

ಮೈಸೂರು: ಶ್ರೀಬಸವೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನದಿಂದ ಸೋಮವಾರ ಮಾಜಿ ಸಚಿವ ವಿ.ಶ್ರೀನಿವಾಸಪ್ರಸಾದ್ ಅವರ ನಿಧನಕ್ಕೆ ಶ್ರದ್ಧ್ದಾಂಜಲಿ ಸಲ್ಲಿಸಲಾಯಿತು.
ಕೃಷ್ಣಮೂರ್ತಿಪುರಂನಲ್ಲಿರುವ ನಮನ ಕಲಾಮಂಟಪದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನುಡಿ ನಮನ ಸಲ್ಲಿಸಿದ ಲೇಖಕ ಬನ್ನೂರು ಕೆ.ರಾಜು, ದಲಿತರು, ಶೋಷಿತರನ್ನು ತಾವು ಉದ್ಧಾರಮಾಡುವುದಾಗಿ ಅಂಬೇಡ್ಕರ್ ಹೆಸರು ಹೇಳಿಕೊಂಡು ಸ್ವಾರ್ಥ ರಾಜಕಾರಣ ಮಾಡುತ್ತಿರುವ ಕೆಲವು ರಾಜಕಾರಣಿಗಳಿಗೆ ಪ್ರಸಾದ್ ಅವರು ಸಿಂಹ ಸ್ವಪ್ನವಾಗಿದ್ದರಷ್ಟೇ ಅಲ್ಲದೆ ದಲಿತಪರ ಕಾಳಜಿಯ ಅಭಿವೃದ್ಧಿಯಿಂದ ಇತರರಿಗೆ ಮಾದರಿಯಾಗಿದ್ದರು ಎಂದು ಬಣ್ಣಿಸಿದರು.
ಅಂಬೇಡ್ಕರ್ ಅವರ ಆದರ್ಶವನ್ನು ತಮ್ಮ ಎದೆಯೊಳಕ್ಕೆ ಇಳಿಸಿಕೊಂಡು ಬಿಟ್ಟಿದ್ದರು. ಶೋಷಿತರ ಬದುಕನ್ನು ಪಾವನಗೊಳಿಸಿದ ಪುಣ್ಯಾತ್ಮ ಬಾಬಾ ಸಾಹೇಬರ ಕಷ್ಟಕರ ಬದುಕೇ ನಮಗಿಂದು ಸುಖಕರವಾಗಿದೆ ಎಂದು ತಾವು ಬದುಕಿರುವ ತನಕವೂ ಹೇಳುತ್ತಾ ಪ್ರತಿಯೊಬ್ಬರೂ ಅಂಬೇಡ್ಕರ್ ಅವರನ್ನು ಆರಾಧಿಸುವುದಕ್ಕಿಂತ ಹೆಚ್ಚಾಗಿ ಅವರ ತತ್ವಾದರ್ಶಗಳನ್ನು ಅನುಸರಿಸಬೇಕೆಂದು ಶೋಷಿತ ಸಮುದಾಯದಲ್ಲಿ ಜಾಗೃತಿಯ ದೀಪ ಹಚ್ಚಿಟ್ಟವರು ಎಂದು ಹೇಳಿದರು.
ಪ್ರಸಾದ್ ಎಂದರೆ ಸ್ವಾಭಿಮಾನದ ಪ್ರತೀಕ. ಅವರು ಸ್ವಾಭಿಮಾನವನ್ನು ಬಿಟ್ಟು ಬಾಲ ಬುಡುಕ ರಾಜಕಾರಣವನ್ನು ಮಾಡಿದ್ದರೆ ಎಂದೋ ಈ ರಾಜ್ಯದ ಮುಖ್ಯಮಂತ್ರಿ ಆಗಿರುತ್ತಿದ್ದರು. ಆದರೆ ಅದು ಅವರಿಗೆ ಒಗ್ಗದ ವಿಷಯವಾಗಿತ್ತು. ತಮ್ಮಿಡೀ ಜೀವನದಲ್ಲಿ ಯಾರನ್ನೂ ಹೆದರಿಸಲಿಲ್ಲ. ಹಾಗೆಯೇ ಯಾರಿಗೂ ಹೆದರಲಿಲ್ಲ. ತಮ್ಮ ಜನೋಪಯೋಗಿ ಗುಣದಿಂದ ದಲಿತರು ಮಾತ್ರವಲ್ಲದೆ ದಲಿತೇತರರಾದ ಪ್ರತಿಯೊಂದು ವರ್ಗವನ್ನೂ ಪ್ರೀತಿಯಿಂದ ಗೆದ್ದರು. ರಾಜಕಾರಣಿಗಳಲ್ಲೇ ಅವರ ವ್ಯಕ್ತಿತ್ವ ವಿಶಿಷ್ಟವಾದದ್ದು ಎಂದು ಹೇಳಿದರು.
ಸಂಸ್ಕೃತಿ ಚಿಂತಕ ಡಾ.ಕೆ. ರಘುರಾಂ ವಾಜಪೇಯಿ ಅವರು ಶ್ರೀನಿವಾಸ್ ಪ್ರಸಾದ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಐವತ್ತು ವರ್ಷಗಳ ರಾಜಕೀಯ ಬದುಕು ಮತ್ತು ಸಾಧನೆ ಹಾಗೂ ಸಿದ್ಧಿ ಕುರಿತಂತೆ ಸುದೀರ್ಘವಾಗಿ ಮಾತನಾಡಿದರು. ಶ್ರೀಬಸವೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಬಸವ ರಾಜೇಂದ್ರಸ್ವಾಮಿ, ಲೇಖಕಿ ಲೀಲಾ ಪ್ರಕಾಶ್, ಬಿಜೆಪಿಯ ಮಹಿಳಾ ಘಟಕದ ಅಧ್ಯಕ್ಷೆ ರೇಣುಕಾ ರಾಜು ಮಾತನಾಡಿದರು. ಯುವ ನಟ ಸುಪ್ರೀತ್, ಸಾಮಾಜಿಕ ಕಾರ್ಯಕರ್ತ ದೊರೆಸ್ವಾಮಿ, ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ಇತರರು ಇದ್ದರು.