಾದ ಅಬ್ಬಯ್ಯ ಆರೋಪಿಸಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈಕೋರ್ಟ್ ಆದೇಶದ ಮೇರೆಗೆ ಪೋಲಿಸರು ಎಲ್ಪಿಸಿ ಕೇಸ್‌ಗಳನ್ನು ವಿಲೇವಾರಿ ಮಾಡುವ ಕೆಲಸ ಮಾಡಿದ್ದಾರೆ. ಹೀಗಾಗಿ ಯಾವ ಕಾರಣಕ್ಕೂ ಹುಬ್ಬಳ್ಳಿ ಶಹರ ಠಾಣೆ ಪೊಲೀಸ್ ಇನ್‌ಸ್ಪೆಕ್ಟರ್ ಅವರನ್ನು ಅಮಾನತುಗೊಳಿಸುವ ಮಾತೇ ಇಲ್ಲ ಎಂದರು.
ಇನ್‌ಸ್ಪೆಕ್ಟರ್ ಎಂ.ಎಂ. ತಹಸೀಲ್ದಾರ್ ಖಡಕ್ ಅಧಿಕಾರಿ. ರೌಡಿಸಂ ವಿರುದ್ಧ ದಕ್ಷತೆ ತೋರಿದ್ದಾರೆ. ಅವರೊಬ್ಬ ಜಾತ್ಯತೀತ ಅಧಿಕಾರಿ. ಈ ಹಿಂದೆ ಹುಕ್ಕೇರಿ ಠಾಣೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಧಾರ್ಮಿಕ ಮನೋಭಾವ ಮೆರೆದಿದ್ದಾರೆ. ಇದನ್ನು ನೋಡಿಯಾದರೂ ಬಿಜೆಪಿಯವರಿಗೆ ನಾಚಿಕೆ ಆಗಬೇಕು ಎಂದು ಮೂದಲಿಸಿದರು.
ಇಂಥ ಅಧಿಕಾರಿ ವಿರುದ್ಧ ಬಿಜೆಪಿಯವರು ಸುಖಾಸುಮ್ಮನೆ ಮುಗಿ ಬೀಳುತ್ತಿದ್ದಾರೆ. ಅವರನ್ನು ಕಡ್ಡಾಯ ರಜೆ ಮೇಲೆ ಕಳಿಸಿಲ್ಲ. ವೈಯಕ್ತಿಕ ಕಾರಣಕ್ಕೆ ರಜೆ ತೆಗೆದುಕೊಂಡಿದ್ದಾರೆ. ಸರ್ಕಾರ ಯಾವುದೇ ರೀತಿಯ ರಜೆ ಕೊಟ್ಟಿಲ್ಲ. ನಿರ್ದೇಶನವನ್ನೂ ನೀಡಿಲ್ಲ ಎಂದರು.
ಶ್ರೀಕಾಂತ ಪೂಜಾರ ಮೇಲೆ 16 ಪ್ರಕರಣಗಳಿವೆ. ಅಂಥವರ ಪರ ಬಿಜೆಪಿ ಹೋರಾಟ ಮಾಡುವುದು ಎಷ್ಟರ ಮಟ್ಟಿಗೆ ಸರಿ? ಇದರಿಂದ ಬಿಜೆಪಿಯ ತತ್ವ-ಸಿದ್ಧಾಂತ ಏನೆಂಬುದು ಗೊತ್ತಾಗುತ್ತದೆ. ರೌಡಿಶೀಟರ್‌ಗಳು ತಮ್ಮ ಪಕ್ಷದ ಪಿಲ್ಲರ್‌ಗಳೆಂದು ಒಪ್ಪಿಕೊಳ್ಳಲಿ. ನಾವು ಅವರ ಹೋರಾಟವನ್ನು ಒಪ್ಪಿಕೊಳ್ಳುತ್ತೇವೆ ಎಂದು ಸವಾಲು ಹಾಕಿದರು.
ಬಿಜೆಪಿಯವರ ಗೊಡ್ಡು ಬೆದರಿಕೆಗೆ ಹೆದರುವ ಪ್ರಶ್ನೆಯಿಲ್ಲ. ಇದು ಹೀಗೆ ಮುಂದುವರಿದರೆ ನಾವು ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ. ಯಾವುದೇ ಕಾರಣಕ್ಕೂ ಬಿಜೆಪಿಯ ಕುತಂತ್ರ ನಾವು ಒಪ್ಪಿಕೊಳ್ಳುವುದಿಲ್ಲ ಎಂದು ಅಬ್ಬಯ್ಯ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net