ಅರಕಲಗೂಡು: ತಾಲೂಕಿನ ದೊಡ್ಡಮಗ್ಗೆಯ ಪ್ರಗತಿಪರ ಕೃಷಿಕ ಎಂ.ಸಿ.ರಂಗಸ್ವಾಮಿ ಅವರಿಗೆ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿರುವ ಹಿನ್ನೆಲೆಯಲ್ಲಿ ಮಾ.15ರಂದು ಪಟ್ಟಣದಲ್ಲಿ ನಾಗರಿಕ ಸನ್ಮಾನ ಹಮ್ಮಿಕೊಳ್ಳಲಾಗಿದೆ ಎಂದು ರೈತಪರ ನಾಗರಿಕ ವೇದಿಕೆ ಮುಖಂಡ ಕೆ.ಟಿ. ರವೀಂದ್ರ ತಿಳಿಸಿದರು.
ರಂಗಸ್ವಾಮಿ ಯವರು ವಿವಿಧ ಕೃಷಿಗಳನ್ನು ಕೈಗೊಳ್ಳುವ ಮೂಲಕ ತಾಲೂಕಿನಲ್ಲಿ ಉತ್ತಮ ಕೃಷಿಕರಾಗಿ ಗುರುತಿಸಿಕೊಂಡಿದ್ದಾರೆ. ಇವರ ಕೃಷಿ ಸಾಧನೆಯನ್ನು ಗುರುತಿಸಿ ಇತ್ತೀಚೆಗೆ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪ್ರಶಸ್ತಿ ಪ್ರದಾನ ಮಾಡಿದೆ. ಈ ಹಿನ್ನೆಲೆಯಲ್ಲಿ ರೈತಪರ ನಾಗರಿಕ ವೇದಿಕೆ, ಅಭಿಮಾನಿಗಳು, ಸ್ನೇಹಿತರು, ಆಪ್ತರ ಬಳಗ ಅವರಿಗೆ ನಾಗರಿಕ ಸನ್ಮಾನ ಹಮ್ಮಿಕೊಂಡಿರುವುದಾಗಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಶುಕ್ರವಾರ ಬೆಳಗ್ಗೆ 10 ಗಂಟೆಗೆ ಲಕ್ಷ್ಮೀ ಕಾಂಪ್ಲೆಕ್ಸ್ ಆವರಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಡಾ.ಎಸ್.ರಾಜೇಂದ್ರ ಪ್ರಸಾದ್, ಡಾ ಕೆ.ನಾರಾಯಣಗೌಡ, ನಿವೃತ್ತ ಹಿರಿಯ ವಿಜ್ಞಾನಿ ಡಾ.ವಿ.ನಾರಾಯಣಸ್ವಾಮಿ, ನಿವೃತ್ತ ಪ್ರಾಂಶುಪಾಲ ಡಾ.ವಿ.ಮಾಯಣ್ಣ ಪಾಲ್ಗೊಳ್ಳಲಿದ್ದಾರೆ ಎಂದರು. ಮುಖಂಡರಾದ ಜಮೀರ್, ಬೆಳಗುಲಿ ರಾಮೇಗೌಡ, ಕಾಂತರಾಜ್, ಹರೀಶ್, ಜಮೀರ್ ಇದ್ದರು.