

ಶಿಕಾರಿಪುರ: ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರಿಂದ ಉದ್ಘಾಟನೆಗೊಂಡ ಪದವೀಧರರ ಸಹಕಾರ ಸಂಘ ಇಂದು ಸ್ವಂತ ಕಟ್ಟಡ ಹೊಂದಿ, ಆರ್ಥಿಕವಾಗಿ ಸಧೃಢವಾಗಿದೆ ಎಂದು ಸಂಘದ ಅಧ್ಯಕ್ಷ ಜಿ.ರಾಜಶೇಖರ ಹೇಳಿದರು.
ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಪದವೀಧರ ಸಹಕಾರ ಸಂಘದ 15ನೇ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ, ಸಂಘದಲ್ಲಿ ಮೊದಲು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡಲು ಆರ್ಥಿಕತೆಯ ಕೊರತೆಯಿತ್ತು. ಆದರೆ ಈಗ ಪರಿಸ್ಥಿತಿ ಆ ರೀತಿಯಲ್ಲಿ ಇಲ್ಲ. ದಶಕದಿಂದ ನಿರಂತರವಾಗಿ ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ ಎಂದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ಡಿ.ಭೂಕಾಂತ್ ಮಾತನಾಡಿ, ಸಹಕಾರ ಕ್ಷೇತ್ರ ಸಾಗರ ಇದ್ದಂತೆ. ಇದು ಅನಂತ. ಶಿಕಾರಿಪುರ ಕೂಡ ಸಹಕಾರಿಗಳ ತವರಾಗಿದೆ. ಪದವೀಧರ ಸಹಕಾರ ಸಂಘ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಆರ್ಥಿಕ ಸಬಲತೆ ಇದ್ದರೆ ಮಾತ್ರ ಸಂಘಗಳು ಬಹುಕಾಲ ಜೀವಂತವಾಗಿರಬಲ್ಲವು ಎಂದು ಹೇಳಿದರು.
ಸಂಘದ ಉಪಾಧ್ಯಕ್ಷ ಎಂ.ಜಿ.ಪ್ರಕಾಶ್, ಕಾರ್ಯದರ್ಶಿ ರುದ್ರಪ್ಪ, ಪ್ರಮುಖರಾದ ಆರ್.ಎಂ.ಕುಬೇರಪ್ಪ, ಮಂಜುನಾಥ್, ಸುಧೀರ್ ಮಾರವಳ್ಳಿ, ಸಿದ್ದೇಶಪ್ಪ, ಚಂದ್ರಪ್ಪ, ಮೀನಾಕ್ಷಮ್ಮ, ರಾಜೀವ್, ನಿರಂಜನ್, ರಘು, ಮೈಲಾರಪ್ಪ ಇದ್ದರು.