ದಸಂಸ ವತಿಯಿಂದ ಶಿಕ್ಷಕರಿಗೆ ಸನ್ಮಾನ

22adarshkdga5
Published on

ಮಡಿಕೇರಿ: ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಗಾಳಿಬೀಡು ಸರ್ಕಾರಿ ಪ್ರೌಢಶಾಲೆಯಲ್ಲಿ ೨೦೨೨-೨೩ನೇ ಸಾಲಿನಲ್ಲಿ ಶೇ.೧೦೦ ಫಲಿತಾಂಶ ಬರಲು ಕಾರಣರಾದ ಶಾಲೆಯ ಶಿಕ್ಷಕರನನ್ನು ಸನ್ಮಾನಿಸಲಾಯಿತು.


ಶಾಲಾ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮವನ್ನು ಸಮಾಜಸೇವಕ ವಾಸುದೇವ್‌ರವರು ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬರು ಉತ್ತಮ ನಾಗರೀಕರಾಗುವುದನ್ನು ಮುಖ್ಯವಾದ ಗುರಿಯನ್ನಾಗಿಸಿಕೊಳ್ಳಬೇಕು. ಮಾನಸಿಕ, ದೈಹಿಕ ಹಾಗು ವ್ಯಕ್ತಿತ್ವದಿಂದ ಉತ್ತಮ ಮಾನವನಾಗಿ ಬದುಕುವುದನ್ನು ಕಲಿಯಬೇಕು. ಸನ್ಮಾನದಿಂದ ಸಿಕ್ಕ ಗೌರವವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.


ಡಿ.ಎಸ್.ಎಸ್ ಜಿಲ್ಲಾ ಸಂಚಾಲಕ ಎಚ್.ಎಲ್.ದಿವಾಕರ್ ಮಾತನಾಡಿ, ಮತ್ತಷ್ಟು ಸಾಧನೆ ಮಾಡಲಿ ಎಂಬ ಉದ್ದೇಶದಿಂದ ದಲಿತ ಸಂಘರ್ಷ ಕಳೆದ ಒಂದು ದಶಕದಿಂದ ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಗುತ್ತಿದೆ. ಸನ್ಮಾನದಿಂದ ಸ್ಪೂರ್ತಿ ಪಡೆಯುವ ವಿದ್ಯಾರ್ಥಿಗಳು ತಾವೂ ಹೆಚ್ಚಿನ ಸಾಧನೆ ತೋರಲು ಪ್ರಯತ್ನ ಪಡುತ್ತಾರೆ. ವಿದ್ಯಾರ್ಥಿಗಳು ದೇಶದ ಶಕ್ತಿ ಅವರನ್ನು ಚಿಕ್ಕಂದಿನಿಂದಲೇ ಜಾಗೃತಗೊಳಿಸಬೇಕಿದೆ ಎಂದರು.


ಪ್ರಮುಖರಾದ ಹಂಸ ಮಾತನಾಡಿ, ವಿದ್ಯಾರ್ಥಿಗಳನ್ನು ಮುನ್ನಲೆಗೆ ತರುವಂತಹ ಶಿಕ್ಷಕರಿಗೆ ಸನ್ಮಾನ ಹಾಗೂ ಮಕ್ಕಳಿಗೆ ಸನ್ಮಾನ ನೀಡುವುದು ಶ್ಲಾಘನೀಯ. ಮಕ್ಕಳು ಹೆಚ್ಚಾಗಿ ಪುಸ್ತಕ ಓದುವುದನ್ನು ರೂಢಿಸಿಕೊಳ್ಳಬೇಕು. ಇದು ಜ್ಞಾನಾರ್ಜನೆಗೆ ಸಹಕಾರಿಯಾಗಲಿದೆ. ಅಕ್ಷರದ ಅರಿವು ಮೂಡಿಸುವುದು ಸಮಾಜದಲ್ಲಿ ಬದುಕಲು ನೆರವಾಗುತ್ತದೆ ಎಂದರು.


ಕಾರ್ಯಕ್ರಮದಲ್ಲಿ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು. ವೇದಿಕೆಯಲ್ಲಿ ಮುಖ್ಯ ಶಿಕ್ಷಕಿ ದೇವಮ್ಮ, ತಾಲೂಕು ಸಂಚಾಲಕ ದೀಪಕ್ ಪೊನ್ನಪ್ಪ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು, ಶಿಕ್ಷಕರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net