ಮಂಗಳೂರು: ಅಂತಾರಾಷ್ಟ್ರೀಯ ಯೋಗ ದಿನಾಚರಣೆಯು ಭಾರತದ ಸಾಂಸ್ಕೃತಿಕ ಪರಂಪರೆ ಮತ್ತು ಪ್ರಾಚೀನ ಜೀವನ ಶೈಲಿಗೆ ಜಾಗತಿಕ ಮಟ್ಟದಲ್ಲಿ ಸಿಕ್ಕ ಗೌರವವಾಗಿದೆ ಎಂದು ಲೋಕಸಭಾ ಸದಸ್ಯ ಕ್ಯಾ.ಬ್ರಿಜೇಶ್ ಚೌಟ ಹೇಳಿದ್ದಾರೆ.
ಅವರು ಪುರಭವನದಲ್ಲಿ ಭಾನುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆಯುಷ್ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾದ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಆರೋಗ್ಯಯುತ ಜೀವನವನ್ನು ಹೇಗೆ ಪಡೆಯಬೇಕು ಎಂಬುದನ್ನು ಭಾರತವು ಜಗತ್ತಿಗೆ ಕಲಿಸಿದೆ. ಇಂದಿನ ಜಾಗತಿಕ ಪರಿಸ್ಥಿತಿಯನ್ನು ಅವಲೋಕಿಸಿದಾಗ ಯೋಗದ ಮಹತ್ವವು ಎಷ್ಟು ಅಗತ್ಯವಾಗಿದೆ ಎಂದು ತಿಳಿಯುತ್ತದೆ ಎಂದವರು ಹೇಳಿದರು.
ಶಾಸಕ ವೇದವ್ಯಾಸ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧಿಕಾರಿ ದರ್ಶನ್ ಎಚ್.ವಿ , ಜಿಲ್ಲಾ ಸರ್ಜನ್ ಡಾ.ಶಿವಪ್ರಕಾಶ್, ಉಪವಿಭಾಗಾಧಿಕಾರಿ ಮೀನಾಕ್ಷಿ ಆರ್ಯ, ಡಿಸಿಪಿ ರವಿಶಂಕರ್, ಎ ಎಸ್ ಪಿ ಅನಿಲ್ ಕುಮಾರ್, ಬ್ರಹ್ಮಕುಮಾರಿ ಅಂಬಿಕಾ ಉಪಸ್ಥಿತರಿದ್ದರು.
ಯೋಗದಲ್ಲಿ ವಿಶ್ವ ದಾಖಲೆ ಮಾಡಿದ ಕಡಬ ತಾಲೂಕಿನ ಏನಕಲ್ಲು ನಿವಾಸಿ 6 ನೇ ತರಗತಿ ವಿದ್ಯಾರ್ಥಿ ಅಕ್ಷಯ ಬಿ.ಎಂ. ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಜಿಲ್ಲಾ ಆಯುಷ್ ಅಧಿಕಾರಿ ಡಾ.ಮಣಿಕರ್ಣಿಕಾ ಸ್ವಾಗತಿಸಿದರು.
ನಂತರ ಯೋಗ ಗುರು ಗೋಪಾಲಕೃಷ್ಣ ದೇಲಂಪಾಡಿ ಅವರ ನೇತೃತ್ವದಲ್ಲಿ ಸಾಮೂಹಿಕ ಯೋಗ ಕಾರ್ಯಕ್ರಮ ನಡೆಯಿತು.